

ಕಲಬುರಗಿ: ಎರಡು ದಿನಗಳಿಂದ ಒಂದೇ ಒಂದು ಕರೊನಾ ಪಾಸಿಟಿವ್ ಕೇಸ್ ವರದಿ ಆಗದಿರುವುದು ಜನರಲ್ಲಿ ನೆಮ್ಮದಿ ಮೂಡಿಸಿದೆ. ಈ ಮಧ್ಯೆ ಶನಿವಾರ ರಾತ್ರಿ ಮತ್ತೊಬ್ಬ ಸೋಂಕಿತ ಗುಣಮುಖನಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ಮತ್ತಷ್ಟು ಸಂತಸದ ವಿಷಯ ಎನಿಸಿದೆ.
ಶುಕ್ರವಾರ ಮತ್ತು ಶನಿವಾರ ಒಂದೇ ಒಂದು ಸೋಂಕಿತ ಪ್ರಕರಣ ಪತ್ತೆಯಾಗಿಲ್ಲ. ಇದರಿಂದಾಗಿ ಜಿಲ್ಲೆಯಲ್ಲಿ ಚೀನಿ ವೈರಸ್ ಒಂಥರ ನಿಯಂತ್ರಣಕ್ಕೆ ಬಂದಿದೆ ಎಂದು ಭಾವಿಸಲಾಗುತ್ತಿದೆ.
ಜಿಲ್ಲೆಯಲ್ಲಿ ಈವರೆಗೆ 3113 ಶಂಕಿತರ ರಕ್ತ, ಗಂಟಲು ದ್ರವ ಟೆಸ್ಟ್ಗೆ ಕಳುಹಿಸಿದ್ದು, ಈ ಪೈಕಿ 2268 ಜನರ ರಿಪೋರ್ಟ್ ನೆಗೆಟಿವ್ ಬಂದಿದೆ. 809 ಜನರ ವರದಿಗೆ ಕಾಯಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.
ತಾಂತ್ರಿಕ ಕಾರಣಗಳಿಂದ ಇಬ್ಬರ ಲ್ಯಾಬ್ ಟೆಸ್ಟ್ ಆಗಿಲ್ಲ. 19 ಆ್ಯಕ್ಟಿವ್ ಸೇರಿ 20 ಕಂಟೈನ್ಮೆಂಟ್ ಜೋನ್ಗಳಿದ್ದು, 41,024 ಮನೆಗಳ ಸಮೀಕ್ಷೆ ಕೈಗೊಳ್ಳಲಾಗಿದೆ. ಪ್ರೈಮರಿ ಕಾಂಟ್ಯಾಕ್ಟ್ಸ್ 662, ಸೆಕೆಂಡರಿ 2373, ವಿದೇಶದಿಂದ ಬಂದ 488 ಜನರನ್ನು ಗುರುತಿಸಲಾಗಿದೆ. ಹೋಂ ಕ್ವಾರಂಟೈನ್ನಲ್ಲಿ 1985 ಜನರನ್ನು ಇರಿಸಲಾಗಿದೆ. ಈವರೆಗೆ 28 ದಿನ ಹೋಂ ಕ್ವಾರಂಟೈನ್ನಲ್ಲಿದ್ದ 981 ಜನರನ್ನು ಮುಕ್ತಗೊಳಿಸಲಾಗಿದೆ. 262 ಜನರನ್ನು ಇಎಸ್ಐಸಿ ಐಸೋಲೇಷನ್ ವಾರ್ಡ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
57 ವರ್ಷದ ಸೋಂಕಿತ ಗುಣಮುಖ
ಕಲಬುರಗಿ ಖಮರ್ ಕಾಲನಿಯ 57 ವರ್ಷದ ವ್ಯಕ್ತಿ (ಪಿ175) ಗುಣಮುಖನಾಗಿ ಬಿಡುಗಡೆಯಾಗಿದ್ದಾನೆ. ಈತ ಏ.7ರಂದು ತೀವ್ರ ಉಸಿರಾಟ ತೊಂದರೆ (ಎಸ್ಎಆರ್ಐ)ಯಿಂದ ಸೋಂಕು ದೃಢವಾಗಿದ್ದರಿಂದ ಇಎಸ್ಐಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಇದೀಗ ಗುಣಮುಖವಾಗಿದ್ದರಿಂದ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ 36 ಕರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, 7 ಸೋಂಕಿತರು ಬಿಡುಗಡೆಯಾಗಿದ್ದರೆ, ನಾಲ್ವರು ಮೃತಪಟ್ಟಿದ್ದಾರೆ. 25 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಿಸಿ ಶರತ್ ತಿಳಿಸಿದ್ದಾರೆ.