

ಹುಬ್ಬಳ್ಳಿ: ಈ ಮೊದಲು ತಮ್ಮ ತಮ್ಮ ಅಂಗಡಿಗಳಿರುವ ರಸ್ತೆಯಲ್ಲೇ ವಹಿವಾಟು ಮಾಡಿಕೊಂಡು ಜನಜಂಗುಳಿ ಸೇರಿಸುತ್ತಿದ್ದ ವ್ಯಾಪಾರಸ್ಥರ ತಂತ್ರಕ್ಕೆ ಜಿಲ್ಲಾಡಳಿತ ಸರಿಯಾದ ಕ್ರಮ ಕೈಗೊಂಡಿದೆ.
ಮುಖ್ಯವಾಗಿ ಜನರ ಮಧ್ಯೆ ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಅದಕ್ಕಾಗಿ ಇಕ್ಕಟ್ಟಾದ ಜಾಗದಲ್ಲಿ ಮಾರುಕಟ್ಟೆ ನಡೆಸುತ್ತಿದ್ದ ವ್ಯವಸ್ಥೆಗೆ ಇತಿಶ್ರೀ ಹಾಡಿರುವ ಜಿಲ್ಲಾಡಳಿತ ಈ ಮೊದಲಿನ ತರಕಾರಿ ಸಗಟು ಮಾರುಕಟ್ಟೆ ಅಕ್ಕಪಕ್ಕದ ಹತ್ತಕ್ಕೂ ಹೆಚ್ಚು ರಸ್ತೆಗಳನ್ನು ಬಳಸಿಕೊಂಡು ವಹಿವಾಟು ನಡೆಸಲು ಸೂಚಿಸಿದ್ದು, ಅದರಂತೆ ತರಕಾರಿ ವಹಿವಾಟು ಬೇರೆಬೇರೆ ರಸ್ತೆಗಳಿಗೆ ಹಂಚಿ ಹೋಗಿದೆ.
ಹುಬ್ಬಳ್ಳಿ ತರಕಾರಿ ಸಗಟು ಮಾರುಕಟ್ಟೆಯಲ್ಲಿ ಈಗ ಬದಲಾವಣೆಯಾಗಿದೆ. 25 ಮೀಟರ್ಗೆ ಒಂದರಂತೆ ಗುರುತು ಹಾಕಿ ಕೊಡಲಾಗಿದ್ದು, ಅಲ್ಲಿ ಒಬ್ಬೊಬ್ಬ ವರ್ತಕರು ವಹಿವಾಟು ನಡೆಸುತ್ತಿದ್ದಾರೆ. ಇದರಿಂದ ಯಾವುದೇ ಗದ್ದಲ, ಗೌಜು ಇಲ್ಲದೇ ಸುಸೂತ್ರವಾಗಿ ತರಕಾರಿ ಮಾರುಕಟ್ಟೆ ನಡೆದುಕೊಂಡು ಹೊರಟಿದೆ.
ಒಂದೇ ರಸ್ತೆಯಲ್ಲಿ ಸ್ಥಾಪಿತ ಹಿತಾಸಕ್ತಿಗಳ ಕೈಯಲ್ಲಿ ಸಿಕ್ಕಿದ್ದ ತರಕಾರಿ ಮಾರುಕಟ್ಟೆಗೆ ಒಂದು ಕಾಯಕಲ್ಪ ಕಲ್ಪಿಸುವಲ್ಲಿ ಎಪಿಎಂಸಿ ಆಡಳಿತ ಹಾಗೂ ಜಿಲ್ಲಾಡಳಿತ ಯಶಸ್ವಿಯಾಗಿವೆ. ಪೊಲೀಸ್ ಇಲಾಖೆ ಕೂಡ ಪರಸ್ಪರ ಅಂತರ ಕಾಯ್ದುಕೊಳ್ಳದ ಹಾಗೂ ನಿಯಮ ಪಾಲನೆ ಮಾಡದ ಹಲವರ ಮೇಲೆ ಪ್ರಕರಣ ದಾಖಲಿಸುವ ಮೂಲಕ ಎಚ್ಚರಿಕೆ ನೀಡಿದೆ. ತರಕಾರಿ ಸಗಟು ವ್ಯಾಪಾರ ಬೆಳಗ್ಗೆ 7ರಿಂದ 10 ಗಂಟೆಯವರೆಗೆ ಬಹುತೇಕ ವಹಿವಾಟು ಮುಗಿದು ಹೋಗುತ್ತದೆ. ಇಲ್ಲಿ ಖರೀದಿಸಿದ ತರಕಾರಿಯನ್ನು ಚಿಲ್ಲರೆ ವ್ಯಾಪಾರಸ್ಥರು ಬೇರೆ ಬೇರೆ ಸ್ಥಳಗಳಿಗೆ ಕೊಂಡೊಯ್ದು ಮಾರಾಟ ಮಾಡುತ್ತಾರೆ.
ದರ ಇಳಿಕೆ: ಎಪಿಎಂಸಿಯಲ್ಲಿ ತರಕಾರಿ ದರ ಬಹಳಷ್ಟು ಇಳಿಕೆ ಕಂಡಿದೆ. ಟೊಮ್ಯಾಟೊ ಪ್ರತಿ ಬಾಕ್ಸ್ ಗೆ (20 ಕೆಜಿ) ಕೇವಲ 50 ರೂ., ಬದನೆಕಾಯಿ ನೂರು ರೂಪಾಯಿಗೆ ಮಾರಾಟವಾಗುತ್ತಿದೆ. ಇನ್ನು ಸೌತೆಕಾಯಿ, ಸೊಪ್ಪು ಎಲ್ಲ ದರಗಳು ಕಡಿಮೆಯಾಗಿವೆ.