

ಮೈಸೂರು: ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಯಿತು.
ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ರಾಜ್ಯ ಸರ್ಕಾರವು ಎಪಿಎಂಸಿ ಕಾಯ್ದೆಗೆ ತಿದ್ದುಪಡಿಗೆ ಮುಂದಾಗಿರುವುದು ಸರಿಯಲ್ಲ. ತಕ್ಷಣ ಇದನ್ನು ಕೈಬಿಡಬೇಕು ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು.
ಇದು ಜಾರಿಯಾದರೆ ರೈತರ ಕೃಷಿ ಉತ್ಪನ್ನಗಳನ್ನು ಖರೀದಿದಾರರು ಮತ್ತು ಮಾರುವ ಮಾಲೀಕರು ನೇರವಾಗಿ ರೈತರಿಂದ ಖರೀದಿ ಮಾಡಬಹುದಾಗಿದೆ. ಇದರಿಂದ ರೈತರಿಗೆ ನ್ಯಾಯಯುತ ಬೆಲೆ ಸಿಗುವ ಬದಲು ಹೆಚ್ಚು ಶೋಷಣೆಯಾಗುತ್ತದೆ. ಸ್ಪರ್ಧಾತ್ಮಕ ಬೆಲೆ ಸಿಗದೆ, ಬಂಡವಾಳಶಾಹಿಗಳು, ಖರೀದಿದಾರರು ನಿರ್ಧರಿಸಿದ ಬೆಲೆಗೆ ರೈತರು ಮಾರಾಟ ಮಾಡಬೇಕಾಗುತ್ತದೆ. ತೂಕದಲ್ಲೂ ಮೋಸವಾಗುವ ಸಂಭವ ಇದೆ. ಜತೆಗೆ, ಇಡೀ ಎಪಿಎಂಸಿ ವ್ಯವಸ್ಥೆ ನಾಶವಾಗಿ ಖರೀದಿ ಮಾಡುವ ಕಂಪನಿಗಳ ಹಿಡಿತದಲ್ಲಿ ಸಿಲುಕಿ ರೈತರು ನರಳಾಡಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಅಲ್ಲದೆ, ಕೃಷಿ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆಗೆ ಸರ್ಕಾರವೇ ಖರೀದಿ ಮಾಡುವಂತಹ ವ್ಯವಸ್ಥೆ ಸ್ಥಗಿತವಾಗಲಿದೆ. ಜತೆಗೆ, ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವ ಮಾನದಂಡವೂ ಕೈತಪ್ಪಲಿದೆ. ಇದು ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಲಿದೆ. ಹೊಸ ಕಾಯ್ದೆ ಪ್ರಕಾರ ದರ, ತೂಕದಲ್ಲಿ ಮೋಸವಾದಾಗ ಖರೀದಿದಾರರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ಇರಲ್ಲ. ಇದು ರೈತರಿಗೆ ಮಾರಕವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಹಾಲಿ ಕಾಯ್ದೆಯಲ್ಲಿನ ಲೋಪದೋಷ ಸರಿಪಡಿಸುವ ಕೆಲಸ ಮಾಡಲಿ. ಇದರಿಂದ ರೈತರಿಗೆ ಬಲ ಬರಲಿದೆ. ಹೀಗಾಗಿ, ಎಪಿಎಂಸಿ ಕಾಯ್ದೆ ತಿದ್ದುಪಡಿ ತರುವ ಕ್ರಮವನ್ನು ಕೈಬಿಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.
ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿರುವುದು ಕೂಡ ರೈತ ವಿರೋಧಿಯಾಗಿದೆ. ಕೃಷಿ ಭೂಮಿ ಹೊಂದಿರುವವರು, ಬೇರೊಂದು ಕೃಷಿ ಭೂಮಿಯನ್ನು ಖರೀದಿಸಬೇಕು ಎಂಬ ನಿಯಮವನ್ನು ರದ್ದುಗೊಳಿಸಿದ್ದು, ಯಾರು ಬೇಕಾದರೂ ಖರೀದಿಗೆ ಅವಕಾಶ ನೀಡಲಾಗಿದೆ. ಇದರಿಂದ ಕೃಷಿ ಭೂಮಿ ಕೈಗಾರಿಕೋದ್ಯಮಿಗಳ, ರಿಯಲ್ ಎಸ್ಟೇಟ್ ಉದ್ದಿಮೆದಾರರ ಪಾಲಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೃಷಿ ಭೂಮಿ ಖರೀದಿಯಲ್ಲೂ ಸೂಕ್ತ ಬೆಲೆ ನೀಡದೆ ಮೋಸ ಮಾಡುವ ಸಾಧ್ಯತೆಯಿದೆ. ಕೃಷಿ ಕ್ಷೇತ್ರದಿಂದ ರೈತರನ್ನು ಒಕ್ಕಲೆಬ್ಬಿಸಲು ಇದು ನೆರವಾಗಲಿದೆ. ಹೊಸದಾಗಿ ತಂದಿರುವ ಭೂಸುಧಾರಣಾ ಕಾಯ್ದೆಯನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಅತ್ತಹಳ್ಳಿ ದೇವರಾಜು ಇನ್ನಿತರರು ಪ್ರತಿಭಟನೆಯಲ್ಲಿದ್ದರು.