ಎರಡೇ ವರ್ಷದಲ್ಲಿ ಕಟ್ಟಡ ಶಿಥಿಲ!

14 NRD-1A
Published on

ನರಗುಂದ: ಪಟ್ಟಣದಲ್ಲಿ ಕೇಂದ್ರ ಉಗ್ರಾಣ ನಿಗಮದ (ಸೆಂಟ್ರಲ್ ವೇರ್ ಹೌಸ್) ಆಡಳಿತ ಮಂಡಳಿ ಕಚೇರಿ ಕಟ್ಟಡ ನಿರ್ವಣವಾಗಿ ಎರಡೇ ವರ್ಷಗಳಾಗಿವೆ. ಆದರೆ, ಈಗಾಗಲೇ ಈ ಕಟ್ಟಡ ಸಂಪೂರ್ಣವಾಗಿ ಬಿರುಕು ಬಿಟ್ಟಿದೆ!

ಇಲ್ಲಿ ನಿತ್ಯ ಕೆಲಸಕ್ಕೆ ಬರಬೇಕಾದ ಅಧಿಕಾರಿಗಳು ಹಾಗೂ ಸಿಬ್ಬಂದಿಯು ಕಟ್ಟಡ ಕುಸಿಯುವ ಭೀತಿಯಿಂದಾಗಿ ಕಚೇರಿಯನ್ನೇ ತೊರೆದಿದ್ದಾರೆ!!

ತಾಲೂಕಿನ ರೈತರು ಹಾಗೂ ವರ್ತಕರ ವಿವಿಧ ಆಹಾರ ಧಾನ್ಯಗಳ ಸಂಗ್ರಹಕ್ಕಾಗಿ ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ 2018ರಲ್ಲಿ ಕೇಂದ್ರ ಉಗ್ರಾಣ ನಿಗಮ (ಸೆಂಟ್ರಲ್ ವೇರ್ ಹೌಸ್) ಅನ್ನು ಕೋಟ್ಯಂತರ ರೂ.ಗಳ ವೆಚ್ಚದಲ್ಲಿ ನಿರ್ವಿುಸಲಾಗಿದೆ. ಇದೇ ವೇಳೆ ಪ್ರತ್ಯೇಕ 15 ಲಕ್ಷ ರೂ.ಗಳ ವೆಚ್ಚದಲ್ಲಿ ಮ್ಯಾನೇಜರ್ ಚೇಂಬರ್, ಕ್ಲರ್ಕ್, ಸಿಬ್ಬಂದಿ ಹಾಗೂ ಟೆಕ್ನಿಕಲ್ ಕೊಠಡಿ (ತಾಂತ್ರಿಕ ರೂಂ) ಮತ್ತು ಹಮಾಲರ ಉಪಯೋಗಕ್ಕಾಗಿ ವಿಶ್ರಾಂತಿ ಕೊಠಡಿ, ನಾಲ್ಕು ಪ್ರತ್ಯೇಕ ಶೌಚಗೃಹಗಳನ್ನು ನಿರ್ವಿುಸಲಾಗಿದೆ. ಉಗ್ರಾಣ ನಿಗಮದ ಇಂಜಿನಿಯರ್​ಗಳು ಮಾಡಿರುವ ಎಡವಟ್ಟು ಹಾಗೂ ಗುತ್ತಿಗೆದಾರರ ಪ್ರಮಾದದಿಂದಾಗಿ ಈ ಕಟ್ಟಡ ಕಟ್ಟಿದ ಎರಡೇ ವರ್ಷದಲ್ಲಿ ಸಂಪೂರ್ಣವಾಗಿ ಬಿರುಕು ಬಿಟ್ಟು ಬೀಳುವ ಹಂತದಲ್ಲಿದೆ. ಹೀಗಾಗಿ, ಇಲ್ಲಿ ಪ್ರತಿನಿತ್ಯ ಕರ್ತವ್ಯ ನಿರ್ವಹಿಸಬೇಕಿದ್ದ ಕೇಂದ್ರ ಉಗ್ರಾಣ ನಿಗಮದ ವ್ಯವಸ್ಥಾಪಕ ಎ.ವೈ. ಕುಂಗಾರೆ, ಇತರೆ ಸಿಬ್ಬಂದಿ ಹಾಗೂ ಹಮಾಲರು ಜೀವ ಭಯದಿಂದ ಕಚೇರಿಯ ಕಟ್ಟಡ ತೊರೆದಿದ್ದಾರೆ. ಇದರಿಂದಾಗಿ ರೈತರು, ವ್ಯಾಪಾರಸ್ಥರು ಕಿರಿಕಿರಿ ಅನುಭವಿಸುವಂತಾಗಿದೆ.

ನರಗುಂದದಲ್ಲಿರುವ ಕೇಂದ್ರ ಉಗ್ರಾಣ ನಿಗಮದ ಆಡಳಿತ ಮಂಡಳಿ ಕಚೇರಿಗೆ ಪ್ರತಿನಿತ್ಯ ನೂರಾರು ರೈತರು, ಹಮಾಲರು, ವರ್ತಕರು ಆಗಮಿಸುತ್ತಾರೆ. ಕಟ್ಟಡ ಕುಸಿದು ಬೀಳುವ ಹಂತ ತಲುಪಿದೆ. ಹೀಗಾಗಿ, ಹೊಸ ಕಟ್ಟಡ ನಿರ್ವಿುಸಿಕೊಡುವಂತೆ ನಿಗಮದ ಪ್ರಾದೇಶಿಕ ವ್ಯವಸ್ಥಾಪಕ ಶಿವಾನಂದ ರಾಯ್ ಹಾಗೂ ಸಹಾಯಕ ಇಂಜಿನಿಯರ್​ಗಳಿಗೆ ನಾಲ್ಕೈದು ಬಾರಿ ಪತ್ರ ಬರೆದು ಮನವಿ ಮಾಡಿದ್ದೇನೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ.| ಎ.ವೈ. ಕುಂಗಾರೆ. ಉಗ್ರಾಣ ನಿಗಮದ ವ್ಯವಸ್ಥಾಪಕ, ನರಗುಂದ

ಸರ್ಕಾರ ಸೆಂಟ್ರಲ್ ವೇರ್ ಹೌಸ್​ಗೆ ಬರುವ ಹಮಾಲರು, ಲಾರಿ ಚಾಲಕ, ಕ್ಲೀನರ್​ಗಳ ಅನುಕೂಲಕ್ಕಾಗಿ ವಿಶ್ರಾಂತಿ, ಊಟದ ಕೊಠಡಿ, ಶೌಚಗೃಹಗಳನ್ನು ನಿರ್ವಿುಸಿದೆ. ಆದರೆ, ಕಳಪೆ ಕಾಮಗಾರಿಯಿಂದಾಗಿ 15 ಲಕ್ಷ ರೂ. ವೆಚ್ಚದ ಕಟ್ಟಡವೀಗ ಸಂಪೂರ್ಣ ಬಿರುಕು ಬಿಟ್ಟಿದೆ. ಇದು ಜನರ ಜೀವಕ್ಕೆ ಕಂಟಕವಾಗಿ ಪರಿಣಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಈ ಕಟ್ಟಡ ತೆರವುಗೊಳಿಸಬೇಕು. ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.| ಹೆಸರು ಹೇಳಲಿಚ್ಛಿಸದ ಹಮಾಲಿ ಕಾರ್ವಿುಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net