

ಬಳ್ಳಾರಿ : ರಾಜ್ಯದಲ್ಲಿ ಎರಡು ಸಾವಿರ ಲೈನ್‌ಮೆನ್‌ಗಳ ನೇಮಕಕ್ಕೆ ಇನ್ನು 15 ದಿನಗಳಲ್ಲಿ ಅಧಿಸೂಚನೆ ಹೊರಡಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದರು.
ನಗರದ ಜಿಪಂ ಯ ನಜೀರ್ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಸಾಮಾನ್ಯವಾಗಿ ಲೈನ್‌ಮೆನ್ ಗಳ ನೇಮಕ ವೇಳೆ ಒಂದು ಜಿಲ್ಲೆಯವರು ಇನ್ನೊಂದು ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಿ ಹುದ್ದೆ ಪಡೆಯುತ್ತಾರೆ. ಬಳಿಕ ತಮ್ಮ ಜಿಲ್ಲೆಗೆ ವರ್ಗಾವಣೆ ಮಾಡಿಸಿಕೊಳ್ಳುವರು, ಇದರಿಂದ ಕೆಲವು ಜಿಲ್ಲೆಗಳಲ್ಲಿ ಅದರಲ್ಲೂ ಮುಖ್ಯವಾಗಿ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಲೈನ್ ಮೆನ್‌ಗಳ ಕೊರತೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಎರಡು ಸಾವಿರ ಲೈನ್ ಮೆನ್ ಗಳನ್ನು ನೇಮಕ ಮಾಡಿಕೊಳ್ಳುವ ಸಂದರ್ಭದಲ್ಲಿ ಆಯಾ ಜಿಲ್ಲೆಯವರಿಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ರಾಜ್ಯಾದ್ಯಂತ ಏಕಕಾಲದಲ್ಲಿ ನೇಮಕ ಪ್ರಕ್ರಿಯೆ ನಡೆಸಲಾಗುವುದು. ರಾಜ್ಯದಲ್ಲಿ ಐಪಿ ಸೆಟ್ ಆರ್.ಆರ್. ನಂಬರ್‌ಗೆ ಆಧಾರ್ ಸಂಖ್ಯೆ ಲಿಂಕ್ ಮಾಡುತ್ತಿರುವುದು ದಾಖಲಾತಿಗಾಗಿಯೇ ಹೊರತು ಬೇರೆ ಉದ್ದೇಶವಿಲ್ಲ. ಐಪಿ ಸೆಟ್ ಗಳ ಸಂಖ್ಯೆ ತಿಳಿದುಕೊಂಡು ಸಮರ್ಪಕ ವಿದ್ಯುತ್ ಪೂರೈಕೆಗೆ ಅನುಕೂಲವಾಗುವಂತೆ ಐಪಿ ಸೆಟ್ ಗಳ ಆರ್.ಆರ್.ನಂಬರ್ ಗೆ ಆಧಾರ್ ಸಂಖ್ಯೆ ಜೋಡಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಅಕ್ರಮ ಪಂಪ್ ಸೆಟ್‌ಗಳಿಂದಾಗಿ ಸಕ್ರಮ ಪಂಪ್ ಸೆಟ್‌ಗಳಿಗೂ ವಿದ್ಯುತ್ ಸಮಸ್ಯೆಯಾಗುತ್ತಿದೆ. ಐಪಿ ಸೆಟ್ ಗಳ ಆರ್.