ಎಪಿಎಂಸಿಯಲ್ಲಿ ಮಳಿಗೆಗಳ ನಿರ್ಮಾಣ

IMG_20221028_150709
ನುಗ್ಗೇಹಳ್ಳಿ ಹೋಬಳಿಯ ಎ.ಬೆಳಗುಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರೈತರಿಗೆ ಶಾಸಕ ಸಿ.ಎನ್.ಬಾಲಕೃಷ್ಣ ಸಾಲದ ಚೆಕ್ ವಿತರಿಸಿದರು. ಜಿ.ಎಚ್. ಕೆಂಪೇಗೌಡ, ಚಂದ್ರಪ್ಪ, ಲೋಕೇಶ್ ಇತರರು ಇದ್ದರು.
Published on

ನುಗ್ಗೇಹಳ್ಳಿ: ಹೋಬಳಿ ವ್ಯಾಪ್ತಿಯ ರೈತರಿಗೆ ಉತ್ತಮ ಮಾರುಕಟ್ಟೆ ನಿರ್ಮಿಸುವ ಸಲುವಾಗಿ ಇಲ್ಲಿನ ಎ.ಪಿ.ಎಂ.ಸಿ ಆವರಣದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಅಂಗಡಿ ಮಳಿಗೆಗಳನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.


ಹೋಬಳಿಯ ಎ.ಬೆಳಗುಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರೈತರಿಗೆ ಸಾಲದ ಚೆಕ್ ವಿತರಿಸಿ ಮಾತನಾಡಿದರು. ಕೃಷಿ ಪತ್ತಿನ ಸಂಘದ ಮೂಲಕ 1418 ರೈತರಿಗೆ 7.35 ಕೋಟಿ ರೂ. ಸಾಲ ನೀಡಲಾಗಿದೆ. ಹೊಸದಾಗಿ 103 ರೈತರಿಗೆ 30 ಲಕ್ಷ ರೂ. ಸಾಲ ವಿತರಿಸಿದ್ದು, 85 ಮಹಿಳಾ ಸ್ವಸಹಾಯ ಸಂಘಗಳಿಗೆ 1.15 ಕೋಟಿ ರೂ. ಸಾಲ ಕೊಡಲಾಗಿದೆ. ಮುಂಬರುವ ವರ್ಷದಲ್ಲಿ ತಾಲೂಕಿನ 4 ಸಾವಿರ ರೈತರಿಗೆ ಸಾಲ ನೀಡುವ ಗುರಿ ಹೊಂದಲಾಗಿದೆ ಎಂದು ಹೇಳಿದರು.


ನವಿಲೆ ಏತ ನೀರಾವರಿ ಯೋಜನೆ ಮೂಲಕ ಈ ಭಾಗದ ಕೆರೆಗಳಿಗೆ ನೀರು ಹರಿಸಲಾಗಿದೆ. ಜಲಜೀವನ್‌ಮಿಷನ್ ಯೋಜನೆ ಮೂಲಕ ತಾಲೂಕಿನ 435 ಹಳ್ಳಿಗಳಿಗೆ ನದಿಯಿಂದ ಕುಡಿಯುವ ನೀರು ಪೂರೈಕೆ ಯೋಜನೆಗೆ ಅನುದಾನ ದೊರೆತಿದ್ದು, ತಾಲೂಕಿನ 10 ಗ್ರಾಮ ಪಂಚಾಯಿತಿಗಳಲ್ಲಿ ಮೊದಲನೇ ಹಂತದ ಯೋಜನೆಗೆ ಚಾಲನೆ ನೀಡಲಾಗುತ್ತದೆ ಎಂದು ತಿಳಿಸಿದರು.


ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಿ.ಎಚ್.ಕೆಂಪೇಗೌಡ ಮಾತನಾಡಿ, ಗಂಜಿಗೆರೆ ಗ್ರಾಮದಿಂದ ಅಕ್ಕನಹಳ್ಳಿ ಕೂಡಿನವರೆಗಿನ ರಸ್ತೆ ಅಭಿವೃದ್ಧಿಪಡಿಸುವಂತೆ ಒತ್ತಾಯಿಸಿದರು. ಸಂಘದ ಉಪಾಧ್ಯಕ್ಷ ಚಂದ್ರಪ್ಪ, ಸಂತೆಶಿವರ ಗ್ರಾಮ ಪಂಚಾಯಿತಿ ಅಧ್ಯಕ್ಷ ಲೋಕೇಶ್, ನಿರ್ದೇಶಕರಾದ ಬಿ.ಟಿ.ಜಯಲಿಂಗೇಗೌಡ, ಅಶೋಕ್, ಮಾಲಿಂಗಪ್ಪ, ಪ್ರಭುಸ್ವಾಮಿ, ಯೋಗೇಶ್‌ಗೌಡ, ಮೋಹನ್‌ಕುಮಾರ್, ಭಾಗ್ಯಮ್ಮ, ರೇಣುಕಾಂಬ, ತಿಮ್ಮಮ್ಮ, ಡಿಸಿಸಿ ಬ್ಯಾಂಕ್ ವಿಸ್ತರಣಾಧಿಕಾರಿ ಅಭಿಲಾಷ್, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ವೆಂಕಟೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net