ಎರಡು ದಿನಸಿ ಅಂಗಡಿಯಲ್ಲಿ ದರೋಡೆ

ದರೋಡೆ
Published on

ಹಾಸನ : ಗ್ರಾಮಾಂತರ ಠಾಣೆ ಹಾಗು ಬಡಾವಣೆ ಠಾಣೆ ವ್ಯಾಪ್ತಿಗೆ ಸೇರಿದ ಎರಡು ದಿನಸಿ ಅಂಗಡಿಗೆ ನುಗ್ಗಿರುವ ದುರುಳರು 15 ಸಾವಿರ ರೂಪಾಯಿ ದರೋಡೆ ಮಾಡಿರುವುದರ ಜೊತೆಗೆ ಮಾಲೀಕರ ಮೇಲೆ ಹಲ್ಲೆ ನಡೆಸಿರುವ ಘಟನೆ ಸೋಮವಾರ ನಡೆದಿದೆ.

ಬೇಲೂರು ರಸ್ತೆಯ ಹೊಸೂರು ಗ್ರಾಮದಲ್ಲಿರುವ ವೆಂಕಟೇಶ್ ಎಂಬುವವರ ಅಂಗಡಿಗೆ ಆಟೋದಲ್ಲಿ ಬಂದ ನಾಲ್ವರು ಆಟಾಟೋಪ ಮೆರೆದಿದ್ದಾರೆ. ಹೂವಿನಹಳ್ಳಿ ಕಾವಲ್ ಗ್ರಾಮದ ಪ್ರೀತಮ್ ಎಂಬಾತನ ಜೊತೆಗೆ ಮೂವರು ಬಂದಿದ್ದರೆಂದು ವೆಂಕಟೇಶ್ ಆರೋಪಿಸಿದ್ದಾರೆ. ಇನ್ನೊಬ್ಬ ಆಟೋ ಚಾಲನೆಯಲ್ಲಿಟ್ಟುಕೊಂಡು ರಸ್ತೆಯಲ್ಲೇ ನಿಂತಿದ್ದ. ಕೈಯಲ್ಲಿ ಕಬ್ಬಿಣದ ರಾಡ್ ಹಿಡಿದಿದ್ದ ಪ್ರೀತಮ್ 5 ಸಾವಿರ ರೂ. ಕೊಡು ಎಂದು ಕೇಳಿದ್ದಾನೆ. ವೆಂಕಟೇಶ್ ಅವರು ಹಣವಿಲ್ಲ ಎಂದಾಗ ರಾಡ್‌ನಿಂದ ಶೋಕೇಸ್ ಗ್ಲಾಸ್ ಮತ್ತು ವಸ್ತುಗಳನ್ನೆಲ್ಲಾ ಒಡೆದು ಹಾಕಿದ್ದಾನೆ. ವೆಂಕಟೇಶ್ ಅವರು ಪ್ರಾಣ ಭಯದಿಂದ ಹೊರಗೆ ಓಡಿ ಬರುತ್ತಿದ್ದಂತೆ ಕ್ಯಾಷ್ ಕೌಂಟರ್‌ನಲ್ಲಿದ್ದ 8 ಸಾವಿರ ರೂ. ದೋಚಿ ಎಲ್ಲರೂ ಆಟೋ ಹತ್ತಿ ಪರಾರಿಯಾಗಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಸಿಗರೇಟ್ ಮತ್ತಿತರ ಸಾಮಾಗ್ರಿ ಖರೀದಿಸಿದ ಯುವಕರು ನಂತರ ಹಣ ಕೇಳಿದ್ದಕ್ಕೆ ಮಾಲೀಕನಿಗೆ ಚಾಕು ತೋರಿಸಿ ಹೊಡೆದು 7 ಸಾವಿರ ರೂ. ದೋಚಿರುವುದು ಹೊಸಕೊಪ್ಪಲಿನಲ್ಲಿ ನಡೆದಿದೆ.

ಲಕ್ಷ್ಮೀನಾರಾಯಣ ಅವರ ಅಂಗಡಿಗೆ ಬಂದಿದ್ದ ಕೌಶಿಕ ಗ್ರಾಮದ ನಿಖಿಲ್ ಮತ್ತು ಸ್ನೇಹಿತರು 1 ಸಾವಿರ ರೂ. ಮೌಲ್ಯದ ಸಿಗರೇಟ್, ಖಾರ ಇನ್ನಿತರೆ ವಸ್ತುಗಳನ್ನು ಖರೀದಿಸಿ ನಂತರ ಹಣ ಕೊಡು ಎಂದಾಗ ನಿಖಿಲ್‌ನು ಯಾರ ಬಳಿ ಹಣ ಕೇಳುತ್ತೀಯಾ ಎಂದು ಜಗಳ ಶುರು ಮಾಡಿದ್ದಾನೆ. ಜೇಬಿನಿಂದ ಚಾಕು ತೆಗೆದು ಕುತ್ತಿಗೆ ಹತ್ತಿರ ಹಿಡಿದು ದುಡ್ಡು ಕೊಡುವುದಿಲ್ಲವೆಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಕ್ಯಾಷ್ ಕೌಂಟರ್‌ನಲ್ಲಿದ್ದ 7 ಸಾವಿರ ರೂ. ದೋಚಿ ಪರಾರಿಯಾಗಿದ್ದಾರೆ. ಲಕ್ಷ್ಮೀನಾರಾಯಣ ಅವರಿಗೆ ಗಾಜಿನ ಚೂರಿನಿಂದ ಚುಚ್ಚಿದ್ದು ಚಿಕಿತ್ಸೆಗೆ ದಾಖಲಾಗಿದ್ದಾರೆ. ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net