

ಗದಗ: ಕರೊನಾ ವೈರಸ್ ಹರಡದಂತೆ ಘೊಷಿಸಿರುವ ಲಾಕ್ಡೌನ್ ಹಿನ್ನೆಲೆಯಲ್ಲಿ ಎಪಿಎಂಸಿಯಲ್ಲಿ ಆರಂಭಿಸಿರುವ ತರಕಾರಿ ಮಾರುಕಟ್ಟೆಯಲ್ಲಿ ಶನಿವಾರ ಜನರು ತರಕಾರಿ ಖರೀದಿಗಾಗಿ ಮುಗಿಬೀಳುತ್ತಿರುವುದು ಕಂಡುಬಂದಿತು.
ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮುಖಕ್ಕೆ ಸುರಕ್ಷತಾ ಕವಚ ಧರಿಸಬೇಕು ಎಂದು ಎಷ್ಟೇ ಜಾಗೃತಿ ಮೂಡಿಸಿದರೂ ಜನರು ಮಾತ್ರ ಅರಿತುಕೊಳ್ಳುತ್ತಿಲ್ಲ. ವರ್ತಕರು, ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ವ್ಯಾಪಾರ ಮಾಡುವುದು, ಚೌಕಾಶಿ ಮಾಡುತ್ತಿರುವುದು ಸಾಮಾನ್ಯವಾಗಿತ್ತು. ತರಕಾರಿ ಮಾರ್ಕೆಟ್ನಲ್ಲಿ ಜನರು ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಿಲ್ಲ ಎಂಬ ಮಾಹಿತಿ ಮೇರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮತ್ತು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಎಸ್. ಸಂಗ್ರೇಶಿ ಜನರಿಗೆ ತಿಳಿವಳಿಕೆ ನೀಡಿದರು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು, ಮುಖಕ್ಕೆ ಮಾಸ್ಕ್ ಧರಿಸಬೇಕು. ಸ್ಯಾನಿಟೈಸರ್ ಬಳಸಬೇಕು ಎಂದು ಜನರಿಗೆ ಸೂಚನೆ ನೀಡಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಸ್.ಜಿ. ಸಲಗರೆ, ಎಸಿ ರಾಯಪ್ಪ ಹುಣಸಗಿ ಮತ್ತಿತರರು ಇದ್ದರು.
ಹಾಲು ವಿತರಣೆ: ಗದಗ ನಗರದ ಹುಬ್ಬಳ್ಳಿ ರಸ್ತೆಯ ಸ್ಲಂ ಏರಿಯಾದಲ್ಲಿ ಡಿಸಿ ಎಂ.ಜಿ. ಹಿರೇಮಠ ಬಡವರಿಗೆ ಹಾಲು ವಿತರಣೆ ಮಾಡಿದರು. ಜಿಲ್ಲೆಯ ಬಡವರಿಗೆ, ನಿರ್ಗತಿಕರಿಗೆ ನಂದಿನಿ ಹಾಲು ವಿತರಣೆ ಮಾಡಬೇಕೆಂದು ಸಿಎಂ ಯಡಿಯೂರಪ್ಪ ಆದೇಶ ಮಾಡಿರುವ ಹಿನ್ನೆಲೆಯಲ್ಲಿ ಹಾಲು ವಿತರಣೆ ಮಾಡಲಾಯಿತು. ಇಡೀ ಜಿಲ್ಲೆಯಲ್ಲಿ ನಿತ್ಯ 5 ಸಾವಿರ ಲೀಟರ್ ಹಾಲು ವಿತರಣೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಕೂಲಿಕಾರರ ಪರದಾಟ: ಕರೊನಾ ವೈರಸ್ ನಿಯಂತ್ರಣಕ್ಕಾಗಿ ಲಾಕ್ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯ ಕೂಲಿ ಕಾರ್ವಿುಕರು ಸಾರಿಗೆ ವ್ಯವಸ್ಥೆ ಇಲ್ಲದೇ ಮಂಗಳೂರು ಚೆಕ್ಪೋಸ್ಟ್ನಲ್ಲಿ ಪರದಾಡುತ್ತಿದ್ದಾರೆ. ಕಳೆದ ಐದು ದಿನಗಳಿಂದ ಚೆಕ್ಪೋಸ್ಟ್ನಲ್ಲಿ ಸಿಲುಕಿಕೊಂಡಿದ್ದು ದಿಕ್ಕು ತೋಚದಂತಾಗಿದೆ ಎಂದು ಅವರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ. ದಯವಿಟ್ಟು ಸ್ವಗ್ರಾಮಗಳಿಗೆ ತೆರಳಲು ಅವಕಾಶ ಮಾಡಕೊಡಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಜಾಗೃತಿ ಅಭಿಯಾನಕ್ಕೆ ಚಾಲನೆ
ಮುಂಡರಗಿ: ಕರೊನಾ ವೈರಸ್ ತಡೆಟ್ಟುವ ಹಿನ್ನೆಲೆಯಲ್ಲಿ ಯಾರೊಬ್ಬರೂ ನಿಷ್ಕಾಳಜಿ ತೋರಬಾರದು. ಮನೆಯಿಂದ ಯಾರೂ ಹೊರಗೆ ಬರಬಾರದು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ದಿವಾಣಿ ನ್ಯಾಯಾಧೀಶ ಮಹಾಜನ್ ಆರ್.ಎ. ಹೇಳಿದರು.
