ಎಫ್‌ಎಸ್‌ಓಗಳಿಂದ ಏಕಮುಖ ನಿರ್ಧಾರ

25 ckm 8 vijay kumar
ಜಿಲ್ಲಾ ನಾಗರೀಕ ಮತ್ತು ರೈತ ಹೋರಾಟ ಸಮಿತಿ ಅಧ್ಯಕ್ಷ ಎಸ್. ವಿಜಯ್‌ಕುಮಾರ್
Published on

ಚಿಕ್ಕಮಗಳೂರು: ಸೆಕ್ಷನ್ ೪(೧) ಮೀಸಲು ಅರಣ್ಯ ಘೋಷಣೆಯಾಗಿರುವ ಬ್ಲಾಕ್‌ಗಳಿಗೆ ಸೆಟಲ್‌ಮೆಂಟ್ ಮಾಡಲು ನಿಯೋಜಿಸಿರುವ ಅರಣ್ಯ ವ್ಯವಸ್ಥಾಪಕರು ರೈತರ ಪರವಾಗಿರದೆ ಏಕಮುಖ ನಿರ್ಧಾರ ತೆಗೆದುಕೊಳ್ಳುತ್ತಿದ್ದು, ಅವರ ವಿರುದ್ಧ ಗೋಬ್ಯಾಕ್ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ನಾಗರೀಕ ಮತ್ತು ರೈತ ಹೋರಾಟ ಸಮಿತಿ ಅಧ್ಯಕ್ಷ ಎಸ್. ವಿಜಯ್‌ಕುಮಾರ್ ಎಚ್ಚರಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆಕ್ಷನ್ ೪(೧) ಮೀಸಲು ಅರಣ್ಯ ಸಮಸ್ಯೆ ಬಗ್ಗೆ ಬೆಂಗಳೂರಿನಲ್ಲಿ ಉನ್ನತ ಅಧಿಕಾರಿಗಳ ಮಟ್ಟದಲ್ಲಿ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು, ಜಿಲ್ಲಾಧಿಕಾರಿ, ಅರಣ್ಯಾಧಿಕಾರಿಗಳು, ಎಫ್‌ಎಸ್‌ಒ ಸೇರಿದಂತೆ ಅರಣ್ಯ ಸಚಿವರು ಮತ್ತು ಹಿರಿಯ ಅಧಿಕಾರಿಗಳು ಸಭೆ ನಡೆಸಿದ್ದಾರೆ ಎಂದರು.

ರೈತರು ಮನೆ ಕಟ್ಟಿಕೊಂಡು ಸಾಗುವಳಿ ಮಾಡುತ್ತಿರುವ ಭೂಮಿಯನ್ನು ಎ ಎಂದು ವರ್ಗೀಕರಿಸಿ, ರೈತರು ಸಾಗುವಳಿ ಮಾಡದೆ ಖಾಲಿ ಇರುವ ಭೂಮಿಯನ್ನ ಬಿ ಎಂದು ವರ್ಗೀಕರಿಸಿ ರೈತರಿಲ್ಲದ ಬಿ ವರ್ಗೀಕರಣದ ಭೂಮಿಯನ್ನು ಅರಣ್ಯ ಇಲಾಖೆಗೆ ನೀಡಲಿ. ಎ ವರ್ಗೀಕರಣದ ಭೂಮಿಯನ್ನು ಸರ್ಕಾರ ತೀರ್ಮಾನ ತೆಗೆದು ಕೊಳ್ಳುವವರೆಗೂ ಅದನ್ನು ಹಾಗೇ ಉಳಿಸಬೇಕು ಎಂದು ಸಭೆಯಲ್ಲಿ ತೀರ್ಮಾನವಾಗಿದೆ ಎಂದು ತಿಳಿಸಿದರು.

