ಎರಡು ತಿಂಗಳೊಳಗೆ ಪೌರಕಾರ್ಮಿಕರ ಕಾಯಂ: ಸಚಿವ ಕಾರಜೋಳ

7
Published on

ಮೈಸೂರು: ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರನ್ನು ಮುಂದಿನ ಎರಡು ತಿಂಗಳಲ್ಲಿ ಕಾಯಂಗೊಳಿಸಿ ಸರ್ಕಾರಿ ನೌಕರರಾಗಿ ಪರಿಗಣಿಸಲಾಗುವುದು ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಭರವಸೆ ನೀಡಿದರು.
ರಾಜ್ಯ ಸಫಾಯಿ ಕರ್ಮಚಾರಿ ಆಯೋಗದಿಂದ ಮುಕ್ತಗಂಗೋತ್ರಿ ಘಟಿಕೋತ್ಸವ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಪೌರಕಾರ್ಮಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪೌರ ಕಾರ್ಮಿಕರನ್ನು ಕಾಯಂಗೊಳಿಸಲು ಕೆಲ ಕಾನೂನು ತೊಡಕುಗಳಿವೆ. ಸರ್ಕಾರಿ ನೇಮಕಾತಿ ನಿಯಮಾವಳಿ ಪ್ರಕಾರ ಶೇ.82ರಷ್ಟು ಹುದ್ದೆಗಳನ್ನು ಬೇರೆ ಸಮಾಜದವರಿಗೆ ಕೊಡಬೇಕು ಎಂದಿದೆ. ಬೇರೆ ಸಮುದಾಯದವರು ಈ ಕೆಲಸಕ್ಕೆ ಬಂದರೂ ಇದನ್ನು ಮಾಡಲ್ಲ. ಅವರು ಹೊರಗುತ್ತಿಗೆ ಕೊಡುತ್ತಾರೆ. ಆಗ ಮತ್ತೆ ಅದೇ ಸಮಸ್ಯೆ ಸೃಷ್ಟಿ ಆಗಲಿದೆ. ಆದ್ದರಿಂದ ಶೇ.100ರಷ್ಟು ಪೌರಕಾರ್ಮಿಕ ವರ್ಗದವರೇ ಬರಬೇಕು ಎಂಬುದು ನಮ್ಮ ನಿಲುವು. ಅದಕ್ಕಾಗಿ ವಿಶೇಷ ನೇಮಕಾತಿ ನಿಯಮ ರೂಪಿಸಲು ಸಮಿತಿ ರಚಿಸಲಾಗಿದೆ. ಅದು ವರದಿ ಕೊಟ್ಟ ಬಳಿಕ ಸರ್ಕಾರ ಕ್ರಮ ವಹಿಸಿ ನ್ಯಾಯ ಕಲ್ಪಿಸಿಕೊಡಲಿದೆ. ಇದರಿಂದ ನಗರ ಪ್ರದೇಶದಲ್ಲಿರುವ 52 ಸಾವಿರ ಪೌರಕಾರ್ಮಿಕರೆಲ್ಲರೂ ಸರ್ಕಾರಿ ನೌಕರರಾಗಲಿದ್ದಾರೆ ಎಂದು ಹೇಳಿದರು.
ಹೊರಗುತ್ತಿಗೆ ಏಜೆನ್ಸಿಗಳು ಪೌರಕಾರ್ಮಿಕರನ್ನು ಬಹಳ ಶೋಷಿಸುತ್ತಿವೆ. ಇದು ನೋವಿನ ಸಂಗತಿ. ಹೀಗಾಗಿಯೇ ಶೋಷಣೆ ಮುಕ್ತಗೊಳಿಸಲು ಕೆಲಸವನ್ನು ಕಾಯಂಗೊಳಿಸಲು ತೀರ್ಮಾನಿಸಲಾಗಿದೆ ಎಂದರು.

