

ಚಿಕ್ಕಬಳ್ಳಾಪುರ : ಸರ್ಕಾರವು ಕೈಗೊಂಡಿರುವ ಎಪಿಎಂಸಿ ಕಾಯ್ದೆಯ ಹೊಸ ತಿದ್ದುಪಡಿ ತೀರ್ಮಾನವನ್ನು ಕೈ ಬಿಡಬೇಕೆಂದು ಆಗ್ರಹಿಸಿ ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಘಟಕ ಬುಧವಾರ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿತು.
ಮಾಸ್ಕ್ ಧರಿಸಿದ್ದ ಹೋರಾಟಗಾರರು ಜಿಲ್ಲಾಧಿಕಾರಿ ಆರ್.ಲತಾ ಮೂಲಕ ರಾಜ್ಯ ಸರ್ಕಾರಕ್ಕೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸುವ ಪತ್ರ ಸಲ್ಲಿಸಿದರು.ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಭೈರೇಗೌಡ ಮಾತನಾಡಿ, ಅಂತಾರಾಷ್ಟ್ರೀಯ ಉದ್ದಿಮೆದಾರರು ಮತ್ತು ಕಾರ್ಪೋರೇಟ್ ಕಂಪನಿಗಳ ಅನುಕೂಲಕ್ಕೆ ಪೂರಕವಾಗಿ ಎಪಿಎಂಸಿ ಕಾಯ್ದೆ ಹೊಸ ತಿದ್ದುಪಡಿ ಮಾಡಲಾಗುತ್ತಿದೆ. ಇದು ರೈತರಿಗೆ ಮರಣ ಶಾಸನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಮೊದಲು ಕೇಂದ್ರ ಸರ್ಕಾರವು ಮಾರಕ ನಿಯಮ ಜಾರಿಗೆ ತರಲು ಮುಂದಾದಾಗ, ಎಪಿಎಂಸಿ ಕಾಯ್ದೆ ತಿದ್ದುಪಡಿ ಅಧಿಕಾರವು ರಾಜ್ಯ ಸರ್ಕಾರಗಳ ವ್ಯಾಪ್ತಿಗೆ ಬರುತ್ತದೆ ಎಂಬ ನಿಯಮವು ಅಡ್ಡಿಯಾಯಿತು. ಇದಕ್ಕೆ ಆಯಾ ರಾಜ್ಯಗಳ ಕೃಷಿ ಮಾರುಕಟ್ಟೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಸಚಿವ ಸಂಪುಟದಲ್ಲಿ ತಿದ್ದುಪಡಿಯ ನಿರ್ಧಾರವನ್ನು ಕೈಗೊಂಡು, ಅನುಮೋದನೆಗಾಗಿ ರಾಜ್ಯಪಾಲರಿಗೆ ಕಡತ ಕಳುಹಿಸಲು ಸೂಚಿಸಿದೆ. ಈಗಾಗಲೇ ಕರ್ನಾಟಕದಲ್ಲಿ ಸಚಿವ ಸಂಪುಟ ತೀರ್ಮಾನವನ್ನು ಕೈಗೊಂಡಿದ್ದು ಸುಗ್ರೀವಾಜ್ಞೆ ಹೊರಡಿಸಲಾಗುತ್ತಿದೆ ಎಂದು ಆರೋಪಿಸಿದರು.
ಹೊಸ ತಿದ್ದುಪಡಿಯಿಂದ ಯಾವುದೇ ಖರೀದಿದಾರ ರಾಜ್ಯದಲ್ಲಿ ಎಲ್ಲಿ ಬೇಕಾದರೂ ಹೋಗಿ ಖರೀದಿಸಬಹುದು ಮತ್ತು ಖಾಸಗಿ ಮಾರುಕಟ್ಟೆಯನ್ನು ಸ್ಥಾಪಿಸಬಹುದು. ಇದಕ್ಕೆ ತೆರಿಗೆಯನ್ನು ಸರ್ಕಾರಕ್ಕೆ ಪಾವತಿಸಬೇಕಾಗಿಲ್ಲ. ಎಪಿಎಂಸಿ ಮಾರುಕಟ್ಟೆಯ ಕಾಯ್ದೆಗಳು ಅನ್ವಯಿಸುವುದಿಲ್ಲ. ಖಾಸಗಿ ಮಾರುಕಟ್ಟೆ ಪ್ರಾರಂಭದಿಂದ ಸರ್ಕಾರಿ ಎಪಿಎಂಸಿಗಳು ಹಾಳಾಗುತ್ತವೆ ಎಂದು ಟೀಕಿಸಿದರು.
ಸಂಘದ ಜಿಲ್ಲಾಧ್ಯಕ್ಷ ಎಚ್.ಪಿ.ರಾಮನಾಥ್ ಮಾತನಾಡಿ, ರಾಜ್ಯ ಬಿಜೆಪಿ ಸರ್ಕಾರಕ್ಕೆ ಕೇಂದ್ರ ಸರ್ಕಾರದ ಆದೇಶ ವಿರುದ್ಧ ನಿರ್ಣಯ ಕೈಗೊಳ್ಳುವ ಶಕ್ತಿ ಇಲ್ಲ. ರೈತರ ಹಿತಾಸಕ್ತಿಯನ್ನು ಕಡೆಗಣಿಸಿ ಮರಣ ಶಾಸನ ಜಾರಿಗೆಗೆ ಮುಂದಾಗಿದೆ. ಇದರಿಂದ ಹಿಂದೆ ಸರಿಯದಿದ್ದಲ್ಲಿ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಸಂಘದ ತಾಲೂಕು ಅಧ್ಯಕ್ಷರಾದ ಎಂ.ರಾಮಾಂಜಿನಪ್ಪ, ರಮಣಾರೆಡ್ಡಿ, ತಾದೂರು ಮಂಜುನಾಥ್, ದಪ್ಪರ್ತಿ ಮುರಳಿ ಮತ್ತಿತರರು ಭಾಗವಹಿಸಿದ್ದರು.