ಎರಡು ವರ್ಷಗಳಲ್ಲಿ ಶಾಶ್ವತ ನೀರಾವರಿ ಯೋಜನೆ ಪೂರ್ಣ

17 ckm 3
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ದೇವನೂರು ಕೆರೆಗೆ ಶಾಸಕರಾದ ಎಚ್‌.ಡಿ.ತಮ್ಮಯ್ಯ, ಕೆ.ಎಸ್‌.ಆನಂದ್‌ ಬಾಗಿನ ಅರ್ಪಿಸಿದರು. ಮಹಡಿಮನೆ ಸತೀಶ್‌, ಎಚ್‌.ಪಿ.ಮಂಜೇಗೌಡ, ಶಿವಾನಂದ ಸ್ವಾಮಿ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಭಾರತ ದೇಶದಲ್ಲಿ ವಿವಿಧ ಧರ್ಮಗಳನ್ನುಅನುಸರಿಸಲಾಗುತ್ತದೆ. ಆದರೆ ನಾವೆಲ್ಲರೂ ಭಾರತೀಯರು. ನಮ್ಮದು ಜಾತ್ಯಾತೀತ ರಾಷ್ಟ್ರ ಎಂಬುದು ಹೆಮ್ಮೆಯ ವಿಷಯ ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ದೇವನೂರು ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿ ಹಿಂದೂ ಧರ್ಮದ ಆಚರಣೆಯಲ್ಲಿ ಆಷಾಡ ಮಾಸ ಕಳೆದ ನಂತರ ಶ್ರಾವಣ ಮಾಸ ಪ್ರಾರಂಭವಾಗುತ್ತದೆ. ಶುಭಕಾರ್ಯಗಳನ್ನು ನಡೆಸುವ ಈ ಮಾಸದಲ್ಲಿ ಪೂಜೆ, ಹಬ್ಬಗಳನ್ನು ಮಾಡಲಾಗುತ್ತದೆ. ಇದೇ ಸಂದರ್ಭದಲ್ಲಿ ಬಯಲುಸೀಮೆ ಭಾಗದ ಕೆರೆಗಳನ್ನು ತುಂಬಿಸಿ, ಕೊಡಿ ಹರಿಸಿ, ಗಂಗಾ ಪೂಜೆ ಮಾಡುವುದೇ ಒಂದು ದೊಡ್ಡ ಹಬ್ಬ ಎಂದರು.

ನುಡಿದಂತೆ ನಡೆದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಆಶೀರ್ವಾದದಿಂದ ಎತ್ತಿನ ಹೋಳೆ ಭಾಗದಿಂದ ನೀರನ್ನು ಏತನೀರಾವರಿ ಮುಖಾಂತರ ಬೆಳವಾಡಿ ಕೆರೆ, ದೇವನೂರು ಕೆರೆ, ಮಾಚೇನಹಳ್ಳಿ ಕೆರೆ, ಕುರುಬರಹಳ್ಳಿ ಕೆರೆಗಳಿಗೆ ನೀರು ತುಂಬಿಸಲಾಗಿದೆ. ಇಂತಹ ಬಡವರ, ದೀನ ದಲಿತರ, ಹಿಂದುಳಿದ ವರ್ಗ ಹಾಗೂ ಎಲ್ಲಾ ವರ್ಗದ ಜನರ ಬದುಕಿನ ಬಗ್ಗೆ ಯೋಚಿಸುವ ಸರ್ಕಾರಕ್ಕೆ ನೀವು ಅಭಿನಂದನೆ ಸಲ್ಲಿಸಿದರೆ ಅವರ ಜೊತೆಯಲ್ಲಿ ಕೆಲಸ ಮಾಡವ ಅವಕಾಶ ಮಾಡಿಕೊಟ್ಟ ಕ್ಷೇತ್ರದ ಜನರಿಗೆ ನಾನು ಕೃತಜ್ಞತೆಗಳನ್ನು ತಿಳಿಸುತ್ತೇನೆ ಎಂದರು.