ಮಲ ಹೊರುವ ಪದ್ಧತಿ ಜೀವಂತ:
ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಪೌರಕಾರ್ಮಿಕರ ಸಮಸ್ಯೆ ಬಗೆಹರಿದಿಲ್ಲ. ಈಗಲೂ 5000ಕ್ಕಿಂತ ಅಧಿಕ ಜನರು ಮಲ ಹೊರುವವರು ಇದ್ದಾರೆಂಬುದು ನಾಚಿಕೆಗೇಡಿನ ಸಂಗತಿ. ಮಲ ಹೊರುವ ಪದ್ಧತಿ ನಿಷೇಧಿಸಿದ್ದರೂ ಅದು ಮುಂದುವರಿದಿದೆ. ಅಮೃತಮಹೋತ್ಸವ ಆಚರಿಸಿಕೊಳ್ಳುತ್ತಿರುವ ಸ್ವಾತಂತ್ರೃ ಭಾರತಕ್ಕೆ ಇದು ಕಳಂಕ. ಈವರೆಗೆ ಅನೇಕ ಸಮಿತಿ ರಚನೆಯಾದರೂ ಪೌರಕಾರ್ಮಿಕರ ಸಮಸ್ಯೆಗಳಿಗೆ ಮುಕ್ತಿ ದೊರೆತಿಲ್ಲ ಎಂದು ಬೇಸರಿಸಿದರು.
ಬೇಡಿಕೆ ಇನ್ನೂ ಈಡೇರಿಲ್ಲ:
‘ನಮ್ಮ ಮಕ್ಕಳಿಗೂ ಶಿಕ್ಷಣ ಸಿಗಬೇಕು. ಮಲ ಹೊರುವ ಪದ್ಧತಿಯನ್ನು ಸಂಪೂರ್ಣ ನಿಷೇಧಿಸಬೇಕು. ನಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು’ ಎಂಬುದು ಪೌರಕಾರ್ಮಿಕರ ಬಹುದಿನದ ಬೇಡಿಕೆ. ಇಷ್ಟು ಮಾಡಿಕೊಂಡಿ ಎಂದು ಅಂಗಲಾಚಿದರೂ ಅವರ ನೋವಿಗೆ ಸ್ಪಂದಿಸಿರಲಿಲ್ಲ. ಈ ಹಿಂದೆ ಅನೇಕರು ಅಧಿಕಾರಕ್ಕೆ ಬಂದರೂ ಸಮಸ್ಯೆಗಳು ಬಗೆಹರಿದಿಲ್ಲ. ಆದರೆ, ನಮ್ಮ ಸರ್ಕಾರವು ಪೌರಕಾರ್ಮಿಕರ ಕಾಯಂಗೆ ಕ್ರಮವಹಿಸಿದೆ. ಅಲ್ಲಿಯವರೆಗೆ ಸಂಕಷ್ಟ ಪರಿಹಾರವಾಗಿ ಪ್ರತಿ ತಿಂಗಳು ತಲಾ 2 ಸಾವಿರ ರೂ. ನೀಡುತ್ತಿದೆ ಎಂದರು.
ಹೃದಯದಿಂದ ಕೆಲಸ ಮಾಡಿ: ದೀನದಲಿತರ ಹೆಸರಿನಲ್ಲಿ ಅಧಿಕಾರ ಅನುಭವಿಸಿದ್ದಾರೆ. ಮತ ರಾಜಕಾರಣಕ್ಕಾಗಿ ಬರೀ ಮಿದುಳಿನಿಂದಷ್ಟೇ ಕೆಲಸ ಮಾಡಿದ್ದಾರೆ. ಅದಕ್ಕೆ ಅವರ ಪರಿಸ್ಥಿತಿ ಬದಲಾಗಿಲ್ಲ. ಮಿದುಳಿನೊಂದಿಗೆ ಹೃದಯ ಹಾಗೂ ಕಾನೂನನ್ನು ಜೋಡಿಸಿಕೊಂಡು ದೀನ ದಲಿತರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು. ಈ ಹಾದಿಯಲ್ಲಿ ನಮ್ಮ ಸರ್ಕಾರ ಸಾಗುತ್ತಿದೆ ಎಂದರು.

ಆಯೋಗದ ಮಾಹಿತಿ ಸರಿ ಇಲ್ಲ:
ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಕೇವಲ 6 ಸಾವಿರ ಪೌರಕಾರ್ಮಿಕರಿದ್ದಾರೆ ಎಂದು ವರದಿ ಕೊಟ್ಟಿರುವುದು ಅಚ್ಚರಿ ಮೂಡಿಸಿದೆ. ರಾಜ್ಯದಲ್ಲಿ 29,700 ಕಂದಾಯ ಗ್ರಾಮಗಳಿವೆ. ಪ್ರತಿ ಗ್ರಾಮಕ್ಕೆ ಒಬ್ಬ ಪೌರಕಾರ್ಮಿಕ ಎಂದು ಲೆಕ್ಕ ಹಾಕಿದರೂ ಇವರ ಸಂಖ್ಯೆ ಕನಿಷ್ಠ 29 ಸಾವಿರ ಮೀರುತ್ತದೆ. ಆದ್ದರಿಂದ ಸಫಾಯಿ ಕರ್ಮಚಾರಿ ಆಯೋಗವು ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿ ಅಧ್ಯಕ್ಷರ, ಅಧಿಕಾರಿಗಳ ಸಭೆ ನಡೆಸಿ ನಿಖರ ಮಾಹಿತಿ ಪಡೆದುಕೊಳ್ಳಬೇಕು ಎಂದು ಸೂಚನೆ ನೀಡಿದರು.

