

ಬೀದರ್: ಬೀದರ್ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಅಧ್ಯಕ್ಷ ಸ್ಥಾನಕ್ಕೆ ಅನೀಲಕುಮಾರ ಪನ್ನಾಳೆ ಸೋಮವಾರ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ವರಿಷ್ಠರ ಆದೇಶದಂತೆ ಸಮಿತಿ ಕಾರ್ಯದರ್ಶಿ ಶಿವಶರಣಪ್ಪ ಮಜಗೆ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಎಪಿಎಂಸಿ ಕೊನೇ ಅವಧಿ ಇದಾಗಿದೆ. ಪನ್ನಾಳೆ 6 ತಿಂಗಳು ಅಧಿಕಾರ ನಡೆಸಿ ಇದೀಗ ರಾಜೀನಾಮೆ ನೀಡಿದ್ದು, ಇನ್ನೂ 14 ತಿಂಗಳ ಕಾಲಾವಕಾಶ ಇದೆ. ಕಳೆದ ವರ್ಷ ಜೂನ್ ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತರಲ್ಲಿ ಭಾರಿ ಪೈಪೋಟಿ ನಡೆದಿದ್ದ ಕಾರಣಕ್ಕೆ ಪಕ್ಷದ ಮುಖಂಡರು 6:14 ಅನುಪಾತದ ಸೂತ್ರ ಹೆಣೆದು ಅಧಿಕಾರ ಹಂಚಿಕೆ ಮಾಡಿದ್ದರು. ಅನೀಲಕುಮಾರ ಪನ್ನಾಳೆ ಮೊದಲ 6 ತಿಂಗಳು ಅಧ್ಯಕ್ಷರಾಗಿ, ಉಳಿದ 14 ತಿಂಗಳು ವಿಜಯಕುಮಾರ ಆನಂದೆ ಅಧ್ಯಕ್ಷರಾಗಿ ಮುಂದುವರಿಯಬೇಕು ಎನ್ನುವ ಸೂತ್ರ ಮಾಡಿದ್ದರು.
ಇದರಂತೆ 6 ತಿಂಗಳು ಪನ್ನಾಳೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ರಾಜೀನಾಮೆ ಸಲ್ಲಿಸಿದ್ದಾರೆ. ಮುಂದಿನ 14 ತಿಂಗಳಿಗೆ ವಿಜಯಕುಮಾರ ಆನಂದೆ ಅಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಆದರೂ ಬಿಜೆಪಿಯ ಪ್ರಮುಖರು ಯಾವ ತೀರ್ಮಾನ ಕೈಗೊಳ್ಳುತ್ತಾರೋ ಕಾದು ನೋಡಬೇಕು.
ಪಕ್ಷದ ವರಿಷ್ಠರ ಸೂಚನೆಯಂತೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ಸಿಕ್ಕ ಅವಧಿಯಲ್ಲಿ ಗ್ರಾಮೀಣ ರೈತರ ಅನುಕೂಲಕ್ಕಾಗಿ ಮನ್ನಳ್ಳಿ, ಕಮಠಾಣ ಹಾಗೂ ಬೆನಕನಳ್ಳಿಯಲ್ಲಿ ತಲಾ 75 ಲಕ್ಷ ರೂ.ಗಳಲ್ಲಿ ಗ್ರಾಮೀಣ ಸಂತೆ ನಿರ್ಮಿಸಲಾಗಿದೆ. ಜಮಿಸ್ತಾನಪುರ ಉಪ ಮಾರುಕಟ್ಟೆ ಪಾಂಗಣದಲ್ಲಿ ಮನೆ ನಿರ್ಮಾಣಕ್ಕೆ 140 ಹಮಾಲರಿಗೆ ಹಕ್ಕುಪತ್ರ ವಿತರಣೆ ಸೇರಿ ವಿವಿಧ ಕೆಲಸ ಮಾಡಲಾಗಿದೆ.| ಅನೀಲಕುಮಾರ ಪನ್ನಾಳೆಬೀದರ್ ಎಪಿಎಂಸಿ ಅಧ್ಯಕ್ಷ