ಎರಡು ಪ್ರತ್ಯೇಕ ಕೊಲೆ ಪ್ರಕರಣ:ಮೂವರು ಬಂಧನ

ಎರಡು ಪ್ರತ್ಯೇಕ ಕೊಲೆ ಪ್ರಕರಣ:ಮೂವರು ಬಂಧನ
Published on

ಹಾಸನ: ಜಿಲ್ಲೆಯಲ್ಲಿ ನಡೆದ ಎರಡು ಪ್ರತ್ಯೇಕ ಮಹಿಳೆಯರ ಕೊಲೆ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜಿತಾ ತಿಳಿಸಿದರು.
ನಗರದ ಎನ್.ಆರ್.ವೃತ್ತದಲ್ಲಿರುವ ನಗರ ಪೊಲೀಸ್ ಠಾಣೆಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.19ರಂದು ಅರಕಲಗೂಡು ತಾಲೂಕು ದೊಡ್ಡಮಗ್ಗೆ ಹೋಬಳಿ ಶೆಟ್ಟರುಕೊಪ್ಪಲು ಗ್ರಾಮದ ಸರೋಜಮ್ಮ ಮತ್ತು ನ.20ರಂದು ಚನ್ನರಾಯಪಟ್ಟಣ ತಾಲೂಕಿನ ಅಡಗೂರು ಗ್ರಾಮದ ಸುಶೀಲಮ್ಮ ಎಂಬ ಇಬ್ಬರು ಮಹಿಳೆಯರನ್ನು ಚಿನ್ನಾಭರಣಕ್ಕಾಗಿ ಕೊಲೆಮಾಡಿ ಆರೋಪಿಗಳು ಪರಾರಿಯಾಗಿದ್ದರು ಎಂದು ಮಾಹಿತಿ ನೀಡಿದರು.
ಚನ್ನರಾಯಪಟ್ಟಣದ ಸುಶೀಲಮ್ಮ ಕೊಲೆ ಪ್ರಕರಣದ ಆರೋಪಿಗಳಾದ ಕಾರ್ತಿಕ್ (20)ಮತ್ತು ಸಾಗರ್ (20)ಅರಕಲಗೂಡಿನ ಸರೋಜಮ್ಮ ಕೊಲೆ ಪ್ರಕರಣದ ಆರೋಪಿ ರವಿಕುಮಾರ್ ಅಲಿಯಾಸ್ ರವಿ (42)ಎಂಬಾತನನ್ನ ಬಂಧಿಸಿ ತನಿಖೆ ನಡೆಸಲಾಗುತ್ತಿದೆ ಎಂದರು
ಪ್ರಕರಣ1
ಚನ್ನರಾಯಪಟ್ಟಣ ತಾಲೂಕಿನ ಅಡಗೂರು ಗ್ರಾಮದ ಸುಶೀಲಮ್ಮ (65) ಎಂಬುವರು ನ.20ರಂದು ಮೇಕೆಗಳನ್ನ ಮೇಯಿಸಲು ಕೆರೆ ಹತ್ತಿರ ಹೋಗಿದ್ದ, ರಾತ್ರಿ ಆದರೂ ತಾಯಿ ಮನೆಗೆ ಬಾರದ ಹಿನ್ನೆಲೆಯಲ್ಲಿ ಮಗ ಬಸವರಾಜಾಚಾರಿ ಹುಡುಕಾಟ ನಡೆಸಿದ್ದಾರೆ.
