

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಲಾಕ್ಡೌನ್ನಂಥ ಸಂಕಷ್ಟದ ಸಂದರ್ಭದಲ್ಲಿ ರೈತರ ಬೆಳೆಗೆ ನ್ಯಾಯಯುತ ಬೆಲೆ ಸಿಗುವಂತಾಗಲು ಹಾಗೂ ಎಪಿಎಂಸಿ ಮಾರುಕಟ್ಟೆಯಲ್ಲಿ ಜನದಟ್ಟಣೆ ಕಡಿಮೆಗೊಳಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮಾರುಕಟ್ಟೆಯನ್ನು ವಿಕೇಂದ್ರೀಕರಣಗೊಳಿಸುವಂತೆ ಕೆಪಿಸಿಸಿ ಕೋವಿಡ್-19 ಟಾಸ್ಕ್ಫೋರ್ಸ್ ಧಾರವಾಡ ಗ್ರಾಮೀಣ ಹಾಗೂ ಹು-ಧಾ ಮಹಾನಗರ ಜಿಲ್ಲಾಧ್ಯಕ್ಷರು, ಮಂಗಳವಾರ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ಗೆ ಪ್ರಸ್ತಾವನೆ ಸಲ್ಲಿಸಿದರು.
ಟಾಸ್ಕ್ಫೋರ್ಸ್ ಅಧ್ಯಕ್ಷರಾದ ಮಾಜಿ ಶಾಸಕ ನಾಗರಾಜ ಛಬ್ಬಿ, ಶಾಸಕ ಪ್ರಸಾದ ಅಬ್ಬಯ್ಯ, ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರು ಹಾಗೂ ಧಾರವಾಡ ಗ್ರಾಮೀಣ ಅಧ್ಯಕ್ಷ ಅನಿಲಕುಮಾರ ಪಾಟೀಲ, ಸಚಿವರ ನಿವಾಸದಲ್ಲಿ ಸಭೆ ನಡೆಸಿದರು.
ಹುಬ್ಬಳ್ಳಿ ಎಪಿಎಂಸಿ ಗೆ ನಿತ್ಯ 2500- 3000 ದವರೆಗೆ ರೈತರು, ದಲ್ಲಾಳಿಗಳು, ವ್ಯಾಪಾರಸ್ಥರು, ಗ್ರಾಹಕರು, ಇತರರು ಆಗಮಿಸುತ್ತಿದ್ದು, ಸಾಮಾಜಿಕ ಅಂತರ ಉಲ್ಲಂಘನೆಯಾಗುತ್ತಿದೆ. ಇದರಿಂದ ಕರೊನಾ ಸೋಂಕು ಹರಡುವಿಕೆ ತಡೆಯಲು ಅಸಾಧ್ಯವಾಗಲಿದೆ. ಅಲ್ಲದೆ, ಗುಂಪು ಗೂಡುವಿಕೆಯಿಂದ ಪೊಲೀಸರ ಆತಂಕದಲ್ಲಿ ಕೆಲ ರೈತರು ಸಿಕ್ಕ ಬೆಲೆಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದು ಕಂಡು ಬರುತ್ತಿದೆ. ಇದರಿಂದ ಲಾಕ್ಡೌನ್ನಂಥ ಸಂಕಷ್ಟದ ಸಮಯದಲ್ಲಿ ರೈತರಿಗೆ ಯೋಗ್ಯ ಬೆಲೆ ಸಿಗದೇ ದಲ್ಲಾಳಿಗಳಿಗೆ ಅನುಕೂಲ ಮಾಡಿಕೊಡುವಂತಾಗಿದೆ ಎಂದು ಸಚಿವರಿಗೆ ಮನವರಿಕೆ ಮಾಡಿದರು.
ಅಮರಗೋಳ ಎಪಿಎಂಸಿ ಯನ್ನು ತಾತ್ಕಾಲಿಕವಾಗಿ ವಿಭಜಿಸಿ ಹುಬ್ಬಳ್ಳಿ ಹೊರವಲಯದ ಟ್ರಕ್ ಟರ್ವಿುನಲ್ಸ್ಗಳಲ್ಲಿ ಮಾರುಕಟ್ಟೆಗೆ ಅವಕಾಶ ನೀಡಿದರೆ ಕುಂದಗೋಳ, ಕಲಘಟಗಿ, ಅಳ್ನಾವರ, ಹುಬ್ಬಳ್ಳಿ ಸುತ್ತಲಿನ ಗ್ರಾಮೀಣ ಭಾಗದ ರೈತರಿಗೆ ಅನುಕೂಲವಾಗಲಿದೆ. ಅಲ್ಲದೇ, ಅಮರಗೋಳ ಎಪಿಎಂಸಿಯಲ್ಲಿ ಧಾರವಾಡ, ನವಲಗುಂದ, ಅಣ್ಣಗೇರಿ, ಗಾಮನಗಟ್ಟಿ ಸುತ್ತಲಿನ ಭಾಗದ ರೈತರಿಗೆ ಅವಕಾಶ ನೀಡುವುದರಿಂದ ಜನದಟ್ಟಣೆ ಕಡಿಮೆಯಾಗಲಿದೆ. ರೈತರ ಉತ್ಪನ್ನಗಳಿಗೂ ಯೋಗ್ಯ ಬೆಲೆ ದೊರೆಯುವಂತಾಗಲಿದೆ ಎಂದು ಪ್ರಸ್ತಾವನೆ ಸಲ್ಲಿಸಿದರು.
ಹತ್ತಿ, ಕಾಳು ಖರೀದಿ ವಿಳಂಬ ಹಾಗೂ ಬೀಜ- ರಸಗೊಬ್ಬರ ವಿತರಣೆ ಸೇರಿ ರೈತರ ಇನ್ನಿತರ ಸಮಸ್ಯೆಗಳ ಕುರಿತು ರ್ಚಚಿಸಲು ಶೀಘ್ರವೇ ರೈತರ ಸಮ್ಮುಖದಲ್ಲಿ ಕೃಷಿ ಮತ್ತು ತೋಟಗಾರಿಕೆ ಸಚಿವರ ಸಭೆ ಆಯೋಜಿಸುವಂತೆ ಶೆಟ್ಟರ್ ಅವರಿಗೆ ಒತ್ತಾಯಿಸಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಜಗನ್ನಾಥ ಸಿದ್ದನಗೌಡ್ರ, ಸದಸ್ಯ ಕೆಂಪಲಿಂಗಗೌಡ್ರ, ಕೆಪಿಸಿಸಿ ಸದಸ್ಯ ಸತೀಶ ಮೆಹರವಾಡೆ, ಪಾಲಿಕೆ ಮಾಜಿ ಸದಸ್ಯ ವಿಜನಗೌಡ ಪಾಟೀಲ್, ರೈತ ಮುಖಂಡರಾದ ಪರುತಪ್ಪ ಬಳಗಣ್ಣವರ, ಸಿದ್ದಪ್ಪಣ್ಣ ಮೇಟಿ, ಗುರು ದಾನೇನವರ, ಮುತ್ತು ಉಗರಗೋಳ, ಗುರುಸಿದ್ದಪ್ಪ ಕಟಗಿ, ಮಲ್ಲಿಕಾರ್ಜುನ ಕುಂದನಹಳ್ಳಿ, ಪ್ರಸನ್ನಕುಮಾರ ಮಿರಜಕರ, ವಿರೂಪಾಕ್ಷಪ್ಪ, ಸಾಗರ ಗಾಯಕವಾಡ, ಇತರರು ಇದ್ದರು.