

ಸಾಗರ: ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿರುವ ಕ್ರಮವನ್ನು ಮರು ಪರಿಶೀಲಿಸುವಂತೆ ಅಧ್ಯಕ್ಷ ಚೇತನ್ರಾಜ್ ಕಣ್ಣೂರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಶನಿವಾರ ಸುದ್ದಿಗಾರರ ಜತೆ ಮಾತನಾಡಿ, ಎಪಿಎಂಸಿ ಕಾಯ್ದೆಗೆ ಕೇಂದ್ರ ಸರ್ಕಾರದ ನಿರ್ದೇಶನದಂತೆ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಕೃಷಿ ಉತ್ಪನ್ನಗಳಿಗೆ ತಿದ್ದುಪಡಿ ತಂದಿರುವುದರಿಂದ ಪಾರಂಪರಿಕ ಕೃಷಿ ಉತ್ಪಾದಕರಿಗೆ ಅನನುಕೂಲ ಎಂದು ತಿಳಿಸಿದರು.
ಹಿಂದಿನ ಎಪಿಎಂಸಿ ಕಾಯ್ದೆಯಿಂದ ರಾಜ್ಯ ಸರ್ಕಾರಕ್ಕೆ ಮಾರುಕಟ್ಟೆ ಶುಲ್ಕದ ಮೂಲಕ ಪ್ರತಿ ವರ್ಷ 750-800 ಕೋಟಿ ರೂ. ಆದಾಯ ಬರುತ್ತಿದೆ. ಇದರಿಂದ ಎಪಿಎಂಸಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸ, ರೈತಪರ ಯೋಜನೆಗಳನ್ನು ಕೈಗೆತ್ತಿಕೊಳ್ಳಬಹುದಿತ್ತು. ಸಾಗರ ಎಪಿಎಂಸಿ ಒಂದರಲ್ಲೇ ಪ್ರತಿವರ್ಷ ಬರುತ್ತಿದ್ದ 10-12 ಕೋಟಿ ರೂ. ಆದಾಯಕ್ಕೆ ಹೊಡೆತ ಬೀಳಲಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಕೇಂದ್ರದ ಸೂಚನೆಯಂತೆ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದರೆ ಆದಾಯ ಕುಸಿಯಲಿದೆ. ಮಧ್ಯವರ್ತಿ, ವ್ಯಾಪಾರಸ್ಥರಿಗೆ ಅನುಕೂಲವಾಗಲಿದೆ. ಪ್ರಾಂಗಣದ ಒಳಗೆ ಯಾರೂ ಉತ್ಪನ್ನಗಳನ್ನು ಮಾರಾಟ ಮಾಡದೇ ಮಾರುಕಟ್ಟೆ ಶುಲ್ಕ ಉಳಿಸಿಕೊಳ್ಳಲು ಹೊರಗೆ ವಹಿವಾಟು ನಡೆಸುತ್ತಾರೆ ಎಂದು ಅಭಿಪ್ರಾಯಪಟ್ಟರು.
ಹಿಂದಿನ ಕಾಯ್ದೆಯಡಿ ಎಪಿಎಂಸಿ ಚುನಾಯಿತ ಪ್ರತಿನಿಧಿಗಳಿಗೆ ಅಧಿಕಾರ ಇದೆ. ಕಾಯ್ದೆ ತಿದ್ದುಪಡಿಯಿಂದ ಚುನಾಯಿತ ಮಂಡಳಿಗಳ ಅಧಿಕಾರ ಮೊಟಕುಗೊಳ್ಳಲಿದೆ. ಚುನಾಯಿತ ಸದಸ್ಯರು ಯಾರನ್ನೂ ಪ್ರಶ್ನೆ ಮಾಡಲು ಸಾಧ್ಯವಾಗದ ಸ್ಥಿತಿ ನಿರ್ವಣವಾಗುತ್ತದೆ ಎಂದರು. ತೋಟಗಾರ್ಸ್ ಅಧ್ಯಕ್ಷ ಕೆ.ಸಿ.ದೇವಪ್ಪ ಇದ್ದರು.