

ಹುಬ್ಬಳ್ಳಿ: ಕೇಂದ್ರ ಸರ್ಕಾರದ ಆದೇಶಕ್ಕೆ ತಲೆಬಾಗಿ ತಕ್ಷಣವೇ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೂಡಲೇ ಕೈಬಿಡಬೇಕು ಎಂದು ಹುಬ್ಬಳ್ಳಿ ವ್ಯಾಪಾರಸ್ಥರ ಸಂಘ ಹಾಗೂ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಈ ಕುರಿತು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಬುಧವಾರ ಮನವಿ ಸಲ್ಲಿಸಲಾಗಿದ್ದು, ಕೃಷಿ ಉತ್ಪನ್ನಗಳ ಮಾರಾಟ ಹಾಗೂ ಖರೀದಿಗೆ ಹೇರಿದ ನಿರ್ಬಂಧ ಸಡಿಲಿಸಿ ಈ ಕ್ಷೇತ್ರದಲ್ಲಿ ಖಾಸಗಿ ಕಂಪನಿಗಳಿಗೆ ಅವಕಾಶ ನೀಡುವುದು ಸರಿಯಲ್ಲ. ಈ ವಿಚಾರದಲ್ಲಿ ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಾಗಲಿ, ರೈತ ಪ್ರತಿನಿಧಿಗಳೊಂದಿಗಾಗಲಿ, ವ್ಯಾಪಾರಸ್ಥರ ಪ್ರತಿನಿಧಿಗಳೊಂದಿಗಾಗಲಿ ಚರ್ಚೆ ಮಾಡಿಲ್ಲ. ಹಾಗಾಗಿ ದಿಢೀರ್ ನಿರ್ಧಾರ ಬೇಡ ಎಂದು ಸಂಘದ ಪದಾಧಿಕಾರಿಗಳು ಕೋರಿದ್ದಾರೆ.
ಕಾರ್ವಿುಕರಿಗೆ ಅನ್ಯಾಯ: ಎಪಿಎಂಸಿ ಕಾಯ್ದೆಗೆ ತರಾತುರಿಯಲ್ಲಿ ತಿದ್ದುಪಡಿ ತರುವುದರಿಂದ ಹಾಗೂ ಖಾಸಗೀಕರಣ ಮಾಡುವುದರಿಂದ ರೈತರು, ವರ್ತಕರು, ಕಾರ್ವಿುಕರು ಎಲ್ಲರಿಗೂ ಅನ್ಯಾಯವಾಗಲಿದೆ. ಮುಂದೊಂದು ದಿನ ಕೋಟ್ಯಂತರ ರೂ. ವೆಚ್ಚ ಮಾಡಿ ಅಭಿವೃದ್ಧಿಪಡಿಸಿದ ಎಪಿಎಂಸಿಗಳಿಗೆ ಕೆಲಸವೇ ಇಲ್ಲದಂತಾಗಬಹುದು. ಈ ಬಗ್ಗೆ ರಾಜ್ಯ ಸರ್ಕಾರ ಗಂಭೀರ ಚಿಂತನೆ ಮಾಡಬೇಕು ಎಂದು ಹುಬ್ಬಳ್ಳಿ ವರ್ತಕರ ಸಂಘದ ಅಧ್ಯಕ್ಷ ಬಸವರಾಜ ಯಕಲಾಸಪುರ ಮನವಿ ಮಾಡಿದ್ದಾರೆ.
ಎಪಿಎಂಸಿಯಲ್ಲಿ ಸಭೆ: ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ವಿರೋಧಿಸಿ ಹುಬ್ಬಳ್ಳಿ ಎಪಿಎಂಸಿ ವ್ಯಾಪಾರಸ್ಥರ ಸಂಘದಲ್ಲಿ ಬುಧವಾರ ಬೆಳಗ್ಗೆ ಎಲ್ಲ ವರ್ತಕರ ಸಭೆ ನಡೆಸಲಾಯಿತು. ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ (ಕೆಸಿಸಿಐ) ಮಾಜಿ ಅಧ್ಯಕ್ಷ ಶಂಕರಣ್ಣ ಮುನವಳ್ಳಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಲವು ವರ್ತಕರು ಮಾತನಾಡಿ, ತಿದ್ದುಪಡಿ ವಿರೋಧಿಸಿದರು. ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು.
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಮಹೇಂದ್ರ ಲದ್ದಡ, ಗೌರವ ಕಾರ್ಯದರ್ಶಿ ಅಶೋಕ ಗಡಾದ, ವರ್ತಕರ ಸಂಘದ ಗೌರವ ಕಾರ್ಯದರ್ಶಿ ಪ್ರಭುಲಿಂಗಪ್ಪ ಅಂಕಲಕೋಟಿ, ಎಪಿಎಂಸಿ ಸದಸ್ಯ ಚನ್ನು ಹೊಸಮನಿ, ಕಾರ್ವಿುಕ ಮುಖಂಡ ಮಹೇಶ ಪತ್ತಾರ, ಬಸಪ್ಪ ನೀರಲಗಿ, ಮೋಹನ ಸೋಳಂಕಿ, ಹಮಾಲರ ಸಂಘದ ಅಧ್ಯಕ್ಷ ಕರಿಯಪ್ಪ ದಳವಾಯಿ ಹಾಗೂ ಪದಾಧಿಕಾರಿಗಳು ಸಭೆಯಲ್ಲಿದ್ದರು.