

ಹಾಸನ:ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಚನ್ನರಾಯಪಟ್ಟಣ ತಾಲೂಕು ಶ್ರವಣಬೆಳಗೊಳ ಹೋಬಳಿಯ ಮಂಚೇನಹಳ್ಳಿ ಗ್ರಾಮದ ಹಂಸಿನಿಗೌಡ ತನ್ನ ಅಗಾಧ ಬುದ್ಧಿಶಕ್ತಿಯಿಂದ 3 ವರ್ಷ ತುಂಬುವ ಮೊದಲೇ ಇಂಡಿಯನ್ ಬುಕ್ ಆಫ್ ರೆಕಾರ್ಡ್‌ನಲ್ಲಿ ತನ್ನ ಹೆಸರು ದಾಖಲಿಸಿದ್ದಾಳೆ ಈ ಕಿಶೋರಿ.
ಕಳೆದ ಮೇ 16ರಂದು ತಮ್ಮ ಮಗಳ ಹೆಸರು ಇಂಡಿಯನ್ ಬುಕ್ ಆಫ್ ರೆಕಾರ್ಡ್ ಪುಟ ಸೇರಿರುವುದನ್ನು ಸಂಸ್ಥೆಯವರು ದೃಢ ಪಡಿಸಿದೆ ಎಂದು ಬಾಲಕಿ ತಾಯಿ ನಂದಿನಿ ಹಾಗೂ ತಂದೆ ಮೋಹನ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಮೋಹನ್-ನಂದಿನಿ ದಂಪತಿ ಪುತ್ರಿಯಾದ ಹಂಸಿನಿಹಗೌಡಗೆ ಇನ್ನೂ ಸ್ಪಷ್ಟವಾಗಿ ಮಾತನಾಡಲು ಬರುವುದಿಲ್ಲ. ಆದರೂ ತನ್ನ ಅಗಾಧ ಜ್ಞಾಪಕ ಶಕ್ತಿ ಹಾಗೂ ಬುದ್ಧಿಮತ್ತೆಯಿಂದ 269 ವಿವಿಧ ಚಿತ್ರಗಳು, 20 ವಾಹನಗಳನ್ನು ಲೀಲಾಜಾಲವಾಗಿ ಗುರುತು ಮಾಡುತ್ತಾಳೆ. ಅಷ್ಟೇ ಅಲ್ಲದೆ ಕನ್ನಡ ಸಾಹಿತ್ಯದಲ್ಲಿ ಜ್ಞಾನಪೀಠ ಪ್ರಶಸ್ತಿಗೆ ಭಾಜರಾಗಿರುವ 8 ಸಾಹಿತಿಗಳ ಹೆಸರನ್ನೂ ತನ್ನ ತೊದಲು ನುಡಿಗಳಲ್ಲಿ ಸರಾಗವಾಗಿ ಹೇಳುತ್ತಾಳೆ. ಜತೆಗೆ 10 ರಾಷ್ಟ್ರೀಯ ಚಿಹ್ನೆಗಳು, 12 ಭಾರತೀಯ ಐತಿಹಾಸಿಕ ಸ್ಥಳಗಳು, ದೇಹದ 25 ಭಾಗಗಳು, ಇಂಗ್ಲಿಷ್ ವರ್ಣಮಾಲೆಯ ಪದಗಳು, ಕನ್ನಡ ವರ್ಣಮಾಲೆ (49 ಅಕ್ಷರಗಳು), ವರ್ಷದ ತಿಂಗಳು, 9 ಶ್ಲೋಕಗಳು ಮತ್ತು 7 ಇಂಗ್ಲಿಷ್ ನರ್ಸರಿ ರೈಮ್‌ಗಳನ್ನು ಪಠಿಸುವುದನ್ನು ಅಭ್ಯಾಸ ಮಾಡಿಕೊಂಡಿದ್ದಾಳೆ. ಅಲ್ಲದೆ ಕುದುರೆ, ಕೋಳಿ, ಆನೆ ಹೀಗೆ 10 ಪ್ರಾಣಿಗಳ ಶಬ್ದಗಳನ್ನು ಅನುಕರಿಸುತ್ತಾಳೆ. ಎರಡೂವರೆ ವರ್ಷದಲ್ಲೇ ಇಂಗ್ಲಿಷ್, ಹಿಂದಿ ಮತ್ತು ಕನ್ನಡದಲ್ಲಿ 1 ರಿಂದ 20 ರವರೆಗೆ ಮಗ್ಗಿ ಹೇಳುತ್ತಾಳೆ. ಈಕೆಯ ಅದ್ಭುತ ಸಾಧನೆಯಿಂದ ತನ್ನ ಹೆಸರನ್ನು ಇಂಡಿಯನ್ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲು ಮಾಡಿದ್ದಾರೆ.