ಶಿಕ್ಷಣದಿಂದ ಮಾತ್ರ ಬದಲಾವಣೆ:
ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಪೌರಕಾರ್ಮಿಕರ ಮಕ್ಕಳಿಗೆ ಶೇ.5ರಷ್ಟು ಸೀಟು ನೀಡಲಾಗುತ್ತದೆ. ಅದಕ್ಕೆ ತಗಲುವ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ವಿದ್ಯೆಯಿಂದ ಮಾತ್ರ ಬದುಕು, ಬದಲಾವಣೆ ಸಾಧ್ಯ. ಹೀಗಾಗಿ, ಪೌರಕಾರ್ಮಿಕರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು. ಕುಡಿತದ ಚಟಕ್ಕೆ ಒಳಗಾಗಬಾರದು. 5 ಸಾವಿರ ರೂ. ಕೊಡುತ್ತಾರೆಂಬ ಆಸೆಗೆ ಮಲದ ಗುಂಡಿಗೆ ಇಳಿಯಬಾರದು ಎಂದರು.
ಮಲ ಹೊರುವವರ ಸಂಖ್ಯೆ 10 ಸಾವಿರ
ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಮಾತನಾಡಿ, ರಾಜ್ಯದಲ್ಲಿ ಮಲ ಹೊರುವ ಪದ್ಧತಿಯನ್ನು ತಡೆಯುವುದು ಸವಾಲಿನ ಕೆಲಸವಾಗಿದೆ. 10 ಸಾವಿರ ಜನರು ಇದರಲ್ಲಿ ತೊಡಗಿದ್ದಾರೆ. ತಲೆ ಮೇಲೆ ಮಲ ಹೊರುವ ಪದ್ಧತಿ ಈಗಲೂ ಇದೆ. ದಂಡ, ಶಿಕ್ಷೆ ಕೊಟ್ಟರೂ ಈ ಪದ್ಧತಿ ನಿಂತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅಧಿಕ ಅಂಕ ಗಳಿಸಿದ ಪೌರಕಾರ್ಮಿಕರ 81 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಮೇಯರ್ ಸುನಂದಾ ಫಾಲನೇತ್ರ, ಶಾಸಕ ಎಲ್.ನಾಗೇಂದ್ರ, ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ನಿಗಮ ಮಂಡಳಿಗಳ ಅಧ್ಯಕ್ಷರಾದ ಮಹದೇವಯ್ಯ, ಕಾ.ಪು.ಸಿದ್ದಲಿಂಗಸ್ವಾಮಿ, ಎಂ.ಶ್ರೀನಿವಾಸಗೌಡ, ಎಂ.ಶಿವಕುಮಾರ್, ಆರ್.ರಘು, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ, ಜಿಪಂ ಸಿಇಒ ಬಿ.ಆರ್.ಪೂರ್ಣಿಮಾ ಇದ್ದರು.

ರಾಜ್ಯದಲ್ಲಿ 90 ಜನರು ಮಲದ ಗುಂಡಿಗಿಳಿದು ಮೃತಪಟ್ಟಿದ್ದಾರೆ. ಹೀಗಾಗಿ, ಯಂತ್ರಗಳನ್ನು ಹೊಂದಿಲ್ಲದ ಸ್ಥಳೀಯ ಸಂಸ್ಥೆಗಳಿಗೆ ನೋಟಿಸ್ ಕೊಡಬೇಕು. ಅಲ್ಲಿನ ಅಧಿಕಾರಿಗಳಿಗೆ ದಂಡ ವಿಧಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಗಮನಹರಿಸಬೇಕು.-ಸಚಿವ ಗೋವಿಂದ ಕಾರಜೋಳ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net