ಎರಡು ಕಿಮೀ ಪೈಪ್‌ಲೈನ್ ಹಾಕಿದ್ದೇ ಸಾಧನೆ!

Water No water
Cropped shot of an unrecognisable woman holding her hands out for water from a tap in nature
Published on

ಆನಂದ ಭಮ್ಮನ್ನವರ ಚಿಕ್ಕೋಡಿ

ರಾಯಬಾಗ ತಾಲೂಕಿನ ಕೆಂಪಟ್ಟಿ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಮಂಜೂರಾಗಿ ವರ್ಷಗಳೇ ಕಳೆದಿದೆ. ಆದರೆ, ಎರಡು ಕಿಮೀ ಪೈಪ್‌ಲೈನ್ ಹಾಕಿದ್ದು ಮಾತ್ರ ಗುತ್ತಿಗೆ ಪಡೆದ ಸಂಸ್ಥೆಯ ಸಾಧನೆಯಾಗಿದೆ. ಹೀಗಾಗಿ ಶಾಶ್ವತ ಕುಡಿಯುವ ನೀರು ಕನಸು ಕಂಡಿರುವ ಜನರಿಗೆ ಇದು ನಿರಾಸೆ ಮೂಡಿಸಿದೆ.

ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ ಕಾರ್ಯಕ್ರಮದಡಿ 2023 ಮಾರ್ಚ್‌ನಲ್ಲಿ ಯೋಜನೆ ಅನುಮೋದನೆಗೊಂಡಿದೆ. ಕಾಮಗಾರಿ ಪೂರ್ಣಗೊಳಿಸಲು ಮೇ 2024ರ ಅವಧಿ ನೀಡಲಾಗಿತ್ತು. ಆದರೆ, ಅವಧಿ ಮುಗಿದರೂ ಕಾಮಗಾರಿ ಅನುಷ್ಠಾನಗೊಂಡಿಲ್ಲ.

47 ಕೋಟಿ ರೂ.ವೆಚ್ಚ: ಕೆಂಪಟ್ಟಿ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಅಂದಾಜು 47 ಕೋಟಿ ರೂ. ವ್ಯಯಿಸಲಾಗುತ್ತಿದೆ. ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಮಾಂಜರಿ ಬ್ಯಾರೇಜ್ ಹಿನ್ನೀರನ್ನು ಪೈಪ್‌ಲೈನ್ ಮೂಲಕ ಯೋಜನೆ ವ್ಯಾಪ್ತಿಗೆ ಬರುವ ಕೆಂಪಟ್ಟಿ, ಜೋಡಕುರಳಿ, ನಂದಿಕುರಳಿ ಮತ್ತು ನಸಲಾಪುರ ಗ್ರಾಮಗಳಿಗೆ ನೀರು ಬಳಸಲು ಯೋಜನೆ ರೂಪಿಸಲಾಗಿದೆ. ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಕಾಮಗಾರಿ ಹೊಣೆ ಹೊತ್ತಿದೆ. ಮಹಾರಾಷ್ಟ್ರದ ಸಾಂಗ್ಲಿ ಪಿ.ಟಿ ಮಾಳಿ ಪ್ರೈ.ಲಿ. ಸಂಸ್ಥೆಗೆ ಕಾಮಗಾರಿ ಗುತ್ತಿಗೆ ನೀಡಲಾಗಿದೆ.

ಕೆಂಪಟ್ಟಿ ಬಹುಗ್ರಾಮ ಕುಡಿಯುವ ನೀರು ಯೋಜನೆ ನಿರ್ಮಾಣ ಕಾಮಗಾರಿ ಅನುಷ್ಠಾನಗೊಳಿಸಲು ಗುತ್ತಿಗೆ ಪಡೆದ ಸಂಸ್ಥೆಯ ವಿಳಂಬ ನೀತಿಯಿಂದ ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ. ಗುತ್ತಿಗೆ ಪಡೆದ ಸಂಸ್ಥೆ ಸರ್ಕಾರಕ್ಕೆ ಸಲ್ಲಿಸಿರುವ ಸಮಗ್ರ ಯೋಜನಾ ವರದಿ(ಡಿಪಿಆರ್) ಅನುಮೋದನೆ ವಿಳಂಬಗೊಂಡಿದೆ. ಗುತ್ತಿಗೆ ಪಡೆದ ಸಂಸ್ಥೆ ಇಲ್ಲಿಯವರೆಗೆ ಕೇವಲ 2 ಕಿಮೀ ಪೈಪ್‌ಲೈನ್ ಕಾಮಗಾರಿ ಮಾತ್ರ ಪೂರ್ಣಗೊಳಿಸಿದೆ. ಕಾಮಗಾರಿ ಮತ್ತೆ ಯಾವಾಗ ಆರಂಭಗೊಳ್ಳುವುದು, ಯಾವಾಗ? ಮುಕ್ತಾಯವಾಗಲಿದೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಜಿಪಂ ಸಿಇಒ ಎಚ್ಚರಿಕೆಗೂ ಬಗ್ಗಿಲ್ಲ: ಚಿಕ್ಕೋಡಿ ವಿಭಾಗದ ಕೆಂಪಟ್ಟಿ ಸೇರಿದಂತೆ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಕಾಮಗಾರಿಗಳನ್ನು ನಿಗದಿತ ಅವಧಿಯದಲ್ಲಿ ಪೂರ್ಣಗೊಳಿಸದೆ ಇದ್ದ ಸಂದರ್ಭದಲ್ಲಿ ಟೆಂಡರ್ ರದ್ದುಗೊಳಿಸಲಾಗುವುದು ಎಂದು ಕಳೆದ ಆರು ತಿಂಗಳ ಹಿಂದೆ ನಡೆದ ಸಭೆಯಲ್ಲಿ ಜಿಪಂ ಸಿಇಒ ಎಚ್ಚರಿಕೆ ನೀಡಿದ್ದರೂ ಗುತ್ತಿಗೆದಾರರು ಮಾತ್ರ ಕ್ಯಾರೇ ಎಂದಿಲ್ಲ. ಹೀಗಾಗಿ ಜಿಪಂ ಸಿಇಒ ಮಾತು ಎಂದರೆ ಗುತ್ತಿಗೆದಾರರಿಗೆ ಕಿಮ್ಮತ್ತೇ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.

ರಾಯಬಾಗ ತಾಲೂಕಿನ ಕೆಂಪಟ್ಟಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಆರಂಭಿಸಲು ವಿಳಂಬವಾಗಿದೆ. ಕೆಲವು ಕಡೆ ಪೈಪ್‌ಲೈನ್ ಕಾಮಗಾರಿಗೆ ಅಡಚಣೆ ಇದೆ. ಈ ಕುರಿತು ಗುತ್ತಿಗೆ ಪಡೆದ ಸಂಸ್ಥೆಗೆ ಕಾಮಗಾರಿ ಆರಂಭಿಸಲು ಸೂಚನೆ ನೀಡಲಾಗಿದೆ. ಆದಷ್ಟು ಬೇಗ ಕಾಮಗಾರಿ ಆರಂಭಿಸಿ ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು.

| ಸುಭಾಷ ಭಜಂತ್ರಿ, ಎಇಇ , ಗ್ರಾಮೀಣ ಕುಡಿಯುವ ನೀರು ಯೋಜನೆ ಇಲಾಖೆ,ರಾಯಬಾಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net