ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತ ನಿರ್ನಾಮ : ಪ್ರಗತಿಪರ ಚಿಂತಕ ಯತಿರಾಜ್ ಅಭಿಪ್ರಾಯ

8 mn kote 1
Published on

ಎಂ.ಎನ್.ಕೋಟೆ : ರೈತರ ಬದುಕಿನ ಜತೆ ಆಟವಾಡುತ್ತಿರುವ ಸರ್ಕಾರ ಎಪಿಎಂಸಿ ಮತ್ತು ಭೂಸ್ವಾಧೀನ ಕಾಯ್ದೆ ತಿದ್ದುಪಡಿ ಜಾರಿಗೆ ತಂದು ಕೃಷಿಕ ವರ್ಗದ ನಿರ್ನಾಮಕ್ಕೆ ನಾಂದಿ ಹಾಡಲಿದೆ ಎಂದು ಪ್ರಗತಿಪರ ಚಿಂತಕ ಯತಿರಾಜ್ ಅಭಿಪ್ರಾಯಪಟ್ಟರು.

ಹಾಗಲವಾಡಿ ಹೋಬಳಿ ಮತ್ತಿಕೆರೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ರೈತಸಂಘ ಹಾಗೂ ಹಸಿರುಸೇನೆಯ ಗ್ರಾಮಘಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರದ ಎಲ್ಲ ವಹಿವಾಟುಗಳನ್ನು ಕಾರ್ಪೋರೇಟ್ ಸಂಸ್ಥೆಗೆ ಮಾರಾಟ ಮಾಡುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರ ಮುಂದೆ ಸೇವಾ ಮನೋಭಾವ ತೊರೆದು ಎಲ್ಲವನ್ನೂ ವ್ಯಾಪಾರೀಕರಣ ಮಾಡಲಿದ್ದಾರೆ ಎಂದು ಕಿಡಿಕಾರಿದರು.

ಕೃಷಿ ಮೂಲಕ ಬದುಕು ನಡೆಸುವ ರೈತರು ಜಮೀನು ಮಾರಿಕೊಂಡು ಬಂಡವಾಳಶಾಹಿಗಳ ನೆರಳಲ್ಲಿ ಹೊಟ್ಟೆಗೆ ತಣ್ಣೀರ ಬಟ್ಟೆ ಕಟ್ಟಿಕೊಳ್ಳಬೇಕಿದೆ. ಈ ಬಗ್ಗೆ ಚಕಾರವೆತ್ತದ ಶಾಸಕರು, ಸಂಸದರು, ಸಚಿವರು ಆಡಳಿತರೂಢ ಸರ್ಕಾರದ ತಾಳಕ್ಕೆ ಕುಣಿಯುತ್ತಿರುವುದು ರೈತ ವಿರೋಧಿ ನೀತಿಯಾಗಿದೆ ಎಂದರು.

ರೈತಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಕೆ.ಎನ್.ವೆಂಕಟೇಗೌಡ ಮಾತನಾಡಿ, ಬಂಡವಾಳಶಾಹಿಗಳು ಉತ್ಪಾದಿಸುವ ಸಣ್ಣ ವಸ್ತುಗಳಿಗೂ ವೈಜ್ಞಾನಿಕ ಬೆಲೆ ನಿಗದಿಯಾಗುತ್ತಿರುವ ಈ ಸಂದರ್ಭದಲ್ಲಿ ರೈತನ ಬೆಳೆಗಳಿಗೆ ಬೆಲೆ ನಿಗದಿಯಾಗುತ್ತಿದೆ. ರೈತ ಬೆಳೆದ ಆಹಾರ ಪದಾರ್ಥಗಳಿಗೆ ಆತನೇ ಬೆಲೆ ನಿಗದಿ ಮಾಡಲಾಗದೇ ಪರದಾಡುತ್ತಾನೆ. ಆದರೆ ಮಧ್ಯವರ್ತಿಗಳು ಬೆಳೆಗೆ ಬೆಲೆ ನಿಗದಿ ಮಾಡುವ ಹಂತ ತಲುಪಿರುವುದೇ ನಮ್ಮ ದೌರ್ಭಾಗ್ಯ ಎಂದು ವಿಷಾದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net