ಎರಡು ದಿನಗಳ ಜಿಲ್ಲಾ ಪತ್ರಕರ್ತರ ಕ್ರೀಡಾಕೂಟಕ್ಕೆ ತೆರೆ

25
Published on

ಮೈಸೂರು: ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಿಂದ ಪತ್ರಕರ್ತರು ಹಾಗೂ ಅವರು ಕುಟುಂಬದವರಿಗಾಗಿ ಆಯೋಜಿಸಿದ್ದ ಎರಡು ದಿನಗಳ ವಾರ್ಷಿಕ ಕ್ರೀಡಾಕೂಟಕ್ಕೆ ಭಾನುವಾರ ಸಂತಸದ ತೆರೆ ಬಿತ್ತು.
ಮೈಸೂರು ವಿಶ್ವವಿದ್ಯಾಲಯದ ಸ್ಪೋರ್ಟ್ಸ್ ಫೆವಿಲಿಯನ್ ಮೈದಾನದಲ್ಲಿ ಆಯೋಜಿಸಿದ್ದ ವಿವಿಧ ಪಂದ್ಯಾವಳಿಯಲ್ಲಿ ಮೈಸೂರು ನಗರ ಹಾಗೂ ಗ್ರಾಮಾಂತರ ಪತ್ರಕರ್ತರು ಭಾಗವಹಿಸಿ ಸಂಭ್ರಮಪಟ್ಟರು.
ಮೊದಲ ದಿನ ಕ್ರಿಕೆಟ್ ಪಂದ್ಯಾವಳಿ ಜರುಗಿದರೆ, ಎರಡನೇ ದಿನ ಷಟಲ್ ಬ್ಯಾಡ್ಮಿಂಟನ್(ಡಬಲ್ಸ್) ಪಂದ್ಯಾವಳಿ, ವಿವಿಧ ವಯೋಮಾನದ ಪುರುಷರು, ಮಹಿಳೆಯರು ಹಾಗೂ ಮಕ್ಕಳ ವಿಭಾಗದಲ್ಲಿ ಓಟದ ಸ್ಪರ್ಧೆ, ಗುಂಡು ಎಸೆತ, ಗೋಣಿಚೀಲದ ಓಟದ ಸ್ಪರ್ಧೆ, ಲೆಮೆನ್ ಆ್ಯಂಡ್ ಸ್ಪೂನ್, ಮ್ಯೂಸಿಕಲ್ ಚೇರ್ ಸೇರಿದಂತೆ ಇನ್ನಿತರೆ ಸ್ಪರ್ಧೆಗಳು ನಡೆದವು.
ಸಂಜೆ ಆಯೋಜಿಸಿದ್ದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿದ ನಗರ ಪೊಲೀಸ್ ಕಮೀಷನರ್ ಬಿ.ರಮೇಶ್ ಬಾನೋತ್ ಮಾತನಾಡಿ, ಕಾರ್ಯ ಒತ್ತಡದ ನಡುವೆ ಪತ್ರಕರ್ತರು ಕುಟುಂಬದವರಿಗೆ ಸಮಯ ಕೊಡುವುದೇ ಕಷ್ಟ. ಆದರೆ ಕ್ರೀಡೆಯಲ್ಲಿ ಎಲ್ಲರೂ ಒಟ್ಟಾಗಿ ತೊಡಗಿರುವುದು ಸಂತಸ ತರುತ್ತದೆ ಎಂದರು.
ಪತ್ರಕರ್ತರು ಹಗಲು, ರಾತ್ರಿ ಎನ್ನದೇ ಕೆಲಸ ಮಾಡುತ್ತಿರುತ್ತಾರೆ. ಇದನ್ನು ಅರ್ಥ ಮಾಡಿಕೊಂಡು ಮಕ್ಕಳು ಚನ್ನಾಗಿ ಓದಿ, ಉತ್ತಮ ಉದ್ಯೋಗ ಪಡೆಯಬೇಕು. ಆ ಮೂಲಕ ತಂದೆ ತಾಯಿಗೆ, ಸಮಾಜಕ್ಕೆ ಉತ್ತಮ ಪ್ರಜೆ ಎನಿಸಿಕೊಳ್ಳಬೇಕು ಎಂದು ಆಶಿಸಿದರು.
ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಮಾತನಾಡಿ, ಪತ್ರಕರ್ತರು ಹಾಗೂ ಹೋಟೆಲ್ ಮಾಲೀಕರ ಸಂಘದ ನಡುವೆ ಅನನ್ಯ ಬಾಂಧವ್ಯ ಇದ್ದು, ಪರಸ್ಪರ ಸಹಕಾರ ನೀಡಲಾಗುತ್ತಿದೆ. ಕುಟುಂಬದವರೊಂದಿಗೆ ಸೇರಿ ಸಂಭ್ರಮಸುವುದು ನಿಜಕಕ್ಕೆ ಸಂತೋಷವಾಗುತ್ತದೆ. ಆದ್ದರಿಂದ ಪ್ರತಿ ವರ್ಷ ಇಂತಹ ಕಾರ್ಯಕ್ರಮಗಳು ನಡೆಯಬೇಕು ಎಂದರು.
ಕೌಟಿಲ್ಯ ವಿದ್ಯಾಸಂಸ್ಥೆ ಅಧ್ಯಕ್ಷ ಟಿ.ಬಾಲು ಅವರು ಕ್ರೀಡಾಕೂಟಕ್ಕೆ ಶುಭ ಹಾರೈಸಿದರು. ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಹೋಟೆಲ್ ಮಾಲೀಕರ ಸಂಘದ ಉಪಾಧ್ಯಕ್ಷ ರವಿಶಾಸ್ತ್ರಿ ಹೋಟೆಲ್ ಉದ್ಯಮಿ ಭಾಸ್ಕರ್‌ಶೆಟ್ಟಿ, ಲಯನ್ಸ್ ಸಂಸ್ಥೆಯ ಎ.ಸಿ.ರವಿ, ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಸುಬ್ರಹ್ಮಣ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net