

ಶಿವಶಂಕರ್ ಕುದೂರು
ಗ್ರಾಮದಿಂದ 1 ಕಿ.ಮೀ. ದೂರದಲ್ಲಿ ನಿರ್ಮಾಣಗೊಂಡು, ಶುಕ್ರವಾರವಷ್ಟೇ (ಜೂ.24) ತರಾತುರಿಯಾಗಿ ಉದ್ಘಾಟನೆಗೊಂಡಿದ್ದ ನಾಡಕಚೇರಿಯ ಕಿಟಿಕಿ ಎರಡೇ ದಿನಕ್ಕೆ ಕಳಚಿಕೊಂಡಿದೆ. ಇದರಿಂದಾಗಿ ನಾಡಕಚೇರಿಯ ಹೊಸ ಕಟ್ಟಡದ ನಿರ್ಮಾಣ ಕಾಮಗಾರಿಯ ಬಗ್ಗೆ ಸಾರ್ವಜನಿಕರಿಂದ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
ಮಾಗಡಿ ತಾಲೂಕು ಕುದೂರು ಗ್ರಾಮದ ಬಸ್ ನಿಲ್ದಾಣದ ಸಮೀಪ ಖಾಸಗಿ ಕಟ್ಟಡದಲ್ಲಿ ಕುದೂರಿನ ನಾಡಕಚೇರಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿತ್ತು. ದುಬಾರಿ ಬಾಡಿಗೆ ನೀಡುವ ಕಷ್ಟದಿಂದ ಪಾರಾಗಲು ಈ ಕಚೇರಿಗೆ 18.84 ಲಕ್ಷ ರೂ. ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಿಸಿ, ಜೂ.24ರಂದು ಉದ್ಘಾಟಿಸಲಾಗಿತ್ತು. ಕಟ್ಟಡ ಉದ್ಘಾಟನೆಗೊಂಡು 2 ದಿನ ಕಳೆಯುವಷ್ಟರಲ್ಲಿ ಅದರ ನಿರ್ಮಾಣದ ಹುಳುಕು ಬಹಿರಂಗಗೊಂಡಿದೆ. ಇದು ಹೋಬಳಿಯಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ.
ಉದ್ದೇಶಪೂರ್ವಕವಾಗಿ ಗ್ರಾಮದ ಹೊರಗೆ ನಿರ್ಮಾಣ: ನಾಡಕಚೇರಿಗೆ ಸ್ವಂತ ಕಟ್ಟಡ ಕಟ್ಟಲು ಕುದೂರು ಗ್ರಾಮದಲ್ಲೇ ಸಾಕಷ್ಟು ಸರ್ಕಾರಿ ಭೂಮಿ ಲಭ್ಯವಿತ್ತು. ಆದರೆ, ಉದ್ದೇಶಪೂರ್ವಕವಾಗಿ ಗ್ರಾಮದಿಂದ ಹೊರಗೆ, 1 ಕಿಮೀ ದೂರದಲ್ಲಿ ಕಟ್ಟಡವನ್ನು ನಿರ್ಮಿಸಲಾಗಿದೆ. ಇದರಿಂದ ಜನರಿಗೆ ನಾಡಕಚೇರಿಗೆ ಹೋಗಿಬರಲು ಅನನುಕೂಲವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಜೆರಾಕ್ಸ್ ಮಾಡಿಸಲು ಗ್ರಾಮಕ್ಕೇ ಬರಬೇಕು: ಹೊಸ ನಾಡಕಚೇರಿ ಬಳಿ ಯಾವುದೇ ಸ್ಟೇಷನರಿ ಅಂಗಡಿಗಳಿಲ್ಲ. ಜೆರಾಕ್ಸ್ ಮಾಡಿಸಲು ಕುದೂರು ಗ್ರಾಮಕ್ಕೇ ಬಂದು, ಕಚೇರಿಗೆ ಹೋಗುವ ಪರಿಸ್ಥಿತಿ ಇದೆ. ಜನರಿಗೆ ಕೂರಲು ಆಸನದ ವ್ಯವಸ್ಥೆ ಮಾಡಿಲ್ಲ. ಇವು ಸೇರಿ ಇನ್ನೂ ಅನೇಕ ಅವ್ಯವಸ್ಥೆಯಿಂದ ಕೂಡಿರುವ ನಾಡಕಚೇರಿಯಿಂದ ಯಾವ ಬಗೆಯ ಸೇವೆಯನ್ನು ನಿರೀಸಲು ಸಾಧ್ಯ ಎಂದು ಮುಖಂಡ ಕೆ.ಆರ್. ಯತಿರಾಜು ಪ್ರಶ್ನಿಸಿದರು.
ಕಾಂಪೌಂಡ್ ವ್ಯವಸ್ಥೆ ಇಲ್ಲ: ನಾಡಕಚೇರಿಯ ಸುತ್ತ ಕಾಂಪೌಂಡ್ ನಿರ್ಮಿಸಲಾಗಿಲ್ಲ. ಸಿಸಿ ಕ್ಯಾಮರಾ ಅಳವಡಿಸಿಲ್ಲ. ಇದರಿಂದಾಗಿ ಕಚೇರಿಯ ಆವರಣ ಪುಂಡರ ತಾಣವಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.
ಕುದೂರು ನಾಡಕಚೇರಿಗೆ ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾದಾಗಿನಿಂದಲೂ ಸಾಕಷ್ಟು ಟೀಕೆಗಳಿಗೆ ಗುರಿಯಾಗಿತ್ತು. ಉದ್ಘಾಟನೆಗೊಂಡ ಎರಡೇ ದಿನಕ್ಕೆ ಕಟ್ಟಡದ ಕಿಟಕಿಗಳು ಕಿತ್ತುಬಂದಿರುವುದು ಈ ಟೀಕೆಗಳನ್ನು ಪುಷ್ಟೀಕರಿಸುತ್ತವೆ. ಇಂಥ ಕಳಪೆ ಕಾಮಗಾರಿಗೆ 18 ಲಕ್ಷ ರೂ. ವೆಚ್ಚವಾಗಿದ್ದರ ಬಗ್ಗೆ ಅಧಿಕಾರಿಗಳು ಮಾಹಿತಿ ಒದಗಿಸಲಿ. ಕೆ.ಆರ್. ಯತಿರಾಜು, ಮುಖಂಡ ಕುದೂರು ನಾಡಕಚೇರಿಯ ಹೊಸ ಕಟ್ಟಡದ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದಿವೆ. ಸ್ಥಳಕ್ಕೆ ಭೇಟಿ ನೀಡಿ, ಕಟ್ಟಡದ ವಾಸ್ತವ ಸ್ಥಿತಿಗತಿ ಪರಿಶೀಲಿಸುವೆ. ಎ. ಮಂಜುನಾಥ್ ಮಾಗಡಿ ಶಾಸಕ