ಎಪಿಎಂಸಿ ವಿಸ್ತರಣೆಗೆ ಶೀಘ್ರ ಭೂಮಿ

23-klr-3
Published on

ಕೋಲಾರ: ಕೋಲಾರ ಎಪಿಎಂಸಿಯಲ್ಲಿ ಜಾಗದ ಕೊರತೆಯಿಂದ ರೈತರು ಮತ್ತು ವ್ಯಾಪಾರಿಗಳಿಗೆ ತೊಂದರೆ ಆಗುತ್ತಿರುವುದು ನನ್ನ ಗಮನಕ್ಕೆ ಬಂದಿದ್ದು ಇನ್ನೆರಡು ತಿಂಗಳಲ್ಲಿ ಮಾರುಕಟ್ಟೆ ವಿಸ್ತರಣೆಗಾಗಿ ಭೂಮಿ ಮಂಜೂರಾಗಲಿದೆ ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಹೇಳಿದರು.

ತಾಲೂಕಿನ ಮಂಗಸಂದ್ರ ಗ್ರಾಮದಲ್ಲಿ ಗುರುವಾರ ಸಾಮೂಹಿಕ ನಾಯಕತ್ವದ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ವಿಶ್ವ ರೈತ ದಿನಾಚರಣೆಯಲ್ಲಿ ಕೃಷಿಯಲ್ಲಿ ಸಾಧನೆ ಮಾಡಿರುವ ರೈತರನ್ನು ಸನ್ಮಾನಿಸಿ, ನೇತ್ರದಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಕೋಲಾರ ಎಪಿಎಂಸಿ ಏಷ್ಯಾದಲ್ಲೇ ಅತಿ 2ನೇ ದೊಡ್ಡ ಟೊಮ್ಯಾಟೊ ಮಾರುಕಟ್ಟೆಯಾಗಿದೆ, ಹಾಲಿ ಮಾರುಕಟ್ಟೆಯಲ್ಲಿ ತರಕಾರಿ ಆವಕ ಹೆಚ್ಚಾದಾಗ ಸಂಚಾರ ದಟ್ಟಣೆಯಿಂದ ಹಾಗೂ ಸುಗಮವಾಗಿ ವ್ಯಾಪಾರ ವಹಿವಾಟು ನಡೆಯಲು ಕಷ್ಟವಾಗುವುದರಿಂದ ಈಗಾಗಲೆ ಭೂಮಿ ಗುರುತಿಸಿದ್ದು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ, ಸರ್ಕಾರದಿಂದ ಕಡಿತ ಬಂದ ಕೂಡಲೇ ಹೊಸ ಮಾರುಕಟ್ಟೆಗೆ ಭೂಮಿ ಹಸ್ತಾಂತರ ಮಾಡಲಾಗುವುದು ಎಂದರು.

ತಹಸೀಲ್ದಾರ್‌ಗಳಿಗೆ ಸೂಚನೆ: ಜಿಲ್ಲೆಯ ರೈತರ ಸಮಸ್ಯೆಗಳಿಗೆ ಜಿಲ್ಲಾಡಳಿತ ಸ್ಪಂದಿಸುತ್ತಿದೆ, ರೈತರು ಏನೇ ಸಮಸ್ಯೆಯಿದ್ದರೂ ನನ್ನ ಗಮನಕ್ಕೆ ತಂದಲ್ಲಿ ಕಾನೂನಾತ್ಮಕವಾಗಿ ಬಗೆಹರಿಸುವೆ ಎಂದರು.

