

ಹಾನಗಲ್ಲ: ರೈತರ ಹಿತ ಕಾಯಬೇಕಾದ ಸರ್ಕಾರ ಕಾಯ್ದೆಗಳಿಗೆ ತಿದ್ದುಪಡಿ ತಂದು ರೈತ ವಿರೋಧಿಯಾಗಿದೆ. ಕೃಷಿ ಬದುಕಿಗೆ ಪೆಟ್ಟು ಬಿದ್ದರೆ, ಅನ್ನದಾತ ತನ್ನ ಹಕ್ಕಿಗಾಗಿ ಹೋರಾಟಕ್ಕಿಳಿಯಬೇಕಾಗುತ್ತದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಎಚ್ಚರಿಸಿದರು.
ತಾಲೂಕಿನ ಬಾಳೂರ ಗ್ರಾಮದಲ್ಲಿ ರೈತ ಸಂಘದ ಘಟಕವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು. ಎಪಿಎಂಸಿ, ಭೂ-ಸುಧಾರಣಾ ಕಾಯ್ದೆ ತಿದ್ದುಪಡಿ, ವಿದ್ಯುತ್ ಖಾಸಗೀಕರಣ ರೈತರ ವಿರೋಧಿ ಧೋರಣೆಗಳಾಗಿವೆ. ಇದನ್ನು ರೈತರು ಬಲವಾಗಿ ವಿರೋಧಿಸುತ್ತಿದ್ದರೂ, ಸರ್ಕಾರ ಅದನ್ನು ಅನುಷ್ಠಾನಗೊಳಿಸುತ್ತಿದೆ. ಇದು ರೈತರ ಬಗೆಗೆ ಸರ್ಕಾರದ ಅಸಡ್ಡೆ ತೋರಿಸುತ್ತದೆ ಎಂದರು.
ಕರೊನಾ ಸಂದರ್ಭದಲ್ಲಿ ಎಲ್ಲ ಉದ್ಯೋಗ-ವ್ಯಾಪಾರಗಳು ಬಂದ್ ಆಗಿದ್ದರೂ ರೈತ ಮಾತ್ರ ಸುಮ್ಮನೆ ಕುಳಿತಿಲ್ಲ. ದೇಶದ 130 ಕೋಟಿ ಜನರ ಹೊಟ್ಟೆ ತುಂಬಿಸಲು ಹಗಲಿರುಳೂ ದುಡಿಯುತ್ತಲಿದ್ದಾನೆ. ಕೃಷಿಯಿಂದ ಯುವ ಸಮುದಾಯ ದೂರವಾಗಬಾರದು. ದೇಶದಲ್ಲಿ ಶೇ. 72ರಷ್ಟಿದ್ದ ರೈತರ ಸಂಖ್ಯೆ ಈಗ ಶೇ. 46ಕ್ಕೆ ಇಳಿದಿದೆ. ರೈತರು ಸಂಘಟಿತರಾಗದಿದ್ದರೆ ಉಳಿಗಾಲವಿಲ್ಲ. ಸ್ವಾಭಿಮಾನ ಕಳೆದುಕೊಳ್ಳಬೇಡಿ, ಸಾಲಕ್ಕೆ ಅಂಜಬೇಡಿ, ಸಾಲಕ್ಕೆ ಆತ್ಮಹತ್ಯೆ ಪರಿಹಾರವಲ್ಲ ಎಂದು ರಾಮಣ್ಣ ಕೆಂಚಳ್ಳೇರ ಸಲಹೆ ಮಾಡಿದರು.
ಸಂಘದ ತಾಲೂಕು ಅಧ್ಯಕ್ಷ ಮರಿಗೌಡ ಪಾಟೀಲ ಮಾತನಾಡಿ, ಫಸಲ್ ಬಿಮಾ ಯೋಜನೆಗಳಲ್ಲಿರುವ ನ್ಯೂನತೆಗಳನ್ನು ಹಾನಗಲ್ಲಿನ ರೈತರು ಸರ್ಕಾರಕ್ಕೆ ತಿಳಿಸಿದ ಮೇಲೆ ಪರಿವರ್ತನೆಗೊಂಡಿದೆ. ಸರ್ಕಾರದ ಯೋಜನೆಗಳ ಬಗ್ಗೆ ರೈತರಿಗೆ ಸಮಗ್ರ ಮಾಹಿತಿಯಿದ್ದರೆ ಮೋಸಗೊಳಿಸಲು ಸಾಧ್ಯವಾಗದು ಎಂದರು.
ಮಹ್ಮದ್ಗೌಸ್ ಪಾಟೀಲ, ಮಹ್ಮದ್ ಯೂಸೂಫ್ ಮುಂಡರಗಿ ಮಾತನಾಡಿದರು. ಬಾಳೂರ ಗ್ರಾಮ ಘಟಕದ ಅಧ್ಯಕ್ಷ ಮುಜಹೀರಹ್ಮದ್ ಹಾನಗಲ್ಲ ಅಧ್ಯಕ್ಷತೆ ವಹಿಸಿದ್ದರು. ಅಡವಿಸ್ವಾಮಿ ಮಠದ ಕುಮಾರ ಸ್ವಾಮಿಗಳು, ಮೌಲಾನಾ ಮುಫ್ತಿಮಹ್ಮದ್ಸಲಿಂ ಮಖಬೂಲಿ ಸಾನ್ನಿಧ್ಯ ವಹಿಸಿದ್ದರು. ಮಹೇಶ ವಿರುಪಣ್ಣನವರ, ಮಲ್ಲನಗೌಡ ಪಾಟೀಲ, ಪ್ರೇಮಾ ಹಿತ್ತಲಮನಿ ಉಪಸ್ಥಿತರಿದ್ದರು. ಅಲ್ಲಾಭಕ್ಷ ಮಲ್ಲಿಗ್ಗಾರ ನಿರೂಪಿಸಿದರು.
ಕೇವಲ ಭಾಷಣದಿಂದ ರೈತರ ಆದಾಯ ದ್ವಿಗುಣಗೊಳಿಸಲು ಸಾಧ್ಯವಿಲ್ಲ. ದೇಶದಲ್ಲಿ ರೈತರೇ ಹೆಚ್ಚು (7ಲಕ್ಷ) ಆತ್ಮಹತ್ಯೆಗೊಳಗಾಗುತ್ತಿದ್ದಾರೆ. ಸ್ವಾಮಿನಾಥನ್ ವರದಿ ಜಾರಿಗೊಳಿಸುವುದೇ ಇದಕ್ಕಿರುವ ಪರಿಹಾರ. ಅದಾನಿ- ಅಂಬಾನಿಗಳಿಗೆ ಸಾವಿರಾರು ಕೋಟಿ ತೆರಿಗೆ ವಿನಾಯಿತಿ ನೀಡುವ ಸರ್ಕಾರ, ರೈತರ ಸಾಲಮನ್ನಾ ಮಾಡಿದರೆ ಹೊರೆಯಾಗುತ್ತದೆ ಎನ್ನುತ್ತದೆ. ಅಧಿವೇಶನದಲ್ಲಿ ಜನಪ್ರತಿನಿಧಿಗಳು ರೈತರ ಸಮಸ್ಯೆ ಕುರಿತು ಮಾತನಾಡುವುದಿಲ್ಲ. | ರಾಮಣ್ಣ ಕೆಂಚಳ್ಳೇರ ರೈತ ಸಂಘದ ಹಾವೇರಿ ಜಿಲ್ಲಾಧ್ಯಕ್ಷ