

ಬೀದರ್: ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ(ಎಫ್ ಪಿಎಐ) ಬೀದರ್ ಶಾಖೆ ಅಧ್ಯಕ್ಷೆ, ಇಲ್ಲಿನ ಖ್ಯಾತ ಸ್ತ್ರೀರೋಗ ತಜ್ಞೆ ಡಾ.ಆರತಿ ರಘು ಅವರು ಎಫ್ಪಿಎಐ ಕೇಂದ್ರ ಕಚೇರಿಯ ಗೌರವ ಖಜಾಂಚಿಯಾಗಿ ಅವಿರೋಧ ಆಯ್ಕೆಯಾಗಿದ್ದಾರೆ. ಎಫ್ ಪಿಎಐನಲ್ಲಿ ಆರತಿ ಅವರು ಸುದೀರ್ಘ ಅವಧಿಯಿಂದ ಸಲ್ಲಿಸುತ್ತಿರುವ ಸೇವೆ ಹಿನ್ನೆಲೆಯಲ್ಲಿ ಕೇಂದ್ರ ಸಮಿತಿಯಲ್ಲಿ ಈ ಸ್ಥಾನ ದೊರಕಿದೆ.
ಇತ್ತೀಚೆಗೆ ಎಫ್ ಪಿಎಐ ಕೇಂದ್ರ ಕಚೇರಿ ಮುಂಬೈನಲ್ಲಿ ಜರುಗಿದ ತ್ರೈವಾರ್ಷಿಕ ಸಾಮಾನ್ಯ ಸಭೆಯಲ್ಲಿ ಡಾ. ಆರತಿ ಅವರನ್ನು ಗೌರವ ಖಜಾಂಚಿ ಸ್ಥಾನಕ್ಕೆ ಸರ್ವಸಮ್ಮತಿಯಿಂದ ಆಯ್ಕೆ ಮಾಡಲಾಯಿತು. ಎಫ್ ಪಿಎಐ ಬೀದರ್ ಶಾಖೆಯಲ್ಲಿ ಡಾ. ಆರತಿ ರಘು ಅವರು 2003ರಿಂದ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಸ್ವಯಂಸೇವಕರಾಗಿ ಭಾಗವಹಿಸಿ ಹಲವು ಆರೋಗ್ಯ ಶಿಬಿರಗಳಲ್ಲಿ ಉಚಿತವಾಗಿ ಸೇವೆ ಒದಗಿಸುತ್ತಿದ್ದಾರೆ. ಅಲ್ಲದೇ ಮಾಹಿತಿ, ಅರಿವು, ಶಿಕ್ಷಣ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಜನರಿಗೆ ಆರೋಗ್ಯ ಜಾಗೃತಿ ಮೂಡಿಸುತ್ತಿದ್ದಾರೆ.
ಎಫ್ ಪಿಎಐ ಬೀದರ್ ಶಾಖೆಗೆ ಎರಡು ವರ್ಷ ಕಾರ್ಯಕಾರಿಣಿ ಸದಸ್ಯರಾಗಿ, ಐದು ವರ್ಷ ಗೌರವ ಉಪಾಧ್ಯಕ್ಷರಾಗಿದ್ದ ಡಾ. ಆರತಿ ಅವರು 2020ರಿಂದ ಅಧ್ಯಕ್ಷ ಹುದ್ದೆ ಸಮರ್ಥ ನಿರ್ವಹಿಸುತ್ತಿದ್ದಾರೆ. ಮಹಿಳೆಯರ ಆರೋಗ್ಯ ಕಾಳಜಿಗೆ ಒತ್ತು ನೀಡಿ ಕಾರ್ಯಚಟುವಟಿಕೆ ನಡೆಸುತ್ತಿದ್ದಾರೆ. ಸಾಮಾಜಿಕ ಕಾಳಜಿ ಹೊಂದಿರುವ ಇವರು, ವಿವಿಧ ಸಂಘಟನೆಗಳಲ್ಲಿಯೂ ಸಕ್ರಿಯ ತೊಡಗಿದ್ದಾರೆ.
ಗೌರವ ಖಜಾಂಚಿಯಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಡಾ.ಆರತಿ ಅವರನ್ನು ಶುಕ್ರವಾರ ಇಲ್ಲಿಯ ಶಾಖೆಯಲ್ಲಿ ಸನ್ಮಾನಿಸಲಾಯಿತು. ಶಾಖೆ ಕಾರ್ಯದರ್ಶಿ ಅಂಬುಜಾ ವಿಶ್ವಕರ್ಮ, ಖಜಾಂಚಿಗಳಾದ ಡಾ. ವಿಜಯ ಕೊಂಡಾ, ಡಾ. ಸವಿತಾ ಚಾಕೋತೆ, ಸದಸ್ಯರಾದ ಡಾ.ನಾಗೇಶ ಪಾಟೀಲ್, ಡಾ.ಸುಭಾಷ ಬಶೆಟ್ಟಿ, ಸುಬ್ರಮಣ್ಯ ಪ್ರಭು, ವ್ಯವಸ್ಥಾಪಕ ಶ್ರೀನಿವಾಸ ಬಿರಾದಾರ ಇತರರಿದ್ದರು.