ಆರ್. ನಂಬರ್‌ಗಳಿಗೆ ಆಧಾರ್ ಜೋಡಣೆ ಮಾಡಿದರೆ ಎಷ್ಟು ಪಂಪ್ ಸೆಟ್ ಗಳಿವೆ ಮತ್ತು ಅವುಗಳಿಗೆ ಎಷ್ಟು ವಿದ್ಯುತ್‌ಬೇಕು ಎಂಬ ಸ್ಪಷ್ಟತೆ ಸಿಗುತ್ತದೆ. ಅದಕ್ಕೆ ತಕ್ಕಂತೆ ಸಮರ್ಪಕ ವಿದ್ಯುತ್ ಪೂರೈಸಲು ಅನುಕೂಲವಾಗುತ್ತದೆ . ವಿದ್ಯುತ್ ಟ್ರಾನ್ಸ್‌ಫಾರ್ಮರ್ ಗಳಿಂದ 500 ಮೀ. ವ್ಯಾಪ್ತಿಯಲ್ಲಿ ಬರುವ ಅಕ್ರಮ ಐಪಿ ಸೆಟ್‌ಗಳನ್ನು ಸಕ್ರಮಗೊಳಿಸಲಾಗುವುದು. ಅದಕ್ಕಿಂತ ಹೆಚ್ಚು ಅಂತರವಿರುವ ಕಡೆಗಳಲ್ಲಿ ಕುಸುಮ ಬಿ ಯೋಜನೆಯಡಿ ಸೋಲಾರ್ ಪಂಪ್ ಸೆಟ್‌ಗಳನ್ನು ಒದಗಿಸಲಾಗುವುದು. ಇದಕ್ಕೆ ಕೇಂದ್ರ ಸರ್ಕಾರದಿಂದ ಶೇ. 30 ಮತ್ತು ರಾಜ್ಯ ಸರ್ಕಾರದಿಂದ ಶೇ. 50 ಸಬ್ಸಿಡಿ ನೀಡಲಾಗುತ್ತದೆ ಎಂದರು.
ಎಲ್ಲ ಜಾತಿಯವರು ಇರುವ ಪಕ್ಷ : ಜಾತಿಗೊಂದು ಸಿಎಂ ವಿಚಾರ ಮಾಧ್ಯಮಗಳದ್ದಾಗಿದೆ. ಎಲ್ಲಿ ಜಾತಿ ಜನಾಂಗದವರು ಇರುವ ಪಕ್ಷವೇ ಕಾಂಗ್ರೆಸ್. ಪಕ್ಷವೇ ನಮಗೆ ಕಮ್ಯೂನಿಟಿಯಾಗಿದೆ. ವಾಲ್ಮೀಕಿ ಹಗರಣದಲ್ಲಿ ಸಿಎಂ ಏಕೆ ರಾಜೀನಾಮೆ ಕೊಡಬೇಕು. ರೈಲ್ವೆ ಅಪಘಾತವಾದರೆ ಪ್ರಧಾನಿಮಂತ್ರಿ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು ಅಂದರೆ ಹೇಗೆ ?. ಎಲ್ಲ ಪ್ರಕರಣಗಳನ್ನು ಸಿಬಿಐ ಗೆ ನೀಡಿದರೆ ಹೇಗೆ ?. ರಾಜ್ಯದ ಅಧಿಕಾರಿಗಳು ಸಮರ್ಥರಾಗಿದ್ದಾರೆ. ಉದಾಹರಣೆಗೆ ಡಿಎಸ್ಪಿ ಗಣಪತಿ, ಡಿಸಿ ರವಿ ಆತ್ಮಹತ್ಯೆ ಹಾಗೂ ಉಡುಪಿ ಹತ್ಯೆಯ ಪ್ರಕರಣಗಳು ಸಿಬಿಐಗೆ ವಹಿಸಲಾಯಿತು. ಆ ಪ್ರಕರಣಗಳ ಸಿಬಿಐ ವರದಿ ಬಂದ ಬಳಿಕ ವಿರೋಧ ಪಕ್ಷಗಳು ಏಕೆ ಮಾತನಾಡುತ್ತಿಲ್ಲ. ಎಲ್ಲದಕ್ಕೂ ತಾಳ್ಮೆ ಇರಬೇಕು. ಅಲ್ಲದೇ, ಬಿಜೆಪಿ ಸರ್ಕಾರದಲ್ಲಿ ಎಷ್ಟು ಪ್ರಕರಣಗಳು ಸಿಬಿಐ ವಹಿಸಿದ್ದಾರೆ. ಆದರೆ, ನಮ್ಮ ಸರ್ಕಾರದಲ್ಲಿ ಏಳು ಪ್ರಕರಣಗಳು ಸಿಬಿಐ ನೀಡಲಾಗಿದೆ ಎಂದು ಹೇಳಿದರು.