ಎಪಿಎಂಸಿ ಮುಖ್ಯದ್ವಾರಗಳಲ್ಲಿ ಗೇಟ್ ಅಳವಡಿಕೆ

31SIRSI1
Published on

ಶಿರಸಿ: ಕೋವಿಡ್​19 ವೈರಸ್ ತಡೆಗಟ್ಟುವುದು ಹಾಗೂ ರೈತರ ಹಿತದೃಷ್ಟಿಯಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆವಾರದೊಳಗೆ ಸಾರ್ವಜನಿಕ ವಾಹನಗಳ ಅನಗತ್ಯ ಪ್ರವೇಶಕ್ಕೆ ಕಡಿವಾಣ ಹಾಕಲು ನಿರ್ಧರಿಸಲಾಗಿದೆ ಎಂದು ಎಪಿಎಂಸಿ ಅಧ್ಯಕ್ಷ ವಿಶ್ವನಾಥ ಹೆಗಡೆ ಶೀಗೆಹಳ್ಳಿ ಹೇಳಿದರು.

ಎಪಿಎಂಸಿ ಮುಖ್ಯದ್ವಾರದಲ್ಲಿ ಗೇಟ್ ಅಳವಡಿಕೆ ಕುರಿತು ಭಾನುವಾರ ಸ್ಥಳಕ್ಕೆ ತಹಸೀಲ್ದಾರ್ ಎಂ.ಆರ್. ಕುಲಕರ್ಣಿ ಹಾಗೂ ಮಾರುಕಟ್ಟೆ ಠಾಣೆ ಪಿಎಸ್​ಐ ನಾಗಪ್ಪ ಬಿ ಅವರೊಂದಿಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು.

ಎಪಿಎಂಸಿ ಆವಾರದಲ್ಲಿ ಬಿಗಿ ಬಂದೋಬಸ್ತ್ ಒದಗಿಸುವ ನಿಟ್ಟಿನಲ್ಲಿ ಮೂರು ಮುಖ್ಯದ್ವಾರಗಳಿಗೆ ಗೇಟ್ ವ್ಯವಸ್ಥೆ ಮಾಡಲಾಗುತ್ತಿದೆ. ಟಿಆರ್​ಸಿ ಬ್ಯಾಂಕ್ ಹಿಂಭಾಗ ಹಾಗೂ ಟಿಎಸ್​ಎಸ್ ಪಕ್ಕದಲ್ಲಿ ಗೇಟ್ ನಿರ್ಮಾಣ ಕಾರ್ಯ ಮುಕ್ತಾಯಗೊಂಡಿದೆ. ಟಿಎಂಎಸ್ ಪಕ್ಕದಲ್ಲಿ ಗೇಟ್ ಅಳವಡಿಕೆ ಕಾರ್ಯ ವಾರದೊಳಗೆ ಪೂರ್ಣಗೊಳ್ಳಲಿದೆ. ಎಪಿಎಂಸಿ ಆವಾರಕ್ಕೆ ರಾತ್ರಿ ವೇಳೆ ಹೊರ ಭಾಗಗಳಿಂದ ಬರುವ ಹಾಗೂ ಸ್ಥಳೀಯ ಖಾಸಗಿ ವಾಹನಗಳು ನಿತ್ಯ ರ್ಪಾಂಗ್ ಮಾಡುತ್ತಿರುವುದು ಕಂಡುಬಂದಿತ್ತು. ಖಾಸಗಿ ವಾಹನಗಳ ಮಾಲೀಕರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಅದರಂತೆ ಕೋವಿಡ್-19 ತಡೆಗಟ್ಟಲು ಸರ್ಕಾರದ ಆದೇಶದಂತೆ ಕೃಷಿ ಉತ್ಪನ್ನ ಮಾರುಕಟ್ಟೆಯ ಮೂರು ಗೇಟುಗಳ ಪೈಕಿ ಟಿಆರ್​ಸಿ ಬ್ಯಾಂಕ್ ಹಿಂಬದಿಯ ಗೇಟನ್ನು ತಾತ್ಕಾಲಿಕವಾಗಿ ಮುಂದಿನ ಆದೇಶದವರೆಗೆ ಬಂದ್ ಮಾಡಲಾಗಿದೆ. ಸಾರ್ವಜನಿಕರು ಮಾರುಕಟ್ಟೆಯ ಹೊರ ವಲಯದ ರಸ್ತೆಯನ್ನು ಬಳಸಬೇಕು ಎಂದು ಮನವಿ ಮಾಡಿದರು.

ಹೊರ ರಾಜ್ಯಗಳ ವಾಹನಗಳು ಟಿಎಸ್​ಎಸ್ ಪಕ್ಕದ ಗೇಟ್ ಮೂಲಕ ಆಗಮಿಸಿ ಟಿಎಂಎಸ್ ಪಕ್ಕದ ಗೇಟ್ ಮೂಲಕ ನಿರ್ಗಮಿಸಬೇಕು. ವಾಹನ ಚಾಲಕರು, ಕ್ಲೀನರ್​ಗಳ ಸಂಪೂರ್ಣ ವಿವರ, ವಾಹನದ ಆಗಮನ ಹಾಗೂ ನಿರ್ಗಮನ ವೇಳೆಯನ್ನು ಗೇಟ್ ಬಳಿಯಲ್ಲಿರುವ ಅಧಿಕಾರಿಗಳು ನೋಂದಾಯಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಟ್ರಾನ್ಸ್​ಪೋರ್ಟ್ ಮಾಲೀಕರು ಹಾಗೂ ವ್ಯಾಪಾರಸ್ಥರಿಗೆ ಈ ಕುರಿತು ಮುಂಚಿತವಾಗಿ ಸೂಚನೆ ನೀಡಲಾಗಿದೆ ಎಂದರು.

ಎಪಿಎಂಸಿ ಮುಖ್ಯ ಕಾರ್ಯನಿರ್ವಾಹಕಿ ವಿಜಯಲಕ್ಷ್ಮೀ, ಎಪಿಎಂಸಿ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net