ಎಪಿಎಂಸಿ ಅಭಿವೃದ್ಧಿಗೆ ಅಗತ್ಯ ಕ್ರಮ

31-07-Shiva-6
ರಾಯಚೂರಿನ ಎಪಿಎಂಸಿ ಸಭಾಂಗಣದಲ್ಲಿ ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಅಧ್ಯಕ್ಷತೆಯಲ್ಲಿ ಸೋಮವಾರ ವರ್ತಕರು, ದಲ್ಲಾಳಿಗಳು ಕುಂದುಕೊರತೆ ಸಭೆ ಜರುಗಿತು. ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ಉಪಾಧ್ಯಕ್ಷ ಬಷೀರ ಅಹ್ಮದ್, ಕಾರ್ಯದರ್ಶಿ ಆದಪ್ಪಗೌಡ, ಸದಸ್ಯರಾದ ನಾರಾಯಣ, ಭೀಮರೆಡ್ಡಿ, ಹನುಮಂತ, ಸಿದ್ದನಗೌಡ ನೆಲಹಾಳ ಇದ್ದರು.
Published on

ರಾಯಚೂರು: ಕೃಷಿ ಉತ್ಪನ್ನ ಮಾರುಕಟ್ಟೆಯ ಅಭಿವೃದ್ಧಿಗೆ ಅಗತ್ಯ ಕ್ರಮಕೈಗೊಳ್ಳುವುದರ ಜತೆಗೆ ಹೊಸದಾಗಿ ಆರಂಭಿಸಿರುವ ಮೆಣಸಿನಕಾಯಿ ಮಾರುಕಟ್ಟೆಯನ್ನು ಉತ್ತಮ ರೀತಿಯಲ್ಲಿ ನಡೆಸುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ತಿಳಿಸಿದರು.
ಸ್ಥಳೀಯ ಎಪಿಎಂಸಿ ಸಭಾಂಗಣದಲ್ಲಿ ವರ್ತಕರು, ದಲ್ಲಾಳಿಗಳು ಹಾಗೂ ತರಕಾರಿ ಮಾರಾಟಗಾರರ ಸಭೆ ನಡೆಸಿ ಸೋಮವಾರ ಮಾತನಾಡಿ, ಜಿಲ್ಲೆಯಲ್ಲಿ ಹೆಚ್ಚಿನ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯುತ್ತಿದ್ದು, ಮಾರುಕಟ್ಟೆ ಅತ್ಯಗತ್ಯವಿದೆ ಎಂದರು.
ವರ್ತಕರು, ದಲ್ಲಾಳಿಗಳು ಮತ್ತು ರೈತರು ಸಮನ್ವಯತೆ ಸಾಸಿ ಮಾರುಕಟ್ಟೆಯನ್ನು ಮುನ್ನಡೆಸಬೇಕು. ಯಾವುದೇ ಸಮಸ್ಯೆಗಳಿದ್ದರೆ ಕುಳಿತು ಮಾತನಾಡಿ ಸಮಸ್ಯೆ ಹರಿಸಿಕೊಳ್ಳಬೇಕು. ಕುಂದುಕೊರತೆಗಳನ್ನು ಎಪಿಎಂಸಿ ಅನುದಾನ ಇಲ್ಲವೇ ಸರ್ಕಾರದ ಅನುದಾನ ತಂದು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ವರ್ತಕ ನಾಗನಗೌಡ ಹರವಿ ಮಾತನಾಡಿ, ಎಪಿಎಂಸಿ ಆವರಣದಲ್ಲಿ ಕಳೆದ 15 ವರ್ಷಗಳ ಹಿಂದೆ ಟಿನ್‌ಶೆಡ್ ನಿರ್ಮಾಣ ಮಾಡಲಾಗಿದ್ದು, ಕಳಪೆ ಕಾಮಗಾರಿಯ ಕಾರಣದಿಂದ ಮಳೆಗಾಲದಲ್ಲಿ ಸೋರುತ್ತಿದೆ. ಇದರಿಂದ ನೀರು ಉತ್ಪನ್ನಗಳಿಗೆ ನುಗ್ಗಿ ಹಾಳಾಗುತ್ತಿವೆ. ಇದರಿಂದ ರೈತರಿಗೆ ನಷ್ಟವಾಗುತ್ತಿದೆ. ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಬೇಕು.
ಆವರಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಲಾರಿಗಳು ನಿಲುಗಡೆಯಾಗುತ್ತಿರುವುದರಿಂದ ರೈತರು, ವರ್ತಕರಿಗೆ ತೊಂದರೆಯಾಗುತ್ತಿದೆ. ಲಾರಿಗಳ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು. ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಶೀಘ್ರದಲ್ಲಿ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ವರ್ತಕ ವೆಂಕಯ್ಯ ದೇವನಪಲ್ಲಿ ಮಾತನಾಡಿ, ಎಪಿಎಂಸಿ ಹಿಂಭಾಗದಲ್ಲಿ ದಿನಸಿ ಅಂಗಡಿಗಳ ಮಳಿಗೆಗಳಿದ್ದು, ಹೋಲ್‌ಸೆಲ್ ವ್ಯಾಪಾರ ನಡೆಯುತ್ತಿದೆ. ಆದರೆ ಅಲ್ಲಿ ಮೂಲ ಸೌಕರ್ಯಗಳಿಲ್ಲ. ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಚರಂಡಿ ಕಳಪೆಯಾಗಿದ್ದು, ನೀರು ಹರಿದು ಹೋಗುತ್ತಿಲ್ಲ. ನಗರಸಭೆಗೆ ತೆರಿಗೆ ಕಟ್ಟುತ್ತಿದ್ದರೂ ಸೌಕರ್ಯ ನೀಡುತ್ತಿಲ್ಲ ಎಂದು ಹೇಳಿದರು.
ಸಭೆಯಲ್ಲಿ ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ಉಪಾಧ್ಯಕ್ಷ ಬಷೀರ ಅಹ್ಮದ್, ಕಾರ್ಯದರ್ಶಿ ಆದಪ್ಪಗೌಡ, ಸದಸ್ಯರಾದ ನಾರಾಯಣ, ಭೀಮರೆಡ್ಡಿ, ಹನುಮಂತ, ಸಿದ್ದನಗೌಡ ನೆಲಹಾಳ, ಕಾರ್ಖಾನೆ ಮಾಲೀಕರ ಸಂಘದ ಅಧ್ಯಕ್ಷ ವಿ.ಲಕ್ಷ್ಮಿರೆಡ್ಡಿ, ತರಕಾರಿ ಮಾರಾಟಗಾರರ ಸಂಘದ ಎನ್.ಮಹಾವೀರ, ಇಕ್ಬಾಲ್ ಅಹ್ಮದ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net