ಎಪಿಎಂಸಿ ಶೌಚಗೃಹಕ್ಕೆ ಮುಚ್ಚಿದ ಬಾಗಿಲ ಸ್ವಾಗತ

h16- Apmc Toilet 2
Published on

ಬಸವರಾಜ ಇದ್ಲಿ ಹುಬ್ಬಳ್ಳಿ

ರಾಜ್ಯದಲ್ಲೇ ಅತಿ ದೊಡ್ಡ ಎಪಿಎಂಸಿ ಎಂಬ ಹೆಗ್ಗಳಿಕೆ ಹೊಂದಿರುವ ಇಲ್ಲಿಯ ಅಮರಗೋಳ ಶ್ರೀ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣಕ್ಕೆ ಹೋದವರು ಶೌಚಕ್ಕೆ ಪರದಾಡುವುದು ತಪ್ಪುವುದಿಲ್ಲ.

ಬಯಲು ಶೌಚಮುಕ್ತ ವಾತಾವರಣ ನಿರ್ವಿುಸಲು ಎಲ್ಲೆಡೆ ಪ್ರಯತ್ನ ನಡೆಯುತ್ತಿದ್ದರೆ ಎಪಿಎಂಸಿ ಆವರಣದಲ್ಲಿ ಮಾತ್ರ ಹಲವರಿಗೆ ಬಯಲೇ ಶೌಚಕ್ರಿಯೆಗಳಿಗೆ ಆಲಯವಾಗಿದೆ. ಇಲ್ಲಿ ಶೌಚಗೃಹಗಳಿದ್ದರೂ ಅವು ಜನರ ಬಳಕೆಗೆ ಸಿಗುತ್ತಿಲ್ಲ. ಸರಿಯಾದ ನಿರ್ವಹಣೆ ಇಲ್ಲದೇ ಅವು ಸೊರಗಿ ಹೋಗಿವೆ.

ಎಪಿಎಂಸಿ ದಿನಸಿ ಮಾರುಕಟ್ಟೆ ಬಳಿಯ (ತಾತ್ಕಾಲಿಕ ಜಾನುವಾರು ಮಾರುಕಟ್ಟೆ) ಶೌಚಗೃಹವಂತೂ ಮುಚ್ಚಿದ ಬಾಗಿಲು ತೆರೆದಿಲ್ಲ. ಅಲ್ಲಿ ಮಹಿಳೆಯರು, ಪುರುಷರಿಗೆ ಪ್ರತ್ಯೇಕ ಶೌಚಗೃಹಗಳಿವೆ. ಆದರೆ, ಅವು ಬಾಗಿಲು ತೆರೆದದ್ದು ಯಾರೂ ಕಂಡಿಲ್ಲ. ವಿಪರ್ಯಾಸವೆಂದರೆ, ಶೌಚಗೃಹದ ಮುಚ್ಚಿದ ಬಾಗಿಲ ಬಳಿ ಬೆಳಗ್ಗೆ 6ರಿಂದ ರಾತ್ರಿ 10ರ ವರೆಗೆ ತೆರೆದಿರುತ್ತದೆ ಎಂದು ಅಂಟಿಸಲಾಗಿದೆ. ಮಹಾನಗರ ಪಾಲಿಕೆಯವರು ಇದು ‘ಸಾರ್ವಜನಿಕ ಶೌಚಾಲಯ‘ ಎಂದೂ ಫಲಕ ಬರೆದು ಹಾಕಿಸಿದ್ದಾರೆ. ಆದರೆ, ಶೌಚಗೃಹದ ಹೊಸ್ತಿಲಲ್ಲಿ ಮೊಣಕಾಲುದ್ದದ ಗಿಡಗಂಟಿಗಳು ಬೆಳೆದಿವೆ. ಇವು ವರ್ಷಗಟ್ಟಲೇ ಇದರ ಬಾಗಿಲು ತೆರೆದೇ ಇಲ್ಲ ಎನ್ನುವುದಕ್ಕೆ ಸಾಕ್ಷಿ ಒದಗಿಸುತ್ತವೆ. ಆದಾಗ್ಯೂ ಮಹಾನಗರ ಪಾಲಿಕೆಯವರು ಫಲಕ ಹೇಗೆ ಹಾಕಿದರೋ?

