ಎಫ್‌ಆರ್‌ಪಿ ಮರು ಪರಿಶೀಲನೆಗೆ ಆಗ್ರಹ- ಕಬ್ಬು ಬೆಳೆಗಾರರ ಧರಣಿ

IMG_20221205_122400.jpg
Published on

ದಾವಣಗೆರೆ: ಕಬ್ಬಿಗೆ ನಿಗದಿಗೊಳಿಸಿದ ಎಫ್‌ಆರ್‌ಪಿ ಮರು ಪರಿಶೀಲನೆಗೆ ಆಗ್ರಹಿಸಿ ಬೆಂಗಳೂರಲ್ಲಿ 14 ದಿನದಿಂದ ಧರಣಿ ನಡೆಸಿದರೂ ಸರ್ಕಾರ ಎಚ್ಚೆತ್ತಿಲ್ಲ ಎಂದು ಆರೋಪಿಸಿ ಕಬ್ಬು ಬೆಳೆಗಾರರು ನಗರದಲ್ಲಿ ಸೋಮವಾರ ವಿನೂತನ ಪ್ರತಿಭಟನೆ ನಡೆಸಿದರು.

ಕೇಸರಿ ಪಟ್ಟಿ ಕಟ್ಟಲ್ಪಟ್ಟ ಕಬ್ಬಿನ ಜಲ್ಲೆಗಳೊಂದಿಗೆ ಜಯದೇವ ವೃತ್ತದಿಂದ ಮೆರವಣಿಗೆ ನಡೆಸಿ ಬಿಜೆಪಿ ಜಿಲ್ಲಾ ಕಚೇರಿ ಎದುರು ಧರಣಿ ಕೂತರು. ರಾಜ್ಯ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ತೇಜಸ್ವಿ ವಿ. ಪಟೇಲ್ ಮಾತನಾಡಿ ಬಿಜೆಪಿಗೆ ಕೇಸರಿ ಹೊರತಾಗಿ ಬೇರೆ ಬಣ್ಣ ಕಾಣುತ್ತಿಲ್ಲ. ಹಾಗಾಗಿ ಕಬ್ಬಿನ ಜಲ್ಲೆಗೆ ಕೇಸರಿ ಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ನಡೆಸಲಾಗುತ್ತಿದೆ. ಕೈ ಕೆಸರಾದರೆ ಬಾಯಿಗೆ ಮೊಸರು ಎಂಬ ಗಾದೆಯೀಗ ‘ಕೈ ಕೇಸರಿಯಾದರೆ ಬಾಯಿಗೆ ಮೊಸರು’ ಎಂಬಂತಾಗಿದೆ. ಇನ್ನಾದರೂ ಬಿಜೆಪಿ ಜನಪ್ರತಿನಿಧಿಗಳು ಕಬ್ಬು ಬೆಳೆಗಾರರ ಸಂಕಷ್ಟವನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಿ ಎಂದು ಆಗ್ರಹಿಸಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕಬ್ಬು ಬೆಳೆಗಾರರು 14 ದಿನದಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ರಾಜ್ಯ ಸರ್ಕಾರ ಮೌನ ತಾಳಿದೆ. ಕೇಂದ್ರ ಸಂಘದ ಕರೆ ಮೇರೆಗೆ ಬಿಜೆಪಿ ಜನಪ್ರತಿನಿಧಿಗಳ ಮನೆಗಳ ಬಳಿ ಧರಣಿ ನಡೆಸಲಾಗಿದೆ. ಆದರೆ ಜಿಲ್ಲೆಯಲ್ಲಿ ದಾವಣಗೆರೆಯಲ್ಲಿ ಹೆಚ್ಚು ಕಬ್ಬು ಬೆಳೆಯುವ ಕಾರಣಕ್ಕೆ ಬಿಜೆಪಿ ಪದಾಧಿಕಾರಿಗಳ ಮೂಲಕ ಸರ್ಕಾರದ ಜನಪ್ರತಿನಿಧಿಗಳಿಗೆ ಮನವಿ ರವಾನಿಸಲಾಗುವುದು ಎಂದು ಹೇಳಿದರು. ಉತ್ಪಾದನಾ ವೆಚ್ಚಕ್ಕಿಂತಲೂ ಕಡಿಮೆಯಾದ, ಎಫ್‌ಆರ್‌ಪಿಯನ್ನು ಕೇಂದ್ರ ಸರ್ಕಾರ ನಿಗದಿ ಮಾಡಿದೆ. ಸಕ್ಕರೆ ಇಳುವರಿ ಮಾನದಂಡವನ್ನು 10.25ಕ್ಕೆ ಏರಿಕೆ ಮಾಡಿದ್ದರಿಂದ ರೈತರಿಗೆ ಅನ್ಯಾಯವಾಗಿದೆ. 9.50 ಸಕ್ಕರೆ ಇಳುವರಿ ನೀಡುವ ಕಬ್ಬಿಗೆ 3500 ರೂ. ದರ ಘೋಷಿಸಬೇಕು. ಬಗರ್‌ಹುಕುಂ ಸಾಗುವಳಿದಾರರ ಸಮಸ್ಯೆ ಪರಿಹರಿಸಬೇಕು ಎಂದು ಆಗ್ರಹಿಸಿದರು. ಕಾರಿಗನೂರಿನ ರೈತ ಕೆ. ಬಸವರಾಜಪ್ಪ ಮಾತನಾಡಿ ನಾವಿಂದು ಸಕ್ಕರೆ ಕಾರ್ಖಾನೆ ಮಾಲೀಕರ ಲಾಭಕ್ಕಾಗಿ ಕಬ್ಬು ಬೆಳೆಯುವಂತಾಗಿದೆ. ಬೆಳೆದ ಖರ್ಚೂ ಸಿಗುತ್ತಿಲ್ಲ. ದರ ನಿಗದಿ ಮಾಡಲು ರೈತರಿಗೆ ಸಾಧ್ಯವಾಗುತ್ತಿಲ್ಲ. ಜೀತದಾಳುವಿನಂತೆ ದುಡಿಯಬೇಕಿದೆ. ರೈತರು ಪರೋಕ್ಷವಾಗಿ ತೆರಿಗೆ ಕಟ್ಟಿದರೂ ನಮಗೆ ನ್ಯಾಯಯುತ ಬೆಲೆ ಸಿಗುತ್ತಿಲ್ಲ. ರೈತರು ಸಂಕಷ್ಟದಿಂದ ಆತ್ಮಹತ್ಯೆ ದಾರಿ ಹಿಡಿಯುವಂತಾಗಿದೆ ಎಂದರು. ಪ್ರತಿಭಟನೆಯಲ್ಲಿ ಮುಖಂಡರಾದ ಪೂಜಾರ್ ಆಂಜನಪ್ಪ, ಜಿ.ಎ. ಶರತ್, ಜಿ.ಕೆ. ಕಿರಣ್, ಟಿ.ಆರ್. ವಿಜಯಕುಮಾರ್, ನಾಗೇಂದ್ರಪ್ಪ ಆರ್., ದೊಡ್ಡೇಶ್, ಟಿ.ವಿ.ವಾಗೀಶ್, ಕುಕ್ಕವಾಡ ಶಂಕರ್, ಜಗದೀಶ್, ಶಿವಕುಮಾರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net