ಎನ್‌ಸಿಡಿಎಫ್‌ಐ ನಿರ್ದೇಶಕರಾಗಿ ಬಾಲಚಂದ್ರ ಆಯ್ಕೆ

24 BGV 5
ಗುಜರಾತದ ಎನ್‌ಸಿಡಿಎಫ್‌ಐ ಆಡಳಿತ ಮಂಡಳಿ ನಿರ್ದೇಶಕರಾಗಿ ಅವಿರೋಧ ಆಯ್ಕೆಯಾದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಅವರನ್ನು ಎನ್‌ಸಿಡಿಎಫ್‌ಐ ಅಧ್ಯಕ್ಷ ಮಂಗಲಜಿತ್ ರಾಯ್ ಅಭಿನಂದಿಸಿದರು. ಎನ್‌ಡಿಡಿಬಿ ಅಧ್ಯಕ್ಷ ಮನೀಷ್ ಶಾ ಇತರರಿದ್ದರು.
Published on

ಬೆಳಗಾವಿ: ರಾಷ್ಟ್ರೀಯ ಸಹಕಾರ ಹೈನು ಮಹಾಮಂಡಳ ನಿಯಮಿತ (ಎನ್‌ಸಿಡಿಎಫ್‌ಐ)ದ ಆನಂದ್ (ಗುಜರಾತ ರಾಜ್ಯ) ಇದರ ಆಡಳಿತ ಮಂಡಳಿ ನಿರ್ದೇಶಕರಾಗಿ ಕೆಎಂಎಫ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಗುಜರಾತದ ಆನಂದ್ ನಗರದಲ್ಲಿ ಗುರುವಾರ ನಡೆದ ಆಡಳಿತ ಮಂಡಳಿ ಚುನಾವಣೆಯಲ್ಲಿ ಗುಜರಾತ್ ಸಹಕಾರ ಹಾಲು ಮಾರಾಟ ಮಹಾಮಂಡಳದಿಂದ ಶಾಮಲ್‌ಭಾಯ್ ಪಟೇಲ್, ಕರ್ನಾಟಕ ಸಹಕಾರ ಎಣ್ಣೆ ಬೀಜ ಬೆಳೆಗಾರರ ಮಹಾಮಂಡಳದಿಂದ ವೆಂಕಟರಾವ್ ನಾಡಗೌಡ, ಹರಿಯಾಣ ಸಹಕಾರ ಹೈನು ಅಭಿವೃದ್ಧಿ ಮಹಾಮಂಡಳದಿಂದ ರಣಧೀರಸಿಂಗ್ ಮತ್ತು ಕೇರಳ ರಾಜ್ಯ ಸಹಕಾರ ಹಾಲು ಮಾರಾಟ ಮಹಾಮಂಡಳದಿಂದ ಕೆ.ಎಸ್. ಮಣಿ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸಜ್ಜಲ್ ಬಿಸ್ವಾಸ್ ಪ್ರಕಟಿಸಿದರು.

ಕರ್ನಾಟಕದಿಂದ ಎನ್‌ಸಿಡಿಎಫ್‌ಐ ಆಡಳಿತ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರನ್ನು ಎನ್‌ಸಿಡಿಎಫ್‌ಐ ಅಧ್ಯಕ್ಷ ಮಂಗಲ್‌ಜಿತ್ ರಾಯ್ ಹಾಗೂ ಎನ್‌ಡಿಡಿಬಿ ಅಧ್ಯಕ್ಷ ಮನೀಷ್ ಶಾ ಅಭಿನಂದಿಸಿದ್ದಾರೆ. ಎನ್‌ಸಿಡಿಎಫ್‌ಐ ಬಾಂಬೆ ಕೋ-ಆಪ್ ಸೊಸೈಟಿ 1970ರಲ್ಲಿ ನೋಂದಾಯಿತ ರಾಷ್ಟ್ರೀಯ ಮಟ್ಟದ ಸಹಕಾರಿ ಸಂಸ್ಥೆಯಾಗಿದೆ. ದೇಶದ ಎಲ್ಲ ಸಹಕಾರ ಒಕ್ಕೂಟ, ಮಹಾಮಂಡಳ, ಭಾರತ ಸರ್ಕಾರದ ರಕ್ಷಣಾ ಇಲಾಖೆಗೆ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸರಬರಾಜು ಮಾಡಲು ಅನುಕೂಲವಾಗುವಂತೆ ಸಮನ್ವಯ ಕೆಲಸ ನಿರ್ವಹಿಸುತ್ತಿದೆ. ಇತ್ತೀಚೆಗೆ 2016ರಿಂದ ದೇಶದಾದ್ಯಂತ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಆನ್‌ಲೈನ್ ಮೂಲಕ ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net