

ಹಾವೇರಿ: ಜಿಲ್ಲೆಯಲ್ಲಿ ಮೇ, ಜೂನ್ನಲ್ಲಿ ಅಬ್ಬರಿಸಿದ್ದ ಕರೊನಾ ಸೋಂಕು ಜುಲೈನಲ್ಲಿ ಇಳಿಮುಖದತ್ತ ಸಾಗಿದೆ. ಜುಲೈ 1ರಿಂದ ಇದುವರೆಗೆ ಕೇವಲ 148 ಜನರಲ್ಲಿ ವೈರಸ್ ಪತ್ತೆಯಾಗಿದೆ. ಇದರಿಂದಾಗಿ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಮೇನಲ್ಲಿ ಬರೋಬ್ಬರಿ 8,463 ಜನರಲ್ಲಿ ಕಾಣಿಸಿದ್ದ ಸೋಂಕು, 226 ಜನರನ್ನು ಬಲಿ ಪಡೆದಿತ್ತು. ಜೂನ್ನಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗಿತ್ತಾದರೂ ಸಾವಿನ ಪ್ರಮಾಣ ಮಾತ್ರ ಏರಿಕೆಯಾಗಿತ್ತು. ಜೂನ್ನಲ್ಲಿ 713 ಜನರಲ್ಲಿ ಕೋವಿಡ್ ಸೋಂಕು ತಗುಲಿ, 151 ಜನರು ಮೃತಪಟ್ಟಿದ್ದರು. ಹೀಗಾಗಿ, ಜನರಲ್ಲಿ ಕರೊನಾ ಭೀತಿ ಹೆಚ್ಚಾಗಿತ್ತು. ಆದರೆ, ಜುಲೈನಲ್ಲಿ ಸೋಂಕು ಹಾಗೂ ಸಾವಿನ ಸಂಖ್ಯೆ ತಗ್ಗಿದೆ. ಜುಲೈ 1ರಿಂದ 20ರವರೆಗೆ 18 ಜನರು ಮೃತಪಟ್ಟಿದ್ದಾರೆ.
ಸಕ್ರಿಯ ಪ್ರಕರಣಗಳ ಸಂಖ್ಯೆ ಎರಡಂಕಿಯೊಳಗೆ:
ಮೇ, ಜೂನ್ನಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಮೂರಂಕಿ ದಾಟಿತ್ತು. ಜುಲೈ ಮೊದಲ ವಾರದಲ್ಲಿ ಹೆಚ್ಚಿದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ 2ನೇ ವಾರದಿಂದ ಎರಡಂಕಿಗೆ ಇಳಿದಿವೆ. ಸಾವಿನ ಪ್ರಮಾಣವೂ ಮೊದಲಿಗಿಂತ ಕಡಿಮೆಯಾಗಿದೆ. ಆಸ್ಪತ್ರೆಗಳಲ್ಲಿ ಬೆಡ್ಗಳು ಸಿಗದೆ ಇದ್ದ ಸ್ಥಿತಿಯಿಂದ ಸಾಕಷ್ಟು ರೋಗಿಗಳು ಆಸ್ಪತ್ರೆಗೆ ದಾಖಲಾಗುವ ಮುನ್ನವೇ ಕರೊನಾ ಹೊಡೆತಕ್ಕೆ ನಲುಗಿ ಆಸ್ಪತ್ರೆ ಸೇರಿದರೂ ಪ್ರಾಣ ಕಳೆದುಕೊಂಡಿದ್ದರು.
ಮಹಾಮಾರಿ ಹಾವಳಿ ನಿಯಂತ್ರಣಕ್ಕೆ ಜಿಲ್ಲಾಡಳಿತ, ಆರೋಗ್ಯ ಇಲಾಖೆಯು ಜಿಲ್ಲೆಯಲ್ಲಿ ಮನೆಮನೆ ಸಮೀಕ್ಷೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಅಭಿಯಾನ ಮೂಲಕ ಕೈಗೊಂಡಿದ್ದು ಈಗ ಫಲ ಕೊಟ್ಟಿದೆ. ಹಳ್ಳಿಗಳಲ್ಲಿನ ಸೋಂಕಿತರ ಮನವೊಲಿಸಿ ಹೋಮ್ ಐಸೋಲೇಷನ್ ಬದಲು ಕೋವಿಡ್ ಕೇರ್ ಸೆಂಟರ್ಗಳಿಗೆ ದಾಖಲಿಸಲಾಯಿತು. ಗ್ರಾಮದ ಯಾವ ಓಣಿಯಲ್ಲಿ ಹೆಚ್ಚು ಸೋಂಕಿತರು ಕಂಡುಬಂದಿದ್ದಾರೆಯೋ ಅವರ ಪ್ರಾಥಮಿಕ, ದ್ವಿತೀಯ ಸಂರ್ಪತರ ಪತ್ತೆಗಾಗಿ ಅಲ್ಲಿನ ಪ್ರತಿಯೊಬ್ಬರ ಗಂಟಲ ದ್ರವ ಮಾದರಿ ಪರೀಕ್ಷೆ ಮಾಡಲಾಯಿತು. ಕರೊನಾ ಲಕ್ಷಣವುಳ್ಳವರಿಗೆ ಔಷಧ ನೀಡಲಾಯಿತು. ಪಾಸಿಟಿವ್ ಬಂದವರಲ್ಲಿ ಅವಶ್ಯವಿದ್ದವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಇದರಿಂದಾಗಿ ಸೋಂಕು ಹರಡುವಿಕೆ ಪ್ರಮಾಣ ಇಳಿಕೆಯಾಯಿತು.
