ಎಪಿಎಂಸಿ ಅಭಿವೃದ್ಧಿಯಲ್ಲಿ ಏಕರೂಪತೆ ಅವಶ್ಯ

kcci samvad
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ರಾಜ್ಯದ ಎಲ್ಲ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಗಳಲ್ಲಿನ ಖಾಸಗಿ ಸ್ವತ್ತುಗಳ ಮೇಲೆ ಆಸ್ತಿ ತೆರಿಗೆ ಆಕರಣೆ ಹಾಗೂ ಅಲ್ಲಿಯ ಅಭಿವೃದ್ಧಿ ವಿಷಯದಲ್ಲಿ ಏಕರೂಪತೆ ತರುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಚರ್ಚೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಮಾರಾಟ ಇಲಾಖೆಯ ನಿರ್ದೇಶಕ ಶಿವಾನಂದ ಕಾಪಶಿ ಹೇಳಿದರು.

ಇಲ್ಲಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಎಪಿಎಂಸಿ ಸಮಸ್ಯೆಗಳ ಕುರಿತು ವರ್ತಕರೊಂದಿಗೆ ಶುಕ್ರವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಗರ ಸ್ಥಳೀಯ ಸಂಸ್ಥೆಗಳಂತೆ ಎಪಿಎಂಸಿಯು ಸ್ವತಂತ್ರ ಆಡಳಿತ ಸಂಸ್ಥೆಯಾಗಿದ್ದು, ಹೈಕೋರ್ಟ್ ತೀರ್ಪಿನ ಪ್ರಕಾರ ಎಪಿಎಂಸಿಯ ಸ್ವಂತ ಆಸ್ತಿಗೆ ಆಸ್ತಿ ತೆರಿಗೆಯಿಂದ ವಿನಾಯಿತಿ ಇರುತ್ತದೆ. ಆದರೆ, ಅಲ್ಲಿನ ಖಾಸಗಿ ಸ್ವತ್ತುಗಳಿಗೆ ಖಾಸಗಿ ವ್ಯಕ್ತಿಗಳು ನಗರ ಸ್ಥಳೀಯ ಸಂಸ್ಥೆಗಳಿಗೆ ಆಸ್ತಿ ತೆರಿಗೆ ಪಾವತಿಸಬೇಕಾಗುತ್ತದೆ ಎಂದರು.

ಕೆಲವೆಡೆ ಆಸ್ತಿ ತೆರಿಗೆ ವಸೂಲಿ ಮಾಡಿಯೂ ನಗರ ಸ್ಥಳೀಯ ಸಂಸ್ಥೆಗಳು ಎಪಿಎಂಸಿಗಳಿಗೆ ಮೂಲಸೌಕರ್ಯ ಕಲ್ಪಿಸಿಲ್ಲ. ಕೆಲವಡೆ ಆಸ್ತಿ ತೆರಿಗೆ ಪಾವತಿಸದಿದ್ದರೂ ಸ್ಥಳೀಯ ನಾಯಕತ್ವದ ಪ್ರಭಾವದಿಂದ ಮೂಲ ಸೌಕರ್ಯ ಕಲ್ಪಿಸಲಾಗಿದೆ. ವರ್ತಕರಿಂದ ಸೆಸ್ ಆಕರಣೆ ಮಾಡುವ ಎಪಿಎಂಸಿಗಳ ಮೇಲೆ ಸ್ಥಳೀಯವಾಗಿ ಮೂಲಸೌಕರ್ಯಗಳನ್ನು ಕಲ್ಪಿಸುವ ಹೊಣೆಗಾರಿಕೆ ಇದೆ ಎಂದು ಅಭಿಪ್ರಾಯಿಸಿದರು.

8 ಸಾವಿರ ಎಕರೆ ಆಸ್ತಿ

ರಾಜ್ಯದಲ್ಲಿರುವ 171 ಎಪಿಎಂಸಿಗಳ ಬಳಿ 8 ಸಾವಿರ ಎಕರೆ ಸ್ವಂತ ಆಸ್ತಿ ಇದೆ. ಇವೆಲ್ಲ ಸ್ವಂತ ಅನುದಾನದಿಂದ ಖರೀದಿ ಮಾಡಿರುವುದು. ಹುಬ್ಬಳ್ಳಿ ಎಪಿಎಂಸಿ ಬಳಿ 50 ಕೋಟಿ ರೂ. ಆದಾಯವಿದೆ. ಆದರೆ, ಇಲ್ಲಿ ಸಿಸಿ ರಸ್ತೆ ನಿರ್ವಣಕ್ಕೆ 200 ಕೋಟಿ ರೂ. ಹಾಗೂ ಯುಜಿಡಿ ಸೌಲಭ್ಯ ಕಲ್ಪಿಸಲು 130 ಕೋಟಿ ರೂ. ಬೇಕು ಎಂದು ತಿಳಿಸಿದರು.

ಇ-ಸ್ವತ್ತು ಸೃಜನೆಯಲ್ಲಿ ಆಗುತ್ತಿರುವ ವಿಳಂಬ ಹಾಗೂ ಸಮಸ್ಯೆಗಳ ಬಗ್ಗೆ ವರ್ತಕರು ದೂರಿದರು. ಎಪಿಎಂಸಿ ವತಿಯಿಂದಲೇ ಇ-ಸ್ವತ್ತು ಸೃಜಿಸಲು ಪರ್ಯಾಯ ವ್ಯವಸ್ಥೆ ರೂಪಿಸುವ ಬಗ್ಗೆ ನೋಂದಣಿ ಮಹಾ ನಿರೀಕ್ಷಕ (ಐಜಿಆರ್)ರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಶಿವಾನಂದ ಕಾಪಶಿ ಹೇಳಿದರು.

1ರಿಂದ 1.5 ಕೋಟಿ ಆಸ್ತಿ ತೆರಿಗೆ

p>ಹುಬ್ಬಳ್ಳಿ ಎಪಿಎಂಸಿ ವರ್ತಕರು ಪಾಲಿಕೆಗೆ ವರ್ಷಕ್ಕೆ 1ರಿಂದ 1.5 ಕೋಟಿ ರೂ. ನಷ್ಟು ಆಸ್ತಿ ತೆರಿಗೆ ಪಾವತಿಸುತ್ತಿದ್ದಾರೆ. ಅಕ್ಕಿಹೊಂಡದಿಂದ ಕಾಳು-ಕಡಿ ಮಾರುಕಟ್ಟೆಯನ್ನು ಎಪಿಎಂಸಿಗೆ ಸ್ಥಳಾಂತರಿಸುವಾಗ 1 ವರ್ಷದಲ್ಲಿ ಮೂಲಸೌಕರ್ಯ ಕಲ್ಪಿಸುವುದಾಗಿ ಹೇಳಲಾಗಿತ್ತು. ಆದರೆ, 15-16 ವರ್ಷಗಳಾದರೂ ಪಾಲಿಕೆ, ಎಪಿಎಂಸಿಯಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸಿಲ್ಲ. ವಿದ್ಯುತ್ ಸಮಸ್ಯೆ ವಿಪರೀತವಾಗಿದೆ ಎಂದು ಹುಬ್ಬಳ್ಳಿ ಆಹಾರ ಧಾನ್ಯ ವರ್ತಕರ ಸಂಘದ ಅಧ್ಯಕ್ಷ ಚನ್ನು ಹೊಸಮನಿ ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net