ಎರಡು ಬಾರಿ ಲಸಿಕೆ ಹಾಕಿಸಿ

18 yerriswamy 02
Published on

ಬಳ್ಳಾರಿ ; ಮಕ್ಕಳಿಗೆ ಬಾಲ್ಯದಲ್ಲಿ ಕಾಡುವ ಮಾರಕ ರೋಗಗಳನ್ನು ತಡೆಯಲು ತಪ್ಪದೇ ಲಸಿಕೆ ಹಾಕಿಸಲು ಪಾಲಕರು ಕೈಜೊಡಿಸಬೇಕು ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶೇಗುಫ್ತಾ ಷಾಹೀನ್ ಹೇಳಿದರು.
ಇಲ್ಲಿನ ಪದ್ಮಾವತಿ ನಗರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗುಗ್ಗರಹಟ್ಟಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಸಹಯೋಗದೊಂದಿಗೆ ಶುಕ್ರವಾರ ನಡೆದ ಅಲೆಮಾರಿ ಜನತೆ ಹೆಚ್ಚಿರುವ ಕಡೆ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಸಿ ಮಾತನಾಡಿದರು. ದಡಾರ-ರೂಬೆಲ್ಲಾ ಲಸಿಕೆಯನ್ನು ಎರಡು ಬಾರಿ ಅಂದರೆ, ಮಗುವಿನ ಒಂಭತ್ತು ತಿಂಗಳು ವಯಸ್ಸು ತುಂಬಿದ ನಂತರ ಹಾಗೂ ಮಗುವಿನ ಒಂದುವರೆ ವರ್ಷದಲ್ಲಿ ಹಾಕಿಸುವ ಮೂಲಕ ರೋಗ ತಡೆಯಲು ಸಹಕರಿಸಬೇಕು ಎಂದರು. ಗರ್ಭಿಣಿ ಸ್ತ್ರೀಯರಲ್ಲಿ ರೂಬೆಲ್ಲಾ ರೋಗವು ಮಕ್ಕಳಲ್ಲಿ ಜನ್ಮತಃವಾಗಿ ಬರುವ ಸಾಧ್ಯತೆ ಇದ್ದು, ಮೊದಲ ತ್ರೈಮಾಸಿಕ ಗರ್ಭಾವಸ್ಥೆಯಲ್ಲಿ ಮಗುವಿನ ವಿಪರೀತ ಅಥವಾ ಮರಣಾಂತಿಕ ಆರೋಗ್ಯ ಸಮಸ್ಯೆಯನ್ನು ತಂದೊಡ್ಡಬಹುದಾಗಿದೆ . ಯಾವುದೇ ಮುಂಜಾಗ್ರತೆ ವಹಿಸದ ತಾಯಂದಿರಲ್ಲಿ ಕಂಡುಬರುವ ರೂಬೆಲ್ಲಾ ವೈರಸ್, ಮಗುವಿಗೆ ಗ್ಲುಕೋಮಾ, ಕಿವುಡುತನ, ಕಣ್ಣಿನಪೊರೆ, ಮೆದುಳು (ಮಾನಸಿಕತೆ ಅಸ್ವಸ್ಥತೆ ಅಥವಾ ಬುದ್ಧಿಮಾಂದ್ಯತೆ) ಮತ್ತು ಹೃದಯ ಸಂಬಂಧಿತ ಕಾಯಿಲೆಗಳಿಗೆ ಈಡು ಮಾಡಬಹುದು ಮತ್ತು ಗರ್ಭಪಾತ ಅಥವಾ ನಿರ್ಜೀವ ಜನನಕ್ಕೆ ಕಾರಣವಾಗಬಹುದು ಎಂದರು.
ಬಳಿಕ ಐಇಸಿ ವಿಭಾಗದ ಸಂಯೋಗದೊಂದಿಗೆ ಶಿಬಿರದಲ್ಲಿ 100 ಹೆಚ್ಚು ಜನರಿಗೆ ರಕ್ತದೊತ್ತಡ, ಸಕ್ಕರೆ ಖಾಯಿಲೆ ಪರೀಕ್ಷೆ, ಗರ್ಭಿಣಿಯರ ತಪಾಸಣೆ ಹಾಗೂ ಮಕ್ಕಳಿಗೆ ಲಸಿಕೆ ಹಾಕುವ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳಾದ ವಿ.ಉಮಾ ಮಹೇಶ್ವರಿ, ಅರುಣಾ, ಎನ್.ಉಮಾ ಮಹೇಶ್ವರಿ, ಔಷಧೀಯ ಅಧಿಕಾರಿ ಪ್ರಿಯಾಂಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net