

ಬಾಗಲಕೋಟೆ: ನಮ್ಮ ಸರ್ಕಾರ ವಿರುದ್ಧ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿಲ್ಲ. ಅದನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದೀರಿ. ಪಿಫ್ಐ ಸಂಘಟನೆ ಬ್ಯಾನ್ ಮಾಡಿ ಅಂತ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.
ನಗರದ ಹೊಸ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಇಂತಹ ಸಂಘಟನೆಗಳು ಬೆಳೆಯಬಾರದು. ತಲೆ ಎತ್ತಬಾರದು. ದೇಶ ದ್ರೋಹಿ ಕೆಲಸ ಮಾಡುವ ಸಂಘಟನೆಗಳ ವಿರುದ್ಧ ಅವರ ಸಿಟ್ಟು ಹೊರ ಹಾಕಿದ್ದಾರೆ. ಎಬಿವಿಪಿ ನಮ್ಮ ಸರ್ಕಾರ ವಿರುದ್ಧ ಹೋರಾಟ ಮಾಡುತ್ತಿಲ್ಲ ಎಂದರು.
ನಳಿನಕುಮಾರ ಕಟೀಲ್ ಕಾರಿಗೆ ಮುತ್ತಿಗೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಒಂದು ಸಾವಿರ ಎರಡು ಸಾವಿರ ಜನ ಸೇರಿರುತ್ತಾರೆ. ದೇಶ ಭಕ್ತರ ಜೊತೆಯಲ್ಲಿ ಕ್ರಿಮಿನಲ್ಸ್ ಗಳು ಸೇರಿರುತ್ತಾರೆ. ಒಬ್ಬರು, ಇಬ್ಬರು ಕಲ್ಲು ಹೊಡೆಯೋದು. ವಿರುದ್ಧ ಧಿಕ್ಕಾರ ಕೂಗೋದು ಅಂತವೆಲ್ಲ ಮಾಡಿರುತ್ತಾರೆ. ನಮ್ಮ ಸಂಘಟನೆಯವರು, ನಮ್ಮ ಪಕ್ಷದ ಕಾರ್ಯಕರ್ತರು ದೇಶ ಭಕ್ತರು ಎಂದು ಹೇಳಿದರು. ಬಸವರಾಜ ಬೊಮ್ಮಾಯಿ ಅವರನ್ನ ಬೆಬಿಲೋನಿಯನ್ ಕ್ರೂರ ದೊರೆ ಹಮ್ಮುರಾಬಿಗೆ ಹೋಲಿಸಿ ಫೇಸ್ ಬುಕ್ ನಲ್ಲಿ ಬರೆದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯನವರಿಗೆ ಹೇಳಿಕೊಳ್ಳಲು ಮಾಡಿದಂತಹ ಕೆಲಸ ಏನು ಇಲ್ಲ. ಅದಕ್ಕಾಗಿ ಇಂತಹ ಗಿಮಿಕ್ ಗಳನ್ನ ಮಾಡುತ್ತಾ ಇರುತ್ತಾರೆ. ಅವರ ವಯಕ್ತಿಕ ಹುಟ್ಟು ಹಬ್ಬ ಆಚರಿಸಿಕೊಳ್ಳುವ ವಿಚಾರಕ್ಕೆ ನಾನೇನು ಹೇಳುವುದು ಇರುತ್ತದೆ. ಅವರ ಪಕ್ಷದ ನಾಯಕರಲ್ಲಿ ಹೊಂದಾಣಿಕೆ ಇಲ್ಲ. ಅದಕ್ಕಾಗಿ ಇಡೀ ಕಾಂಗ್ರೆಸ್ ಪಕ್ಷ ಗೊಂದಲ ಗೂಡಾಗಿದೆ. ಮೂರು ಗುಂಪುಗಳಾಗಿ ಕಾರ್ಯಕರ್ತರು ಒಬ್ಬೊಬ್ಬರಿಗೆ ಒಬ್ಬೊಬ್ಬರು ಜೈ ಜೈ ಅಂತಿದ್ದಾರೆ ಎಂದು ವ್ಯಂಗ್ಯವಾಡಿದರು.