ಇಪ್ಪತೈದು ವರ್ಷಗಳಲ್ಲಿ ಬೆಳವಾಡಿ ಕೆರೆ, ಮಾಚೇನಹಳ್ಳಿ ಕೆರೆ ೨ ಬಾರಿ ದೇವರ ಕೃಪೆಯಿಂದ ತುಂಬಿತ್ತು. ಕಡೂರು ಕ್ಷೇತ್ರದ ಶಾಸಕ ಕೆ.ಎಸ್ ಆನಂದ್ ಹಾಗೂ ಪಕ್ಷದ ಎಲ್ಲ ಮುಖಂಡರ ನಿಯೋಗದೊಂದಿಗೆ ಮುಖ್ಯಮಂತ್ರಿ, ಉಪ ಮುಖ್ಯ ಮಂತ್ರಿ ಯೊಂದಿಗೆ ಚರ್ಚಿಸಿ ನಂತರ ಭದ್ರಾ ಉಪಕಣಿವೆ ಯೋಜನೆಯ ೩ನೇ ಹಂತಕ್ಕೆ ಸುಮಾರು ೪೦೦ ಕೋಟಿ ಯೋಜನೆಗೆ ಟೆಂಡರ್ ಕರೆಯಲಾಗಿದೆ ಎಂದರು.

ಅಕ್ಟೋಬರ್-ನವೆಂಬರ್ ತಿಂಗಳಿನಲ್ಲಿ ಕಡೂರು ತಂಗ್ಲಿಕೆರೆಯಲ್ಲಿ ಮುಖ್ಯ ಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯ ಮಂತ್ರಿ ಡಿ.ಕೆ ಶಿವಕುಮಾರ್ ಅವರ ಉಪಸ್ಥಿತಿಯಲ್ಲಿ ಶಂಕುಸ್ಥಾಪನೆೆ ನೆರೆವೇರಿಸಲಾಗುವುದು, ನಂತರ ಎರಡು ವರ್ಷಗಳಲ್ಲಿ ಶಾಶ್ವತ ನೀರಾವರಿ ಯೋಜನೆ ಪೂರ್ಣಗೊಳಿಸಲಾಗುವುದು ಎಂದರು.

ರೈತರಿಗೆ ಯಾವುದೇ ಜಾತಿ, ಪಕ್ಷ ಇಲ್ಲ, ಎಲ್ಲಾ ರೈತರಿಗೆ, ಬಡವರಿಗೆ ನ್ಯಾಯವನ್ನು ಒದಗಿಸುವ ಜೊತೆಗೆ ಸಮಾಜದ ಮುನ್ನೆಲೆಗೆ ತರುವುದು ನಮ್ಮ ಕಾಂಗ್ರೆಸ್ ಸರ್ಕಾರ, ಚುನಾವಣಾ ಪೂರ್ವದಲ್ಲಿ ಹೇಳಿದಂತೆ ಬಡವರ ಬದುಕನ್ನು ಹಸನಾಗಿಸಲು ೫ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಲಾಗಿತ್ತು ಅದರಂತೆ ಸರ್ಕಾರ ಅಧಿಕಾರಕ್ಕೆ ಬಂದ ೫ ತಿಂಗಳೊಳಗಾಗಿ ನುಡಿದಂತೆ ನಡೆದಿದೆ ಎಂದರು.

ಜನ ಪ್ರತಿನಿಧಿಯಾಗಿ ಕೆಲಸವನ್ನು ಮಾಡುವ ಅವಕಾಶವನ್ನು ಜನರು ಮಾಡಿಕೊಟ್ಟಾಗ, ನಾನು ಎಂಬುವುದನ್ನು ಬಿಟ್ಟು ಜನರಿಗಾಗಿ, ರೈತರ ಬದುಕಿಗಾಗಿ ಜನರ ಸೇವೆ ಮಾಡುವುದು ಜನ ಪ್ರತಿನಿಧಿಗಳ ಕರ್ತವ್ಯ ಎಂದು ತಿಳಿದು, ನಾವು ನಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದಾಗ ಅದರ ಪುಣ್ಯವನ್ನು ದೇವರು ನೀಡುತ್ತಾನೆ ಎಂದರು.

ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಮಾತ್ರ ಅನುದಾನವನ್ನು ಸೀಮಿತಗೊಳಿಸದೆ ಅಭಿವೃದ್ಧಿಗಳಿಗೂ ಸಮಯ ಮತ್ತು ಅನುದಾನವನ್ನು ನೀಡಿದೆ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯಿತ್ರಿ ಶಾಂತೇಗೌಡ ಮಾತನಾಡಿ, ಜನರ ಕಣ್ಣೀರನ್ನು ಒರೆಸಲು ಕಾಂಗ್ರೆಸ್ ಸರ್ಕಾರ ಸಹಕಾರಿಯಾಗಿದೆ. ಗ್ರಾಮ ಪಂಚಾಯಿತಿ ಯಿಂದ ದೆಹಲಿವರೆಗೂ ಯಾವುದೇ ಒಳ್ಳೆಯ ಕೆಲಸವನ್ನು ಮಾಡಿದಾಗ ಅದನ್ನು ಗುರುತಿಸಿ ಪ್ರಶಂಸಿಸುವ ಕೆಲಸವನ್ನು ಜನ ಮಾಡಬೇಕು ಎಂದರು.