ಮರುದಿನವು ಬೆಳಗ್ಗೆ ಗ್ರಾಮದ ಸುತ್ತಮುತ್ತ ಮತ್ತೆ ಹುಡುಕಾಟ ನಡೆಸುತ್ತಿರುವಾಗ ಆಗ ಅದೇ ಗ್ರಾಮದ ನಾಯಿಗುಡಿ ಹಳ್ಳದ ಹತ್ತಿರ ಹೋದಾಗ ಮಾಗುಡಿ ನಂಜಪ್ಪ ಅವರ ಜಮೀನಿನ ನೇರದ ಹಳ್ಳದಲ್ಲಿ ಹೆಂಗಸಿನ ಶವ ತೇಲಿ ಬರುತ್ತಿದ್ದು, ಯಾರೂ ದುಷ್ಕರ್ಮಿಗಳು ನನ್ನ ತಾಯಿಯನ್ನ ಕೊಲೆ ಮಾಡಿ ಮರದ ದಿಮ್ಮಿಗೆ ಮೃತ ದೇಹವನ್ನು ಕಟ್ಟಿ ಎಸೆದಿದ್ದಾರೆ ಎಂದು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ನಡೆಸಿದಾಗ ಅದೇ ಗ್ರಾಮದ ಕಾರ್ತಿಕ್ ಹಾಗೂ ಸಾಗರ ಎಂಬಾತನ್ನು ವಶಕ್ಕೆ ಪಡೆದುಕೊಂಡು ವಿಚಾರ ನಡೆಸಿದಾಗ ಸತ್ಯ ಒಪ್ಪಿಕೊಂಡಿದ್ದಾರೆ. ಇವರು ಸುಶೀಲಮ್ಮನ ಹತ್ತಿರ ಇದ್ದ ಸುಮಾರು 53 ಗ್ರಾಂ ಚಿನ್ನವನ್ನು ಕದ್ದು, ಆಕೆಯನ್ನು ಕೊಲೆ ಮಾಡಿ ಕೆರೆಗೆ ಎಸೆದು ಪದಾರಿಯಾಗಿದ್ದರು ಎಂದು ತಿಳಿಸಿದರು.
ಚಿನ್ನಾಭರಣವನ್ನು ಚನ್ನರಾಯಪಟ್ಟಣದ ಅಂಗಡಿಯಲ್ಲಿ ಗಿರವಿ ಇಡಲಾಗಿತ್ತು.ಅದನ್ನು ಕೂಡ ವಶಪಡಿಸಿಕೊಳ್ಳಲಾಗಿದ್ದು ಯಾವ ಕಾರಣಕ್ಕಾಗಿ ಕೊಲೆ ಮಾಡಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಮತ್ತೊಂದು ಪ್ರಕರಣದಲ್ಲಿ ಅರಕಲಗೂಡು ತಾಲೂಕು ದೊಡ್ಡಮಗ್ಗೆ ಗ್ರಾಮದ ಶಟ್ಟರಕೊಪ್ಪಲು ಗ್ರಾಮದ ಸರೋಜಮ್ಮ ಮನೆಯಲ್ಲಿ ಸಾಕಿದಂತಹ ಮೇಕೆಗಳನ್ನು ಕೊಂಡುಕೊಳ್ಳಲು ಬಂದಿದ್ದಂತಹ ಅರಕಲಗೂಡು ತಾಲೂಕು ಕಾರೇಹಳ್ಳಿ ಗ್ರಾಮದ ರವಿಕುಮಾರ್ ಅಲಿಯಾಸ್ ರವಿ ಎಂಬುವರ ನಡುವೆ ಜಗಳ ನಡೆದಿದ್ದು ದೊಣ್ಣೆಯಿಂದ ಮಹಿಳೆಗೆ ಹೊಡೆದ ಪರಿಣಾಮ ಆಕೆ ಮೃತಪಟ್ಟಿದ್ದಾರೆ ಎಂದರು.
ನಂತರ ಕೊಲೆ ಮಾಡಿ ಮಹಿಳೆಯ ಮೇಲಿದ್ದ 10.5 ಗ್ರಾಂ ಚಿನ್ನಾಭರಣಗಳನ್ನ ದೋಚಿ ಪದಾರಿಯಾಗಿದ್ದು, ಈ ಸಂಬಂಧ ಮೃತರ ಪುತ್ರ ನಾರಾಯಣ್ ಅರಕಲಗೂಡು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಹೇಳಿದರು.
ಆರೋಪಿ ರವಿ ಎಂಬಾತನನ್ನ ಬಂಧಿಸಿ ಆತ ಬಸವಪಟ್ಟಣದಲ್ಲಿರುವ ಮುತ್ತೂಟ್ ಪಿನ್ ಕಾರ್ಪ ಫೈನಾನ್ಸ್ ಗೆ ಗಿರಿವಿ ಇಟ್ಟಿದ್ದ ಚಿನ್ನವನ್ನು ವಶಪಡಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು
ಈ ಎರಡು ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ತಮ್ಮ ಸಿಬ್ಬಂದಿಗಳನ್ನು ಅಭಿನಂದಿಸುವುದಾಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net