ಎರಡು ಹಂತದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಿ

08 Ylb 01
ಯಲಬುರ್ಗಾದ ಬಿಇಒ ಸೋಮಶೇಖರಗೌಡ ಪಾಟೀಲ್‌ಗೆ ಪ್ರೌಢಶಾಲಾ ಸಹಶಿಕ್ಷಕರ ಸಂಘದ ತಾಲೂಕು ಘಟಕದಿಂದ ಮನವಿ ಸಲ್ಲಿಸಲಾಯಿತು. ತಾಲೂಕು ಅಧ್ಯಕ್ಷ ಅಶೋಕ ಮಾಲಿಪಾಟೀಲ್, ಜಿಲ್ಲಾಧ್ಯಕ್ಷ ಸೋಮಶೇಖರ ಹರ್ತಿ, ಕುಕನೂರು ತಾಲೂಕು ಅಧ್ಯಕ್ಷ ಸುರೇಶ ಅಬ್ಬಿಗೇರಿ, ಪದಾಧಿಕಾರಿಗಳಾದ ಶರಣಪ್ಪ ಕೊಪ್ಪದ, ಜಗದೀಶ ಬಳಿಗಾರ, ಹನುಮಂತಪ್ಪ ಹೊಸಳ್ಳಿ, ದ್ಯಾಮಣ್ಣ ಮುಗಳಿ ಇತರರಿದ್ದರು.
Published on

ಯಲಬುರ್ಗಾ: ಪ್ರೌಢಶಾಲಾ ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆ ಮತ್ತು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಘಟಕದಿಂದ ಬಿಇಒ ಸೋಮಶೇಖರಗೌಡ ಪಾಟೀಲ್‌ಗೆ ಶನಿವಾರ ಮನವಿ ಸಲ್ಲಿಸಲಾಯಿತು.

ಘಟಕದ ತಾಲೂಕು ಅಧ್ಯಕ್ಷ ಅಶೋಕ ಮಾಲಿಪಾಟೀಲ್ ಮಾತನಾಡಿ, ಪ್ರೌಢಶಾಲಾ ಶಿಕ್ಷಕ ವರ್ಗ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ವಿವಿಧ ರೀತಿ ಚಟುವಟಿಕೆ ಕೈಗೊಂಡು ಫಲಿತಾಂಶ ಸುಧಾರಣೆಗೆ ಶ್ರಮಿಸುತ್ತಿದೆ.

ಗುಣಾತ್ಮಕ ಶಿಕ್ಷಣ ನೀಡಲು ರಾಜ್ಯ ಹಾಗೂ ಜಿಲ್ಲಾ ಹಂತದ ಅಧಿಕಾರಿಗಳು ಪ್ರತ್ಯೇಕ ಕಾರ್ಯಕ್ರಮ ಅನುಷ್ಠಾನ ಮಾಡಿ, ದಾಖಲೀಕರಣ ಮಾಡಲು ಶಿಕ್ಷಕರ ಮೇಲೆ ಒತ್ತಡ ಹೇರಿದೆ. ರಾಜ್ಯಾದ್ಯಂತ ಏಕರೂಪದ ಕಾರ್ಯಕ್ರಮ ಜಾರಿಗೆ ತರಬೇಕು.

ಎಸ್ಸೆಸ್ಸೆಲ್ಸಿ ಪರೀಕ್ಷಾ ಪದ್ಧತಿಯಲ್ಲಿ 3ಹಂತದ ಪರೀಕ್ಷೆ ಬದಲು ಎರಡು ಹಂತದ ಪರೀಕ್ಷೆ ಆಯೋಜಿಸಬೇಕು. ಸಿಬಿಎಸ್ಸಿ, ಐಸಿಎಸ್ ಪರೀಕ್ಷಾ ಮಾದರಿಯಂತೆ ಆಂತರಿಕ ಅಂಕ ಪರಿಗಣಿಸಿ ಫಲಿತಾಂಶ ನೀಡಬೇಕು. ಎಸ್ಸೆಸ್ಸೆಲ್ಸಿ ಪ್ರಶ್ನೆ ಪತ್ರಿಕೆ ವಿನ್ಯಾಸ ಸರಳೀಕರಣಗೊಳಿಸಬೇಕು.

ಪರೀಕ್ಷೆ ಮತ್ತು ಮೌಲ್ಯಮಾಪನ ಕಾರ್ಯವನ್ನು ಏಪ್ರಿಲ್ 14ರ ಒಳಗಾಗಿ ಪೂರ್ಣಗೊಳಿಸಬೇಕು. ಖಾಸಗಿ ಅನುದಾನಿತ ಶಾಲೆಗಳಲ್ಲಿ 2016ರಿಂದ 2020ರ ವರೆಗಿನ ಖಾಲಿ ಹುದ್ದೆಗಳನ್ನು ತುಂಬಲು ಶೀಘ್ರ ಅನುಮತಿ ನೀಡುವ ಪ್ರಕ್ರಿಯೆ ಪ್ರಾರಂಭಿಸಬೇಕು.

ಕೆಕೆಆರ್‌ಡಿಬಿಯಿಂದ ನಡೆಯುವ ಪ್ರೌಢ ಶಾಲೆ ಸಿಬ್ಬಂದಿಗೆ ನಿಗದಿತ ವೇಳೆಗೆ ವೇತನ ಪಾವತಿಸಬೇಕು. ಉನ್ನತೀಕರಿಸಿದ ಪ್ರೌಢ ಶಾಲೆ ಮತ್ತು ಆರ್‌ಎಂಎಸ್‌ಎ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ನಿಯಮಿತವಾಗಿ ವೇತನ ನೀಡಬೇಕು. ಪ್ರಾಥಮಿಕ ಶಾಲೆಯಿಂದ ಪ್ರೌಢ ಶಾಲೆಗೆ ಬಡ್ತಿ ಪಡೆದ ಶಿಕ್ಷಕರಿಗೆ ವೇತನ ಬಡ್ತಿ ನೀಡಲು ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಬೇಕು.

ಪದವಿ ಪೂರ್ವ ಕಾಲೇಜು ಪ್ರೌಢಶಾಲೆ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿರುವ ಹಿರಿಯ ಶಿಕ್ಷಕರಿಗೆ, ಮುಖ್ಯಶಿಕ್ಷಕರಿಗೆ ನೀಡುವ ಎಲ್ಲ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿದರು. ಘಟಕದ ಜಿಲ್ಲಾಧ್ಯಕ್ಷ ಸೋಮಶೇಖರ ಹರ್ತಿ, ಕುಕನೂರು ತಾಲೂಕು ಅಧ್ಯಕ್ಷ ಸುರೇಶ ಅಬ್ಬಿಗೇರಿ, ಪದಾಧಿಕಾರಿಗಳಾದ ಶರಣಪ್ಪ ಕೊಪ್ಪದ, ಜಗದೀಶ ಬಳಿಗಾರ, ಹನುಮಂತಪ್ಪ ಹೊಸಳ್ಳಿ, ದ್ಯಾಮಣ್ಣ ಮುಗಳಿ, ಹನುಮೇಶ ಕಬ್ಬಿಣದ, ಪ್ರಭುಸ್ವಾಮಿ ಹಿರೇಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net