

ಚಿಕ್ಕಬಳ್ಳಾಪುರ : ನಿವೃತ್ತಿ ಹೊಂದಿದ ಜಿಲ್ಲಾ ಪೊಲೀಸ್ ಇಲಾಖೆ ಶ್ವಾನದಳದ ಎರಡು ನಾಯಿಗಳಿಗೆ ಗುರುವಾರ ಆತ್ಮೀಯವಾಗಿ ಸನ್ಮಾನಿಸಿ, ಬೀಳ್ಕೊಡಲಾಯಿತು. ಜತೆಗೆ 10 ವರ್ಷಗಳಿಂದಲೂ ಉತ್ತಮ ಸೇವೆ ಸಲ್ಲಿಸಿದ ಮೂಕಜೀವಿಗಳ ಬಗ್ಗೆ ಮೆಚ್ಚುಗೆಯೂ ವ್ಯಕ್ತವಾಯಿತು.
ಅಪರಾಧ ಪತ್ತೆ ಶ್ವಾನ ಡೈನಾ ಮತ್ತು ಸ್ಪೋಟಕ ಪತ್ತೆ ಶ್ವಾನ ಡಾಲಿ 2011ರ ಮಾರ್ಚ್ 17ರಿಂದ ಜಿಲ್ಲಾ ಪೊಲೀಸ್ ಇಲಾಖೆಯ ಶ್ವಾನದಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದವು. ಇದೀಗ 10 ವರ್ಷಗಳ ಸುಧೀರ್ಘ ಸೇವೆಯ ಮೂಲಕ ಸೇವೆಯಿಂದ ಬಿಡುಗಡೆಯನ್ನು ಪಡೆದಿವೆ. ತರಬೇತುದಾರ ಶ್ವಾನಗಳ ಪರವಾಗಿ ಪದಕ ಸ್ವೀಕರಿಸಿದರು.
ಜಿಲ್ಲೆಯಲ್ಲಿ ಕೊಲೆ, ಕಳವು, ಬಾಂಬ್ ಪತ್ತೆ ಸೇರಿ ಹಲವು ಅಪರಾಧ ಪ್ರಕರಣಗಳ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸುತ್ತಿದ್ದ ಈ ಶ್ವಾನಗಳು, ಸೂಕ್ಷ್ಮ ಸಾಕ್ಷ್ಯಳನ್ನು ತ್ವರಿತವಾಗಿ ಸಂಗ್ರಹಿಸಿ ಮತ್ತು ಪ್ರಕರಣಗಳನ್ನು ಭೇದಿಸುವಲ್ಲಿ ಪೊಲೀಸರಿಗೆ ಉತ್ತಮ ಸಹಕಾರ ನೀಡಿವೆ. ಅದರಲ್ಲೂ ಚುರುಕಿನ ಕಾರ್ಯ ನಿರ್ವಹಣೆಯ ಮೂಲಕ ಪ್ರಶಂಸೆಗೆ ಪಾತ್ರವಾಗಿದ್ದವು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು. ಇಲಾಖೆ ಸಿಬ್ಬಂದಿ ಮಾದರಿಯಲ್ಲಿ ಶ್ವಾನಗಳಿಗೂ ಆತ್ಮೀಯ ಬೀಳ್ಕೊಡುಗೆ ನೀಡುವ ಕಾರ್ಯಕ್ರಮ ಗಮನ ಸೆಳೆಯಿತು.