

ಬೀದರ್: ಭಾರತೀಯ ಜೀವ ವಿಮಾ ನಿಗಮವು ಭಾರತೀಯ ಕುಟುಂಬ ಯೋಜನಾ ಸಂಘ(ಎಫ್‍ಪಿಎಐ)ದ ಬೀದರ್ ಶಾಖೆಗೆ ಟಾಟಾ ವಿಂಗರ್ ವಾಹನ ಕೊಡುಗೆಯಾಗಿ ನೀಡಿದೆ.
ನಗರದ ಸಂಘದ ಶಾಖೆ ಕಚೇರಿಯಲ್ಲಿ ಭಾರತೀಯ ಜೀವ ವಿಮಾ ನಿಗಮದ ದಕ್ಷಿಣ ವಲಯ ವ್ಯವಸ್ಥಾಪಕ ಜಗನ್ನಾಥ ಅವರು ಸಂಘದ ಪದಾಧಿಕಾರಿಗಳಿಗೆ ವಾಹನ ಹಸ್ತಾಂತರಿಸಿದರು.
ಭಾರತೀಯ ಕುಟುಂಬ ಯೋಜನಾ ಸಂಘ ನಿರಂತರ ಆರೋಗ್ಯ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಸಮುದಾಯಕ್ಕೆ ಇನ್ನೂ ಹೆಚ್ಚಿನ ಆರೋಗ್ಯ ಸೇವೆ ಒದಗಿಸಲು ನೆರವಾಗುವ ದಿಸೆಯಲ್ಲಿ ಸಂಘಕ್ಕೆ ಕೊಡುಗೆ ರೂಪದಲ್ಲಿ ವಾಹನ ಕೊಡಲಾಗಿದೆ ಎಂದು ತಿಳಿಸಿದರು.
ಭಾರತೀಯ ಕುಟುಂಬ ಯೋಜನಾ ಸಂಘದ ಕೇಂದ್ರ ಕಚೇರಿಯ ಮಾಜಿ ಉಪಾಧ್ಯಕ್ಷೆ ಪೂರ್ಣಿಮಾ ಜಿ ಅವರು, ಎಫ್‍ಪಿಎಐ ಚಟುವಟಿಕೆ ಕುರಿತು ಮಾತನಾಡಿದರು.
ಸಂಘದ ಕೇಂದ್ರ ಕಚೇರಿ ಗೌರವ ಖಜಾಂಚಿ ಡಾ. ಆರತಿ ರಘು, ಬೀದರ್ ಶಾಖೆ ಅಧ್ಯಕ್ಷ ಡಾ. ನಾಗೇಶ ಪಾಟೀಲ, ಭಾರತೀಯ ಜೀವ ವಿಮಾ ನಿಗಮದ ವಿಭಾಗೀಯ ವ್ಯವಸ್ಥಾಪಕ ವಿದ್ಯಾಧರ, ರಾಯಚೂರು ವಿಭಾಗೀಯ ಕಚೇರಿಯ ಮುಖ್ಯ ಅಧಿಕಾರಿ ಸುಖೇಶ, ಹೇಮಲಾ ರಾಠೋಡ್, ಸ್ಥಳೀಯ ಶಾಖೆ ವ್ಯವಸ್ಥಾಪಕ ಸಿ.ಎನ್. ಸ್ವಾಮಿ, ಡಾ. ವಿಜಯ ಕೊಂಡಾ ಇದ್ದರು.
ಎಫ್‍ಪಿಎಐ ಸ್ಥಳೀಯ ಶಾಖೆ ಕಾರ್ಯಕಾರಿಣಿ ಸದಸ್ಯ ಸುಬ್ರಹ್ಮಣ್ಯ ಪ್ರಭು ಸ್ವಾಗತಿಸಿದರು. ಶಾಖಾ ವ್ಯವಸ್ಥಾಪಕ ಶ್ರೀನಿವಾಸ ಬಿರಾದಾರ ವಂದಿಸಿದರು.