

ಕೆ.ಆರ್.ನಗರ: ರೈತರಿಗೆ ತೊಂದರೆಯಾಗುತ್ತಿದ್ದ ಎಪಿಎಂಸಿ ಕಾಯ್ದೆಯನ್ನು ಹಿಂಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಪ್ರಸ್ತುತ ಅಧಿವೇಶನದಲ್ಲೇ ಕಾಯ್ದೆ ರದ್ದು ಪ್ರಸ್ತಾವನೆ ಅಂಗೀಕಾರಗೊಳ್ಳಲಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ಗಿರಿಜಮ್ಮ ಬಳೆಬಸವರಾಜಪ್ಪ ಭವನದಲ್ಲಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಭಾನುವಾರ ಆಯೋಜಿಸಿದ್ದ ಜಿಲ್ಲಾ ರೈತ ಸಮ್ಮೇಳನ ಮತ್ತು ರೈತ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಎಪಿಎಂಸಿ ಕಾಯ್ದೆ ರೈತರಿಗೆ ಮಾರಕವಾಗಿತ್ತು ಎಂದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ರೈತರಿಗೆ ಉಪಯುಕ್ತವಾದ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಬಾರಿಯೂ ಬಜೆಟ್‌ನಲ್ಲೂ 5 ಲಕ್ಷ ರೂ. ವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ವಿತರಿಸುವುದರ ಜತೆಗೆ ಹಲವು ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಲ್ಲಿದ್ದು, ಹಾರಂಗಿ ಅಣೆಕಟ್ಟೆ ಭರ್ತಿಯಾದ ಕೂಡಲೇ ನಾಲೆಗಳಿಗೆ ನೀರು ಹರಿಸಲಾಗುತ್ತದೆ ಎಂದು ಮಾಹಿತಿ ನೀಡಿದ ಶಾಸಕರು, ಕೊನೇ ಹಂತದ ರೈತರ ಜಮೀನುಗಳಿಗೂ ಸರಾಗವಾಗಿ ನೀರು ಹರಿಸುವ ಉದ್ದೇಶದಿಂದ ನಾಲೆಗಳ ಸ್ವಚ್ಛತೆ ಮತ್ತು ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ರೈತರ ಬದುಕು ಹಸನಾದಾಗ ದೇಶ ಅಭಿವೃದ್ಧಿ ಕಾಣಲು ಸಾಧ್ಯ ಎಂದರಲ್ಲದೆ, ರೈತ ವಿಮುಖಗೊಂಡಿರುವಂತಹ ರಾಷ್ಟ್ರಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಆದ್ದರಿಂದ ಸರ್ಕಾರಗಳು ರೈತರ ಪರವಾದ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕು.ನಮ್ಮ ಸರ್ಕಾರ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ ಎಂದು ಹೇಳಿದರು.
ಸಂಘದ ರಾಜ್ಯ ಅಧ್ಯಕ್ಷ ಶರಣಪ್ಪ ದೊಡ್ಡಮನಿ, ಮಹಿಳಾ ರಾಜ್ಯ ಅಧ್ಯಕ್ಷೆ ಮೈನಾವತಿ, ಯುವ ಘಟಕದ ರಾಜ್ಯ ಅಧ್ಯಕ್ಷ ಫಯಾಜ್, ಮಾತನಾಡಿದರು. ಇದೇ ಸಂದರ್ಭದಲ್ಲಿ ರೈತ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸ್ವರಾಜ್ ಇಂಡಿಯಾ ತಾಲೂಕು ಅಧ್ಯಕ್ಷ ಗರುಡಗಂಭಸ್ವಾಮಿ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ವೀಣಾಕುಮಾರಿ, ರೈತ ಮುಖಂಡರಾದ ಇಂದ್ರಮ್ಮ, ಎ.ಎಸ್.ರಾಮಪ್ರಸಾದ್, ಡಿ.ಕೆ.ಕೊಪ್ಪಲುಮರೀಗೌಡ, ರಾಜೇಶ್, ದಿನೇಶ್, ಯೋಗಾನಂದ್, ಶ್ರೀನಿವಾಸ್, ಕೆಂಪುಗೌಡ, ದೊರೆಸ್ವಾಮಿ, ಮಂಜುನಾಥ್ ಇತರರು ಇದ್ದರು.