೨೦೧೩ರಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಡಿ.ಕೆ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಎತ್ತಿನ ಹೊಳೆ ಶಂಕುಸ್ಥಾಪನೆ ಮಾಡುವ ಸಮಯದಲ್ಲಿ ಇದರಿಂದ ನೀರು ಹರಿಸಲು ಆಗುವುದೇ ಎಂದು ಹಲವು ರೀತಿಯ ಟೀಕೆಗಳನ್ನು ಮಾಡಲಾಗಿತ್ತು. ಅಂದು ಟೀಕೆ ಮಾಡಿದವರಿಗೆ ಇಂದು ಕೆರೆಗಳಿಗೆ ನೀರು ತುಂಬಿಸುವ ಮೂಲಕ ಉತ್ತರ ನೀಡಿದ್ದೇವೆ ಎಂದರು.

ಸಖರಾಯಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಡಿ ಮನೆ ಸತೀಶ್ ಮಾತನಾಡಿ, ಬೆಳವಾಡಿ ಕೆರೆ ಮತ್ತು ದೇವನೂರು ಕೆರೆಗೆ ಇಂದು ಬಾಗಿನ ಬಿಡುವ ಸಂಭ್ರಮದ ದಿನವಾಗಿದೆ. ೨೫ ವರ್ಷಗಳಿಂದ ಈ ಭಾಗದ ಕೆರೆಗಳನ್ನು ತುಂಬಿಸುವ ಹೋರಾಟ ನಡೆದುಕೊಂಡು ಬಂದಿತ್ದ್ದುತು. ನಿಮ್ಮೆಲ್ಲರ ಕಣ್ಣೀರಿನ ಹೋರಾಟಕ್ಕೆ ಇಂದು ಪ್ರತಿಫಲ ದೊರೆತಿದೆ ಎಂದರು.

ಎತ್ತಿನ ಹೋಳೆ ಮೂಲಕ ಹಳೆಬೀಡು ಕೆರೆ ತುಂಬಿಸಿ ಅಲ್ಲಿಂದ ಬೆಳವಾಡಿ ಕೆರೆ, ಮಾಚೇನಹಳ್ಳಿ ಕೆರೆ ಸೇರಿದಂತೆ ಹಲವಾರು ಸಣ್ಣ-ಸಣ್ಣ ಕೆರೆಗಳನ್ನು ತುಂಬಿಕೊಂಡು ದೇವನೂರು ಕೆರೆಗೆ ನೀರನ್ನು ತರಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಡೂರು ಶಾಸಕ ಆನಂದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ, ಗ್ಯಾರಂಟಿ ಸಂವಿದಾನ ಸಮಿತಿ ಅಧ್ಯಕ್ಷ ಶಿವಾನಂದಸ್ವಾಮಿ, ರಾಜ್ಯ ಪರಿಸರಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಎ.ಎನ್.ಮಹೇಶ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪ ಗೌಡ, ಸಣ್ಣ ನೀರಾವರಿ ಇಲಾಖೆ ಅಧಿಕಾರಿ ದಕ್ಷಿಣಮೂರ್ತಿ, ಪಕ್ಷದ ಮುಖಂಡರಾದ ಬಸವರಾಜ್, ಗ್ರಾಪಂ ಅಧ್ಯಕ್ಷೆ ದೀಪ ದಕ್ಷಿಣಮೂರ್ತಿ, ಬಸವರಾಜಣ್ಣ, ಚಂದ್ರಪ್ಪ, ಹೇಮಾವತಿ, ಬಾಬು ಷಡಾಕ್ಷರಿ, ಶಂಕರ್ ನಾಯಕ್, ಅಮೀರ್, ಹೊನ್ನಪ್ಪ, ಕೆಂಗೇಗೌಡ, ಉಪಸ್ಥಿತರಿದ್ದರು, ಸಂತೋಷ್ ಸ್ವಾಗತಿಸಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net