ಕರೊನಾ ಟೆಸ್ಟ್ ಹೆಚ್ಚಳ:
ಅಭಿಯಾನ ಮೂಲಕ ಪ್ರತಿದಿನ ಸೋಂಕಿನ ಲಕ್ಷಣವಿದ್ದವರೊಂದಿಗೆ ವಿವಿಧ ಕಾರ್ಯಗಳಿಗೆ ಬೇರೆಡೆ ಸಂಚರಿಸಿದವರನ್ನು ಕರೊನಾ ಟೆಸ್ಟ್ಗೆ ಒಳಪಡಿಸಲಾಯಿತು. ಪ್ರತಿ ತಾಲೂಕಿನಲ್ಲಿ ನಿತ್ಯ 350ರಿಂದ 400 ಜನರ ಟೆಸ್ಟ್ ಕಡ್ಡಾಯ ಮಾಡಿದ್ದಲ್ಲದೆ, ಜಿಲ್ಲೆಯಲ್ಲಿ ಪ್ರತಿದಿನ 2,500ಕ್ಕೂ ಹೆಚ್ಚು ಜನರ ಪರೀಕ್ಷೆ ನಡೆಸಲಾಯಿತು. ಇದರಿಂದ ಸೋಂಕಿತರು ಬಹುಬೇಗನೆ ಪತ್ತೆಯಾಗಿ ಆರೈಕೆಗೆ ದಾಖಲಾದರು. ಅವರಿಂದ ಮತ್ತೊಬ್ಬರಿಗೆ ಸೋಂಕು ಹರಡುವುದನ್ನು ತಪ್ಪಿಸಲಾಯಿತು. ಲಸಿಕಾಕರಣ ಅಭಿಯಾನ ಹಮ್ಮಿಕೊಂಡು ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಹಾಕಿಸಲಾಯಿತು. ಇಂತಹ ಕ್ರಮಗಳಿಂದ ಜಿಲ್ಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಬಂದಿದೆ.
3ನೇ ಅಲೆ ತಡೆಯಲು ಮುನ್ನೆಚ್ಚರಿಕೆ
ಸಂಭವನೀಯ 3ನೇ ಅಲೆಯು ಮಕ್ಕಳಿಗೆ ಹರಡದಂತೆ ತಡೆಯಲು ಆರೋಗ್ಯ ಇಲಾಖೆಯಿಂದ ಅವರ ಆರೋಗ್ಯ ತಪಾಸಣೆ ಕೈಗೊಳ್ಳಲಾಗಿದೆ. ಆರೋಗ್ಯ ಸಮಸ್ಯೆಯಿದ್ದವರನ್ನು ಗುರುತಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಹೀಗಾಗಿ, 3ನೇ ಅಲೆ ಭೀತಿಯೂ ಸ್ವಲ್ಪ ಕಡಿಮೆಯಾಗಿದೆ.
ಇನ್ನಷ್ಟು ಎಚ್ಚರಿಕೆ ಅಗತ್ಯ
ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗಿದ್ದರೂ ಜನರು ಜಾಗ್ರತೆ ವಹಿಸುವ ಅಗತ್ಯವಿದೆ. ಮಾಸ್ಕ್ ಧರಿಸುವುದು, ಪರಸ್ಪರ ಅಂತರ ಹಾಗೂ ಸ್ವಚ್ಛತೆ ಕಾಪಾಡಿಕೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸಬಾರದು ಎಂದು ಆರೋಗ್ಯ ಇಲಾಖೆ ಮನವಿ ಮಾಡಿದೆ.
ನಾನಾ ಕ್ರಮಗಳನ್ನು ಕೈಗೊಂಡಿದ್ದರಿಂದ ಜಿಲ್ಲೆಯಲ್ಲಿ ಕರೊನಾ ನಿಯಂತ್ರಣಕ್ಕೆ ಬಂದಿದೆ. 67 ಪ್ರಾಥಮಿಕ, 4 ನಗರ, 5 ಸಮುದಾಯ ಆರೋಗ್ಯ ಕೇಂದ್ರ ಹಾಗೂ ಎಲ್ಲ ತಾಲೂಕಾಸ್ಪತ್ರೆಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರು, ಸಿಬ್ಬಂದಿ ಪ್ರತಿದಿನ ತಮ್ಮ ವ್ಯಾಪ್ತಿ ಹಳ್ಳಿಗಳಿಗೆ ತೆರಳಿ ಆರೋಗ್ಯ ಸೇವೆ ಒದಗಿಸಿದರು. ಇದು ಸಹ ಸೋಂಕು ನಿಯಂತ್ರಣಕ್ಕೆ ಸಹಕಾರಿಯಾಯಿತು. ಸಂಭವನೀಯ 3ನೇ ಅಲೆ ನಿಯಂತ್ರಣಕ್ಕಾಗಿ ಮಕ್ಕಳ ಪ್ರತ್ಯೇಕ ವಾರ್ಡ್, ಬೆಡ್ಗಳನ್ನು ನಿರ್ವಿುಸಲಾಗುತ್ತಿದೆ. ಎಲ್ಲ ಆಸ್ಪತ್ರೆಗಳಲ್ಲಿ ಆಮ್ಲಜನಕ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ.| ಡಾ. ಎಚ್.ಎಸ್. ರಾಘವೇಂದ್ರಸ್ವಾಮಿ, ಡಿಎಚ್ಒ, ಹಾವೇರಿ