ಆದರೆ ಇಲಿನ ಎಫ್‌ಎಸ್‌ಒ ಅವರು ಈ ತೀರ್ಮಾನವನ್ನು ಧಿಕ್ಕರಿಸಿ ಯಥಾವತ್ತಾಗಿ ರೈತರ ಜಮೀನಿಗೆ ಭೇಟಿ ನೀಡದೆ ಸ್ಕೆಚ್ ತಯಾರಿ ಮಾಡದೆ ನ್ಯಾಯಾಲಯದ ನಿಯಮಾವಳಿಗಳನ್ನು ಪಾಲಿಸದೆ ಏಕಮುಖ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಇವರ ಧೋರಣೆ ಇದೇ ರೀತಿ ಮುಂದುವರಿದರೆ ಅವರ ವಿರುದ್ಧ ಗೋಬ್ಯಾಕ್ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಅರಣ್ಯ ಮತ್ತು ರೈತರ ಸಮಸ್ಯೆಗಳನ್ನು ಸೆಟಲ್‌ಮೆಂಟ್ ಮಾಡಲು ಅರಣ್ಯ ವ್ಯವಸ್ಥಾಪಕರನ್ನು ನಿಯೋಜಸಿದ್ದು, ಇವರ ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಮೂಡಿಗೆರೆಯಲ್ಲಿ ೪(೧) ವ್ಯಾಪ್ತಿಯ ರೈತರಿಗೆ ನೊಟೀಸ್ ನೀಡಿದ್ದಾರೆ. ಈ ಎಲ್ಲ ಸಮಸ್ಯೆಗಳನ್ನು ಚುನಾಯಿತ ಜನಪ್ರತಿನಿಧಿಗಳು ಸಂಬAಧಪಟ್ಟ ಅಧಿಕಾರಿಗಳಿಗೆ ಸರಿಯಾದ ಸೂಚನೆ ನೀಡುವಂತೆ ಆಗ್ರಹಿಸಿದರು.

ಸುಪ್ರೀಂಕೋರ್ಟ್ ಸೂಚನೆಯಂತೆ ಡೀಮ್ಡ್ ಫಾರೆಸ್ಟ್ ಪರಿಷ್ಕರಣೆ ಮಾಡಲು ರಚಿಸಲಾಗಿರುವ ರಾಜ್ಯ ಮತ್ತು ಜಿಲ್ಲಾಮಟ್ಟದ ತಂಡಗಳು ಸ್ಥಳೀಯ ಸರ್ವೆ ನಂಬರ್‌ಗಳ ಜಾಗಕ್ಕೆ ಭೇಟಿನೀಡಿ ರೈತರ ಜಮೀನು, ಶಾಲಾ-ಕಾಲೇಜು, ಆಟದ ಮೈದಾನ, ಸ್ಮಶಾನ, ಸಾರ್ವಜನಿಕ ಉಪಯುಕ್ತ ಪ್ರದೇಶಗಳನ್ನು ಕೈಬಿಟ್ಟು ಹೊಸ ಪಟ್ಟಿ ತಯಾರಿಸಬೇಕು ಎಂದು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡುತ್ತೇನೆ ಎಂದರು.

ನಮೂನೆ ೫೦-೫೩ ರಲ್ಲಿ ಮಂಜೂರಾಗಿದ್ದ ಭೂಮಿಯನ್ನು ಅಕ್ರಮ ಎಂದು ಪರಿಗಣಿಸಿ ರದ್ದುಪಡಿಸಿದ್ದು, ಕೂಡಲೇ ಇದನ್ನು ಪುನರ್‌ಪರಿಶೀಲನೆ ನಡೆಸಬೇಕು. ನಿಯಮಾವಳಿಗೆ ತಿದ್ದುಪಡಿ ಮಾಡಿ ನಮೂನೆ ೫೭ರಲ್ಲಿ ಪ್ಲಾಂಟೇಶನ್ ಬೆಳೆಗಳಿಗೂ ಹಕ್ಕುಪತ್ರ ನೀಡುವಂತೆ ಕಂದಾಯ ಸಚಿವರಲ್ಲಿ ಒತ್ತಾಯ ಮಾಡಬೇಕು ಎಂದು ಜನಪ್ರತಿನಿಧಿಗಳನ್ನು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿ ಸಂಚಾಲಕ ಕೆ.ಕೆ. ರಘು, ಮುಖಂಡರಾದ ವಾಸು ಪೂಜಾರಿ, ಪೂರ್ಣೇಶ್, ಈಶ್ವರ್, ರವಿಕುಮಾರ್, ಚಂದ್ರೇಗೌಡ, ಕುಮಾರಸ್ವಾಮಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net