

ಚಿಕ್ಕಬಳ್ಳಾಪುರ: ಕರೊನಾ ವಿರುದ್ಧದ ಹೋರಾಟದ ನಡುವೆಯೇ ಎಪಿಎಂಸಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಿಗದಿಯಾಗಿದೆ.
8 ತಾಲೂಕುಗಳನ್ನು ಹೊಂದಿರುವ ಜಿಲ್ಲೆಯಲ್ಲಿ ಪ್ರಸ್ತುತ 4 ಎಪಿಎಂಸಿ ಸಮಿತಿಗಳು ಅಸ್ತಿತ್ವದಲ್ಲಿವೆ. ಹಾಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಎರಡನೇ ಹಂತದ 20 ತಿಂಗಳ ಆಡಳಿತಾವಧಿಯು ಜೂನ್, ಜುಲೈಗೆ ಅಂತ್ಯವಾಗಲಿದೆ. ತೆರವಾಗಲಿರುವ ಸ್ಥಾನಗಳಿಗೆ ಹೊಸದಾಗಿ ಆಯ್ಕೆ ಮಾಡಬೇಕಿದ್ದು ಮೂರನೇ ಹಂತದ 20 ತಿಂಗಳ ಆಡಳಿತಾವಧಿಗೆ ಚುನಾವಣೆ ನಡೆಸಲು ಕೃಷಿ ಮಾರಾಟ ಇಲಾಖೆ ನಿರ್ದೇಶಕರು ಸೂಚಿಸಿದ್ದಾರೆ.
ಗೌರಿಬಿದನೂರು ಎಪಿಎಂಸಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಜೂ. 2, ಚಿಕ್ಕಬಳ್ಳಾಪುರ ಮತ್ತು ಶಿಡ್ಲಘಟ್ಟ ಎಪಿಎಂಸಿ ಸ್ಥಾನಕ್ಕೆ ಜೂ.5, ಮತ್ತು ಚಿಂತಾಮಣಿ ಎಪಿಎಂಸಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಜೂ.10 ರಂದು ಚುನಾವಣೆ ನಡೆಯಲಿದೆ. ಬಾಗೇಪಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ದಿನಾಂಕ ನಿಗದಿಯಾಗಬೇಕಾಗಿದೆ ಎಂದು ಎಪಿಎಂಸಿ ಕಾರ್ಯದರ್ಶಿ ರಾಮದಾಸು ತಿಳಿಸಿದ್ದಾರೆ. ಎಪಿಎಂಸಿ ಆಡಳಿತಾವಧಿಯು 5 ವರ್ಷ. ಈಗಾಗಲೇ ತಲಾ 20 ತಿಂಗಳ ಅಧಿಕಾರ ಹಂಚಿಕೆ ಸೂತ್ರದಲ್ಲಿ ಎರಡು ಹಂತದ ಅವಧಿ ಮುಗಿಸಲಾಗಿದೆ. ಇನ್ನು ಕೊನೇ ಹಂತದಲ್ಲಾದರೂ ಆಡಳಿತ ಚುಕ್ಕಾಣಿ ಹಿಡಿಯಲು ಸದಸ್ಯರು ಕಸರತ್ತಿಗೆ ಮುಂದಾಗಿದ್ದಾರೆ.
ಮರು ಆಯ್ಕೆಗೆ ದುಂಬಾಲು ಚುನಾವಣೆ ಘೋಷಣೆಯಾಗುತ್ತಿದ್ದಂತೆ ಆಯಾ ವ್ಯಾಪ್ತಿಯ ಸದಸ್ಯರು ಸಂಬಂಧಪಟ್ಟ ಶಾಸಕರು, ಪಕ್ಷದ ಮುಖಂಡರ ಮೊರೆ ಹೋಗಿದ್ದು ಈ ಹಿಂದಿನ ಒಪ್ಪಂದ ನೆನಪಿಸಿ ಮನವೊಲಿಸುತ್ತಿದ್ದರೆ, ಇತ್ತ ಬಹುತೇಕ ಹಾಲಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಅಧಿಕಾರವನ್ನು ತಮ್ಮಲ್ಲಿಯೇ ಉಳಿಸಿಕೊಳ್ಳಲು ಮರು ಆಯ್ಕೆಗೆ ದುಂಬಾಲು ಬೀಳುತ್ತಿದ್ದಾರೆ.
ಮಾನ್ಯತೆ ಪಡೆಯಲು ಧಾರಾಳತನ ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಅಭಿಪ್ರಾಯ ಸಂಗ್ರಹ ಮತ್ತು ಸೂಕ್ತ ತೀರ್ಮಾನಕ್ಕಾಗಿ ನಿರ್ದೇಶಕರ ಸಭೆಗಳನ್ನು ಕೈಗೊಳ್ಳಲು ನಾಯಕರು ಒಲವು ತೋರಿಲ್ಲ. ಪ್ರಬಲ ಆಕಾಂಕ್ಷಿಗಳೇ ಬೆಂಬಲಿತ ಇತರ ನಿರ್ದೇಶಕರೊಂದಿಗೆ ಸಂಪರ್ಕದಲ್ಲಿದ್ದು ಆಯ್ಕೆಯ ಮಾನ್ಯತೆ ಪಡೆದುಕೊಳ್ಳಲು ಧಾರಾಳತನಕ್ಕೆ ಮೊರೆಹೊಗಿದ್ದಾರೆ.