ಎಪಿಎಂಸಿ ಸಮಸ್ಯೆ ಪರಿಹರಿಸಲು ಹೊಸ ಕಾಯ್ದೆ

0301Klb07
Published on

ಕಲಬುರಗಿ: ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ)ಗಳು ಎದುರಿಸುತ್ತಿರುವ ಸಮಸ್ಯೆ ಪರಿಹರಿಸಿ ಬಲಗೊಳಿಸಲು ಹೊಸ ಕಾಯ್ದೆ ಜಾರಿಗೆ ತರಲಾಗುತ್ತಿದೆ. ಅದಕ್ಕಾಗಿಯೇ ಕೆಲ ಮಾರುಕಟ್ಟೆಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸುತ್ತಿರುವುದಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಹಾಗೂ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಹೇಳಿದರು.

ಕೃಷಿ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ತಿದ್ದುಪಡಿ ವಿಧೇಯಕ- ೨೦೨೩ ಸಮಗ್ರ ಪರಿಶೀಲಿಸಲು ರಚಿಸಿರುವ ಜಂಟಿ ಸದನ ಸಮಿತಿ ಸದಸ್ಯರೊಂದಿಗೆ ನೆಹರು ಗಂಜ್‌ನ ಎಪಿಎಂಸಿಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿ ಸಭೆ ನಡೆಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕೆಲವೆಡೆ ಭೇಟಿ ನೀಡಿ ಸಮಾಲೋಚನೆ ನಡೆಸಿದ್ದೇವೆ. ಕಲಬುರಗಿ ಕೊನೆಯ ಭೇಟಿ. ಇಲ್ಲಿಂದ ರಾಯಚೂರಿಗೆ ತೆರಳಿ ಮಾಹಿತಿ ಕಲೆ ಹಾಕಿಕೊಂಡು ಬೆಂಗಳೂರಿಗೆ ಹೋಗಿ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.

ಹೊಸದಾಗಿ ತರಲು ಉದ್ದೇಶಿಸಿರುವ ಎಪಿಎಂಸಿ ಕಾಯ್ದೆಯಲ್ಲಿ ಮೊದಲಿದ್ದ ಹಳೆಯ ಅಂಶಗಳು ಹೆಚ್ಚಿನ ಪ್ರಮಾಣದಲ್ಲಿವೆ. ಈಗಾಗಲೇ ಈ ಎಲ್ಲ ಅಂಶಗಳನ್ನು ಮಸೂದೆಯಲ್ಲಿ ಸೇರಿಸಲಾಗಿದೆ. ಬರುವ ಅಧಿವೇಶನದಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗುವುದು. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕೃಷಿ ಚಟುವಟಿಕೆ ಮಾದರಿಯಾಗಿ ನಡೆಯಬೇಕು ಎಂಬುದು ಸರ್ಕಾರದ ಉದ್ದೇಶ ಎಂದು ತಿಳಿಸಿದರು.
ಕಬ್ಬು ಬೆಳೆಗಾರರಿಗೆ ತೂಕದ ಯಂತ್ರ: ಸಕ್ಕರೆ ಕಾರ್ಖಾನೆಗಳಲ್ಲಿ ತೂಕದಲ್ಲಿ ರೈತರಿಗೆ ಮೋಸ ಆಗುತ್ತಿದೆ ಆರೋಪಗಳ ಹಿನ್ನೆಲೆಯಲ್ಲಿ ಎಪಿಎಂಸಿಗಳಲ್ಲಿ ತೂಕದ ಯಂತ್ರ ಅಳವಡಿಸಿ ಉಚಿತವಾಗಿ ತೂಕ ಮಾಡಿಕೊಡಲಾಗುವುದು. ರೈತರು ಕಾರ್ಖಾನೆಗೆ ಕಬ್ಬು ಸಾಗಿಸುವ ಮೊದಲು ಇಲ್ಲಿ ತೂಕ ಮಾಡಿಸಿ ರಸೀದಿಯೊಂದಿಗೆ ಹೋಗಬೇಕು. ಫ್ಯಾಕ್ಟರಿಯಲ್ಲಿ ಕಡಿಮೆ ತೂಕ ಬಂದರೆ ಆಧಾರಸಹಿತ ಲಿಖಿತ ದೂರು ನೀಡಲು ಅನುವು ಆಗಲಿದೆ. ದೂರು ನೀಡಿದರೆ ಅಂತಹ ಫ್ಯಾಕ್ಟರಿಗಳ ವಿರುದ್ಧ ಕ್ರಮ ಕೈಗೊಂಡು ಲೈಸೆನ್ಸ್ ರದ್ದುಪಡಿಸುವುದಾಗಿ ಸಚಿವ ಪಾಟೀಲ್ ಹೇಳಿದರು.
ಫ್ಯಾಕ್ಟರಿಗಳಲ್ಲಿರುವ ತೂಕದ ಯಂತ್ರಗಳನ್ನು ಎಪಿಎಂಸಿ ಹಾಗೂ ತೂಕ ಮತ್ತು ಅಳತೆ ಇಲಾಖೆ ಅಧಿಕಾರಿಗಳು ವರ್ಷದಲ್ಲಿ ಎರಡು ಸಲ ಪರಿಶೀಲಿಸದೆ ತಪ್ಪು ಮಾಡಿದ್ದರಿಂದ ಈ ಸಮಸ್ಯೆ ಉದ್ಭವಿಸಿದೆ. ಅದನ್ನು ಪರಿಹರಿಸಿ ರೈತರ ಹಿತ ಕಾಪಾಡಲಾಗುವುದು. ಕಲಬುರಗಿ ಇತರ ಎಪಿಎಂಸಿಗಳಲ್ಲಿ ಕೃಷಿಯೇತರ ವಾಣಿಜ್ಯ ಮಳಿಗೆಗಳು ತಲೆ ಎತ್ತಿವೆ. ಲೈಸೆನ್ಸ್ದಾರರು ಅಂಗಡಿಗಳನ್ನು ಬೇರೊಬ್ಬರಿಗೆ ಬಾಡಿಗೆ ಕೊಟ್ಟಿದ್ದಾರೆ. ಅಂತಹ ದೂರು ಬಂದಲ್ಲಿ ಪರವಾನಗಿ ರದ್ದು ಮಾಡಲಾಗುವುದು. ಈಗಾಗಲೇ ಕಲಬುರಗಿಯಲ್ಲಿ ಎರಡು ಮಳಿಗೆ ಬಂದ್ ಮಾಡಿಸಲಾಗಿದೆ ಎಂದರು.
ಶಾಸಕ ಅಲ್ಲಮಪ್ರಭು ಪಾಟೀಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ್, ಹಿರಿಯ ಉದ್ಯಮಿ ಸುಭಾಷ ಬಿಜಾಪುರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net