

ಹಾಸನ: ಅಡಗೂರಿನ ಯೋಗ ಚೇತನ ಕೇಂದ್ರ ಕಳೆದ ಎರಡು ದಶಕಗಳಿಂದ ನಿರಂತರ ಆರೋಗ್ಯಕ್ಕಾಗಿ ಯೋಗ ಶಿಬಿರ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರಗಳನ್ನು ಬೀದರ್ ಜಿಲ್ಲೆಯಿಂದ ಚಾಮರಾಜನಗರ ಜಿಲ್ಲೆಯವರೆಗೂ ಆಯೋಜಿಸಿಕೊಂಡು ಬರುತ್ತಿದೆ. ಅನೇಕ ತಾಲೂಕು, ಹೋಬಳಿ, ಗ್ರಾಮಗಳಲ್ಲಿ 395 ಕ್ಕಿಂತಲೂ ಹೆಚ್ಚಿನ ಯೋಗ ಶಿಬಿರಗಳನ್ನು ಮಾಡುವುದರ ಜತೆಗೆ ಸ್ಥಳೀಯ ಅನೇಕ ಸಂಘ ಸಂಸ್ಥೆಗಳ ಸಹಕಾರದಿಂದ 10,000 ಯೂನಿಟ್ (ಬಾಟಲ್) ರಕ್ತ ಸಂಗ್ರಹಿಸಿದ ಹೆಗ್ಗಳಿಕೆ ಸಂಸ್ಥೆಯಾದ್ದಾಗಿದೆ.
ಇದರ ಜತೆಗೆ ನೇತ್ರದಾನದ ಬಗ್ಗೆಯೂ ಅರಿವು ಮೂಡಿಸಿ 250 ಕ್ಕಿಂತಲೂ ಹೆಚ್ಚಿನ ಜನರು ನೇತ್ರದಾನ ಮಾಡುತ್ತೇವೆಂದು ವಾಗ್ದಾನ ಮಾಡಿ ಸಹಿ ಮಾಡಿದ್ದಾರೆ ಇಷ್ಟಲ್ಲದೆ 30ಕ್ಕಿಂತಲೂ ಹೆಚ್ಚಿನ ಜನರು ವೈದ್ಯಕೀಯ ಸಂಶೋಧನೆಗೆ ಸಹಕಾರವಾಗಲಿ ಎಂದು ದೇಹ ದಾನವನ್ನು ಮಾಡುವಂತೆ ತಿಳಿಸಿ ಸ್ವಯಂ ಪ್ರೇರಣೆಯಿಂದ ಸಹಿ ಮಾಡಿದ್ದಾರೆ. ಇಷ್ಟಲ್ಲದೆ ಶಿಬಿರದಲ್ಲಿ ವೈಯಕ್ತಿಕ ಅನೇಕ ಸಮಸ್ಯೆಗಳಿಗೆ ಉಚಿತವಾಗಿ ಕಣ್ಣಿನ ಮತ್ತು ದಂತ ತಪಾಸಣೆ, ಅಲ್ಲದೆ ಇನ್ನಿತರ ವೈದ್ಯಕೀಯ ತಪಾಸಣೆಗಳನ್ನು ಸಾರ್ವಜನಿಕರು ಮತ್ತು ಶಿಬಿರಾರ್ಥಿಗಳಿಗೆ ಆಯೋಜನೆ ಮಾಡುತ್ತಾ ಬಂದಿದೆ.
ಸರ್ಕಾರಿ ಶಾಲೆ ಅಭಿವೃದ್ಧಿಗೂ ಕೈಜೋಡಿಸುತ್ತಾ ಮಕ್ಕಳಿಗೆ ಬೇಕಾದ ಪಠ್ಯಪುಸ್ತಕಗಳು ಇತರೆ ಅನೇಕ ಸಲಕರಣೆಗಳನ್ನು ದಾನಿಗಳ ಸಹಾಯದಿಂದ ಕೊಡಿಸುವ ಪ್ರಯತ್ನ ಹಾಗೂ ಪರಿಸರ ಕಾಳಜಿಯಿಂದ ಶಿಬಿರಗಳನ್ನು ಆಯೋಜಿಸುವ ಊರುಗಳಲ್ಲಿ ಗಿಡ ನೆಡುವ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡಿಕೊಂಡು ಬರಲಾಗುತ್ತಿದೆ. ಶಿಬಿರಾರ್ಥಿಗಳಿಗೆ ಇನ್ನು ಹೆಚ್ಚಿನ ಆರೋಗ್ಯದ ಜ್ಞಾನ ಸಿಗಲಿ ಎಂದು ವೈದ್ಯರು ಮತ್ತು ಚಿಂತಕರಿಂದ ಉಪನ್ಯಾಸ, ಸ್ಥಳೀಯ ಔಷಧಿ ಸಸ್ಯಗಳ ಪರಿಚಯ ಮಾಡಿಸಲಾಗುತ್ತಿದೆ. ಶಾಲೆ-ಕಾಲೇಜುಗಳಿಗೂ ಸಹ ತೆರಳಿ ಆರೋಗ್ಯ ಹಾಗೂ ರಕ್ತದಾನದ ಮಹತ್ವ ತಿಳಿಸಲಾಗುತ್ತಿದೆ.
ನಮ್ಮ ಹೆಮ್ಮೆಯ ಸಂಸ್ಥೆ ಯೋಗ ಚೇತನ ಕೇಂದ್ರ ಒಂದು ಹಳ್ಳಿಯಲ್ಲಿ ಇದ್ದುಕೊಂಡು ಇಷ್ಟೆಲ್ಲ ಕೆಲಸಗಳನ್ನು ಮಾಡಿಕೊಂಡು ಮುಂದೆ ಸಾಗುತ್ತಿದೆ. ಇನ್ನು ಮುಂದೆಯೂ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ದೈಹಿಕ, ಮಾನಸಿಕ, ಸಾಮಾಜಿಕ, ಆಧ್ಯಾತ್ಮಿಕ ಆರೋಗ್ಯವಂತರಾಗಲು ಸದಾ ಮಾರ್ಗದರ್ಶನ ನೀಡಲಾಗುತ್ತಿದೆ. ಪ್ರತಿಯೊಬ್ಬರೂ ರಕ್ತದಾನ ಮಾಡುವುದರಿಂದ ಆರೋಗ್ಯದಿಂದ ಇರಬಹುದು. ಯಾವುದೇ ಹಿಂಜರಿಕೆ ಇಲ್ಲದೆ ರಕ್ತದಾನ ಮಾಡಿ ಎಂದು ಕೇಂದ್ರ ಸಂಸ್ಥಾಪಕರು ಶ್ರೀ ಚೇತನ್ ಗುರೂಜಿ ಹೇಳಿದರು.