

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ನಗರದ ಬಹುತೇಕ ಭಾಗ ಸೀಲ್ಡೌನ್ ಹಿನ್ನೆಲೆಯಲ್ಲಿ ಸ್ಥಬ್ಧವಾಗಿದೆ. ಆದರೆ, ಇಲ್ಲಿನ ಅಮರಗೋಳ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾತ್ರ ಸೀಲ್ಡೌನ್ ಇರಲಿ, ಲಾಕ್ಡೌನ್ ಇರಲಿ ಅದ್ಯಾವುದಕ್ಕೂ ನಮಗೂ ಸಂಬಂಧವಿಲ್ಲ ಎಂಬಂತೆ ಸಾವಿರಾರು ಜನ ನಿರ್ಭಯವಾಗಿ ಓಡಾಡಿಕೊಂಡಿದ್ದ ದೃಶ್ಯ ಭಾನುವಾರ ಕಂಡು ಬಂತು. ಇದರಿಂದಾಗಿ ಮಾರುಕಟ್ಟೆ ಪ್ರಾಂಗಣದಲ್ಲಿ ಸಂಚಾರ ದಟ್ಟಣೆಯೂ ಉಂಟಾಗಿತ್ತು.
ತರಕಾರಿ ಮಾರುಕಟ್ಟೆಯಲ್ಲಂತೂ ಜನಜಂಗುಳಿ ಉಂಟಾಗಿತ್ತು. ತರಕಾರಿ ಖರೀದಿಗೆ ಮುಗಿಬಿದ್ದಿದ್ದರು. ತರಕಾರಿ ಮಂಡಿಯಲ್ಲಿ ಬಹುತೇಕ ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಗುಂಪು ಗುಂಪಾಗಿ ಖರೀದಿಗೆ ಮುಂದಾಗಿದ್ದರು. ವ್ಯಾಪಾರಿಗಳೂ ಆ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ವ್ಯಾಪಾರಿಗಳು ಮತ್ತು ಗ್ರಾಹಕರಿಗಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ಎಪಿಎಂಸಿ ಆಡಳಿತ ಮಂಡಳಿ ಅಲ್ಲಲ್ಲಿ ಬಾಕ್ಸ್ ರಚಿಸಿದೆ. ಆದರೆ, ದಿನದಿಂದ ದಿನಕ್ಕೆ ಸಾಮಾಜಿಕ ಅಂತರ ನಿಯಮ ಉಲ್ಲಂಘನೆ ಹೆಚ್ಚಾಗುತ್ತಿದೆ. ಪೊಲೀಸರು ಕಂಡಾಗ ನಿಯಮ ಪಾಲಿಸುವ ಜನ ಅವರು ಮರೆಯಾದ ಕೂಡಲೇ ಮತ್ತದೇ ಚಾಲಿ ಮುಂದುವರಿಸುತ್ತಾರೆ.
ಗ್ರಾಹಕರ ಸಂಖ್ಯೆ ಹೆಚ್ಚಾಗಿದ್ದರ ಪರಿಣಾಮ ಸಹಜವಾಗಿಯೇ ವಾಹನಗಳ ಸಂಚಾರ ಹೆಚ್ಚಾಗಿತ್ತು. ತರಕಾರಿ ಮಾರುಕಟ್ಟೆ ವೃತ್ತದಲ್ಲಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ಹೋಲ್ಸೇಲ್ ಖರೀದಿಸುವವರ ಜತೆಗೆ ಚಿಲ್ಲರೆ ಖರೀದಿ ಮಾಡುವವರೂ ಹೆಚ್ಚಾದ್ದರಿಂದ ಬೈಕ್, ಕಾರುಗಳ ಸಂಖ್ಯೆ ಹೆಚ್ಚಳವಾಗಿತ್ತು.
ತರಕಾರಿ ಆವಕ ಹೆಚ್ಚಳ: ಎಪಿಎಂಸಿ ಮಾರುಕಟ್ಟೆಗೆ ಮೊದಲಿನಷ್ಟು ತರಕಾರಿ ಪೂರೈಕೆ ಇಲ್ಲದಿದ್ದರೂ ಇದೀಗ ದಿನದಿಂದ ದಿನಕ್ಕೆ ತರಕಾರಿ ಆವಕ ಹೆಚ್ಚಾಗುತ್ತಿದೆ. ರೈತರಿಗೆ ತಮ್ಮ ಬೆಳೆ ಸಾಗಾಟ, ಮಾರಾಟಕ್ಕೆ ಸರ್ಕಾರ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಹೆಚ್ಚಿನ ತರಕಾರಿ ಮಾರುಕಟ್ಟೆಗೆ ಬರುತ್ತಿದೆ. ಭಾನುವಾರ ತಾಜಾ ಈರುಳ್ಳಿ, ಮೆಣಸಿನಕಾಯಿ, ಟೊಮ್ಯಾಟೊ, ಹಿರೇಕಾಯಿ, ಸೌತೆಕಾಯಿ, ಬದನೆಕಾಯಿ, ಕ್ಯಾರೆಟ್ ಸೇರಿ ಮತ್ತಿತರ ತರಕಾರಿ ಮಾರುಕಟ್ಟೆಗೆ ಆವಕವಾಗಿದೆ ಎಂದು ವ್ಯಾಪಾರಿಯೊಬ್ಬರು ತಿಳಿಸಿದರು.
ಇನ್ನೂ ಕಡಿಮೆಯಾಗಿಲ್ಲ ಉಗುಳುವ ಚಟ: ಎಪಿಎಂಸಿ ಮಾರುಕಟ್ಟೆಯಲ್ಲಿ ಮೊದಲಿನಿಂದಲೂ ಹಲವರು ಅಡಕೆ- ಎಲೆ, ತಂಬಾಕು, ಗುಟ್ಖಾ ಸೇವಿಸಿ ಎಲ್ಲೆಂದರಲ್ಲಿ ಉಗುಳುತ್ತಿದ್ದರು. ಕರೊನಾ ಬಳಿಕ ಜನಜಾಗೃತಿಯಿಂದ ಅದರ ಪ್ರಮಾಣ ಕಡಿಮೆಯಾಗಿತ್ತು. ಇದೀಗ ಕೆಲ ಅಂಗಡಿಗಳಲ್ಲಿ ಕದ್ದುಮುಚ್ಚಿ ತಂಬಾಕು, ಗುಟ್ಖಾ ಮಾರಾಟ ಆರಂಭವಾಗಿದ್ದು, ಇದರಿಂದ ಕೆಲವರು ಎಲ್ಲೆಂದರಲ್ಲಿ ಉಗುಳುವ ದೃಶ್ಯ ಕಂಡುಬಂತು. ಈ ಕುರಿತು ಸಂಬಂಧಪಟ್ಟವರು ಗಮನಿಸಬೇಕು. ಎಲ್ಲೆಂದರಲ್ಲಿ ಉಗುಳದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.