ರೈತ ಸಾಂತ್ವನ ಕೇಂದ್ರ: ಸರ್ಕಾರ ರೈತರ ಅನುಕೂಲಕ್ಕಾಗಿ ರೈತ ಸಂಪರ್ಕ ಕೇಂದ್ರದ ಮಾದರಿಯಲ್ಲಿ ರೈತ ಸಾಂತ್ವನ ಕೇಂದ್ರ ತೆರೆಯುವ ಮೂಲಕ ರೈತರಿಗೆ ಉಪಯುಕ್ತ ಮಾಹಿತಿ ಒದಗಿಸಿ ಬೆಳೆ ನಷ್ಟದಿಂದ ಪಾರಾಗುವುದನ್ನು ತಪ್ಪಿಸುವಂತೆ ಜೆಡಿಎಸ್ ಯುವ ಮುಖಂಡ, ಟೊಮ್ಯಾಟೊ ಉದ್ಯಮಿ ಸಿ.ಎಂ.ಆರ್.ಶ್ರೀನಾಥ್ ಒತ್ತಾಯಿಸಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು ಮಾತನಾಡಿ, ವಿಧಾನ ಪರಿಷತ್‌ಗೆ ಶಿಕ್ಷಕ, ಪದವೀಧರ ಹಾಗೂ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಎಂಎಲ್‌ಸಿಯನ್ನು ಅಯ್ಕೆ ಮಾಡುವ ರೀತಿಯಲ್ಲಿ ಕೃಷಿ ಕ್ಷೇತ್ರದಿಂದ ಅನುಭವಿ ರೈತರೊಬ್ಬರನ್ನು ಪರಿಷತ್ತಿಗೆ ಆಯ್ಕೆ ಮಾಡಲು ಅವಕಾಶ ಸಿಕ್ಕಲ್ಲಿ ಕೃಷಿ ಬಿಕ್ಕಟ್ಟಿಗೆ ಶಾಶ್ವತ ಪರಿಹಾರ ಸಿಗಬಹುದು ಎಂದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ್, ತೋಟಗಾರಿಕೆ ಇಲಾಖೆ ಅಧಿಕಾರಿ ಮಂಜುನಾಥ್, ರೇಷ್ಮೆ ಇಲಾಖೆ ಉಪ ನಿರ್ದೇಶಕ ಕಾಳಪ್ಪ, ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಡಾ.ಅನಂತ, ಪ್ರಗತಿಪರ ರೈತ ವಕ್ಕಲೇರಿ ರಾಜಪ್ಪ, ಎ.ಪಿ.ಎಂಸಿ ಕಾರ್ಯದರ್ಶಿ ರವಿಕುಮಾರ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಶಂಕರೇಗೌಡ, ಆರೋಗ್ಯ ಇಲಾಖೆಯ ಕಾರ್ಯಕ್ರಮ ಅನುಷ್ಠಾನಧಿಕಾರಿ, ಡಾ. ನಾರಾಯಣಸ್ವಾಮಿ, ರೇಷ್ಮೆ ಇಲಾಖೆ ಉಪ ನಿರ್ದೇಶಕ ಕಾಳಪ್ಪ, ಪಿಯು ಉಪನಿರ್ದೇಶಕ ರಾಮಚಂದ್ರ, ನಿವೃತ್ತ ಪೊಲೀಸ್ ಅಧಿಕಾರಿ ಚೌಡಪ್ಪ. ರೈತ ಸಂಘದ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಇತರರಿದ್ದರು.

ದರಕಾಸ್ತು ಸಮಿತಿಯಲ್ಲಿ ಬಡ ರೈತರಿಗೆ ಮಂಜೂರು ಮಾಡಲಾದ ಭೂಮಿ ಸರ್ವೇ ಮಾಡಿಸಿ ಹಂಚಿಕೆ ಮಾಡಲು ಕಂದಾಯ ಮತ್ತು ಸರ್ವೇ ಇಲಾಖೆ ಸಿಬ್ಬಂದಿ ವಿಳಂಬ ನೀತಿ ಅನುಸರಿಸುತ್ತಿದ್ದಾರೆಂಬ ದೂರಿನ ಮೇರೆಗೆ ಸಂಬಂಧಪಟ್ಟ ತಾಲೂಕುಗಳ ತಹಸೀಲ್ದಾರ್ ಜತೆ ಚರ್ಚಿಸಿ ಕ್ರಮಕ್ಕೆ ಸೂಚಿಸಲಾಗಿದೆ. ಕೆಲ ಅರ್ಜಿಗಳನ್ನು ತಾಂತ್ರಿಕ ಕಾರಣದಿಂದ ವಿಲೇವಾರಿ ಮಾಡಲಾಗಿಲ್ಲ. ಡಾ. ಸೆಲ್ವಮಣಿ, ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net