ಎಪಿಎಂಸಿ ಬಸವೇಶ್ವರ ಸರ್ಕಲ್ ಬಳಿಯ ರೈತ ಭವನ ಹಿಂದೆ ಹೊಸದಾಗಿ ಕಟ್ಟಿಸಿದ ಶೌಚಗೃಹಕ್ಕೂ ಕೀಲಿ ಜಡಿಯಲಾಗಿದೆ. ಇನ್ನು ಹಣ್ಣು ತರಕಾರಿ ಮಾರುಕಟ್ಟೆ ಬಳಿಯ ಶೌಚಗೃಹ ಬಾಗಿಲು ತೆರೆದಿದ್ದರೂ ಸರಿಯಾದ ನಿರ್ವಹಣೆ ಇಲ್ಲ. ಶೌಚಗೃಹ ಪಕ್ಕದಲ್ಲೇ ಒಳಚರಂಡಿ ಕೊಳಚೆ ನಿಂತು ಗಬ್ಬೆದ್ದು ನಾರುತ್ತಿದೆ.

ನಿರ್ವಹಣೆ ಇಲ್ಲ: ಹುಬ್ಬಳ್ಳಿ ಎಪಿಎಂಸಿ ಆವರಣದಲ್ಲಿ ಹಲವಷ್ಟು ಸೌಲಭ್ಯಗಳನ್ನು ಮಾಡಿ ಕೊಡಲಾಗಿದೆ. ಆದರೆ, ಎಪಿಎಂಸಿ ಅಧಿಕಾರಿಗಳ ನಿರ್ಲಕ್ಷ್ಯ, ನಿರ್ವಹಣೆ ಇಲ್ಲದೇ ಸೌಲಭ್ಯಗಳು ರೈತ ಸಮೂಹಕ್ಕೆ ಲಭ್ಯವಾಗದಂತಾಗಿವೆ.

ಹುಬ್ಬಳ್ಳಿ ಎಪಿಎಂಸಿಗೆ ಧಾರವಾಡ ಜಿಲ್ಲೆ ಅಷ್ಟೇ ಅಲ್ಲ ಅಕ್ಕಪಕ್ಕದ ಗದಗ, ಹಾವೇರಿ, ಕೊಪ್ಪಳ, ವಿಜಯಪುರ, ಬಾಗಲಕೋಟೆ, ಬೆಳಗಾವಿ ಮುಂತಾದೆಡೆಯಿಂದ ರೈತರು ಬರುತ್ತಾರೆ. ಬಂದವರಿಗೆ ಸರಿಯಾಗಿ ಉಳಿದಿಕೊಳ್ಳಲು ವ್ಯವಸ್ಥೆ ಇಲ್ಲ, ಶೌಚಕ್ಕಂತೂ ಪರದಾಟ ತಪ್ಪಿದ್ದಲ್ಲ.

ಶೌಚಗೃಹದಲ್ಲಿ ಎಲ್ಲ ವ್ಯವಸ್ಥೆ ಮಾಡಲಾಗಿದೆ. ನಿರ್ವಹಣೆಗೆ ಸಿಬ್ಬಂದಿ ಇಲ್ಲದ್ದಕ್ಕೆ ಕೀಲಿ ಹಾಕಲಾಗಿದ್ದು, ಶೀಘ್ರ ನೇಮಕ ಮಾಡಲು ಕ್ರಮ ಕೈಗೊಳ್ಳುತ್ತೇವೆ. | ಜಿ.ಬಿ. ಕಬ್ಬೇರಹಳ್ಳಿ ಸಹಾಯಕ ಕಾರ್ಯದರ್ಶಿ, ಎಪಿಎಂಸಿ ಹುಬ್ಬಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net