ಎರಡು ಶಾಲೆಗಳಿಗೆ ಡಿಡಿಪಿಐ ನೋಟಿಸ್

corona-virous
Published on

ಪಡುಬಿದ್ರಿ: ಕರೊನಾ ಮಾರ್ಗಸೂಚಿ ಉಲ್ಲಂಘಿಸಿರುವ ಕಾರಣ ನೀಡಿ ಪಲಿಮಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಮುದರಂಗಡಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ಹಿರಿಯ ಶಿಕ್ಷಕರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಬುಧವಾರ ನೋಟಿಸ್ ನೀಡಿದೆ.

ಕುಡಿಯುವ ನೀರು ಹಾಗೂ ಶೌಚಗೃಹ ಸಮಸ್ಯೆಗಳ ಕುರಿತು ಪರಿಶೀಲನೆಗಾಗಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಭಟ್ ವೈ. ಮುದರಂಗಡಿ ಹಾಗೂ ಪಲಿಮಾರು ಪದವಿಪೂರ್ವ ಕಾಲೇಜಿಗೆ ಬುಧವಾರ ಭೇಟಿ ನೀಡಿದ್ದರು. ತರಗತಿಗಳಿಗೆ ಭೇಟಿ ನೀಡಿದಾಗ ಅಲ್ಲಿ ವಿದ್ಯಾರ್ಥಿಗಳು ಮಾಸ್ಕ್ ಧರಿಸದ ಕಾರಣಕ್ಕೆ ಸಿಇಒ ನೀಡಿದ ಸೂಚನೆಯಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಂದ ಪಲಿಮಾರು ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಮುದರಂಗಡಿ ಪ್ರೌಢಶಾಲೆ ಹಿರಿಯ ಶಿಕ್ಷಕಿಗೆ ನೋಟಿಸ್ ರವಾನೆಯಾಗಿದೆ.

ಡಿಡಿಪಿಐ ಎಡವಟ್ಟು: ಮುದರಂಗಡಿ ಪದವಿಪೂರ್ವ ಕಾಲೇಜಿಗೆ ಸಿಇಒ ಭೇಟಿ ನೀಡಿದ್ದರೂ, ಪ್ರೌಢಶಾಲೆಗೆ ಆಗಮಿಸಿರಲಿಲ್ಲ. ಆದರೂ ಅಲ್ಲಿನ ಹಿರಿಯ ಶಿಕ್ಷಕಿಗೆ ನೋಟಿಸ್ ನೀಡಿರುವ ಕ್ರಮದಿಂದ ಶಿಕ್ಷಕಿ ಪುಷ್ಪಾವತಿ ಆತಂಕಕ್ಕೀಡಾಗಿದ್ದಾರೆ. ಸಿಇಒ ಪಲಿಮಾರು ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಭೇಟಿ ನೀಡಿದ್ದು, ಪಲಿಮಾರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಬಂದಿರಲಿಲ್ಲ. ಆದರೂ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿಗೆ ನೋಟಿಸ್ ಬಂದಿರುವ ಬಗ್ಗೆ ಶಶಿಕಲಾ ಮಾಹಿತಿ ನೀಡಿದ್ದು, ಶಿಕ್ಷಣ ಇಲಾಖೆ ಎಡವಟ್ಟಿನಿಂದ ಇಲ್ಲಿಗೂ ನೋಟಿಸ್ ರವಾನೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net