ಪಟ್ಟಣದ ತಾಲೂಕು ಕಾನೂನು ಸೇವೆಗಳ ಸಮಿತಿ, ಪುರಸಭೆ ಇತರೆ ಇಲಾಖೆಗಳ ಆಶ್ರಯದಲ್ಲಿ ಗುರುವಾರ ಆಯೋಜಿಸಲಾದ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸರ್ಕಾರ ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳಿಗೆ ಜನರು ಸ್ಪಂದಿಸಬೇಕು. ಕರೊನಾ ವೈರಸ್ ತಡೆಗಟ್ಟಲು ನಾವೆಲ್ಲರೂ ಚಿಂತನೆ ಮಾಡಬೇಕು. ಅಂತರ ಕಾಯ್ದುಕೊಂಡು ಕರೊನಾ ಹೊಡೆದೋಡಿಸಲು ಮುಂದಾಗಬೇಕು ಎಂದರು.
ಪುರಸಭೆ ಮುಖ್ಯಾಧಿಕಾರಿ ಎಸ್.ಎಚ್. ನಾಯ್ಕರ, ಪುರಸಭೆ ಆರೋಗ್ಯ ನಿರೀಕ್ಷಕ ಎಂ.ಎಸ್. ಮ್ಯಾಗೇರಿ, ವಕೀಲರಾದ ಎನ್.ವಿ.ಹಿರೇಮಠ, ಕೆ.ಕೆ. ಕಮ್ಮಾರ, ಎ.ಕೆ. ಕುರಿ, ಎಸ್.ವಿ. ಸೊಬರದ ಉಪಸ್ಥಿತರಿದ್ದರು.
ಪ್ರಧಾನಿ ಸಂಕಲ್ಪ ಬೆಂಬಲಿಸೋಣ
ಗದಗ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನೀಡಿರುವ ಕರೆಯಂತೆ ಏ.5ರಂದು ರಾತ್ರಿ 9 ಗಂಟೆಗೆ ಮನೆಯ ದೀಪಗಳನ್ನು ಆರಿಸಿ ಬಾಲ್ಕನಿ ಅಥವಾ ಮುಂಬಾಗಿಲಿನಲ್ಲಿ ನಿಂತು ದೀಪ ಬೆಳಗಿಸುವ ಮೂಲಕ ಕರಾಳ ಕರೊನಾ ವೈರಸ್ ವಿರುದ್ಧ ಒಗ್ಗಟ್ಟು ಪ್ರದರ್ಶಿಸಿ ದೇಶದ 130 ಕೋಟಿ ಜನರ ಸುರಕ್ಷತೆಗಾಗಿ ಎಲ್ಲರೂ ಸಂಕಲ್ಪ ಮಾಡೋಣ ಎಂದು ಬಿಜೆಪಿ ಅನಿಲ ಮೆಣಸಿನಕಾಯಿ ಅವರು ಮನವಿ ಮಾಡಿದ್ದಾರೆ. ಕರೊನಾ ತಡೆಗೆ ಪ್ರತಿಯೊಬ್ಬರೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಮೂಲಕ ಮೇಣಬತ್ತಿ ಅಥವಾ ಮೊಬೈಲ್ ಟಾರ್ಚ್ಗಳನ್ನು ಬೆಳಗಿಸಿ ಕರೊನಾ ವೈರಸ್ ಅನ್ನು ದೇಶದಿಂದ ಓಡಿಸುವ ಪ್ರಧಾನಿ ಅವರ ಸಂಕಲ್ಪವನ್ನು ಎಲ್ಲರೂ ಬೆಂಬಲಿಸೋಣ. ನಮಗಾಗಿ, ನಮ್ಮವರಿಗಾಗಿ ಜನರ ರಕ್ಷಣೆಯ ದೃಷ್ಟಿಯಿಂದ ದೇಶದ 4 ದಿಕ್ಕುಗಳಲ್ಲಿ ಬೆಳಕು ಪ್ರಜ್ವಲಿಸುವಂತೆ ಮಾಡೋಣ ಎಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.