ಎರಡು ದೇವಾಲಯಗಳ ಹುಂಡಿ ಕಳ್ಳತನ

4ss1police parisilane
Published on

ಶನಿವಾರಸಂತೆ: ಪಟ್ಟಣದ ಎರಡು ದೇವಾಲಯಗಳಿಗೆ ಭಾನುವಾರ ರಾತ್ರಿ ನುಗ್ಗಿದ್ದ ಕಳ್ಳರು ಹುಂಡಿಗಳನ್ನು ಕದ್ದೊಯ್ದಿದ್ದಾರೆ. ಭಾನುವಾರ ತಡ ರಾತ್ರಿ ಪಟ್ಟಣದ ತ್ಯಾಗರಾಜ ಕಾಲನಿಯಲ್ಲಿರುವ ವಿಜಯ ವಿನಾಯಕ ದೇವಾಲಯ ಹಾಗೂ ಶ್ರೀ ರಾಮ ಮಂದಿರ ದೇವಾಲಯದಲ್ಲಿ ಕಳ್ಳತನ ನಡೆದಿದೆ.

ವಿಜಯ ವಿನಾಯಕ ದೇವಾಲಯ ಬಾಗಿಲು ಮುರಿದ ಕಳ್ಳರು ದೇವಾಲಯದ ಒಳಗೆ ಇದ್ದ ಹುಂಡಿಯನ್ನು ಹೊತ್ತು ಪರಾರಿಯಾಗಿದ್ದಾರೆ. ಸ್ಕೂಟಿಯಲ್ಲಿ ಮಾಸ್ಕ್ ಧರಿಸಿ ಬಂದ ಕಳ್ಳರು ದೇವಾಲಯದ ಬಾಗಿಲು ಮುರಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಳ್ಳರು ದೇವಾಲಯದಿಂದ ಕದ್ದೊಯ್ದು ಹುಂಡಿಯಲ್ಲಿನ ಹಣವನ್ನು ತೆಗೆದುಕೊಂಡು ಖಾಲಿ ಹುಂಡಿಯನ್ನು ದುಂಡಳ್ಳಿ ಶಾಲೆ ಬಳಿ ಎಸೆದು ಹೋಗಿದ್ದಾರೆ. ಈ ಹಿಂದೆಯೂ ಇದೇ ದೇವಾಲಯಕ್ಕೆ ನುಗ್ಗಿದ್ದ ಕಳ್ಳರು ಹುಂಡಿಯನ್ನು ಒಡೆದು ಹಣ ದೋಚಿದ್ದರು. ಈ ಕುರಿತು ದೇವಾಲಯರ ಸಮಿತಿಯವರು ಪೊಲೀಸರಿಗೆ ದೂರು ನೀಡಿದ್ದರು. ಸರಿಯಾಗಿ ತನಿಖೆ ನಡೆಸಿ ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ಮತ್ತೆ ಕಳ್ಳತನ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಶ್ರೀ ರಾಮ ಮಂದಿರ ದೇವಾಲಯದೊಳಗೆ ನುಗ್ಗಿದ್ದ ಕಳ್ಳರು ಹುಂಡಿಯನ್ನು ಒಡೆದು ಹಣವನ್ನು ದೋಚಿ, ನಂತರ ಹುಂಡಿಯನ್ನು ರಸ್ತೆ ಬದಿಗೆ ಎಸೆದು ಪರಾರಿಯಾಗಿದ್ದಾರೆ. ಭಾನುವಾರ ರಾತ್ರಿ ಪಟ್ಟಣದ ದೇವಾಲಯಗಳಲ್ಲಿ ಸರಣಿ ಕಳ್ಳತನ ಪ್ರಕರಣದ ಕುರಿತು ಮಾಹಿತಿ ತಿಳಿದ ಶನಿವಾರಸಂತೆ ಪೊಲೀಸರು ಸೋಮವಾರ ಬೆಳಗ್ಗೆ ದೇವಾಲಯಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net