ಎನ್‌ಎಸ್‌ಎಸ್ ಸ್ವಯಂ ಸೇವಕರಿಗೆ ಸಮವಸ್ತ್ರ ನಿಗದಿ

1
Published on

ಮೈಸೂರು: ಎನ್‌ಎಸ್‌ಎಸ್ ಸ್ವಯಂ ಸೇವಕರಿಗೆ ಸಮವಸ್ತ್ರ ನಿಗದಿ ಪಡಿಸಲಾಗುವುದು. ಇದಕ್ಕಾಗಿ ತಯಾರಿ ನಡೆದಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ರಾಜ್ಯ ಎನ್‌ಎಸ್‌ಎಸ್ ಅಧಿಕಾರಿ ಪ್ರತಾಪ್ ಲಿಂಗಯ್ಯ ಹೇಳಿದರು.

ಮೈಸೂರು ವಿವಿ ರಾಷ್ಟ್ರೀಯ ಸೇವಾ ಯೋಜನೆ ಘಟಕ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಮಾನಸಗಂಗೋತ್ರಿಯ ಲಲಿತಕಲಾ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ 2021-22ನೇ ಸಾಲಿನ ರಾಜ್ಯ ಮಟ್ಟದ 5 ದಿನದ ‘ಯುವ ಜನೋತ್ಸವ-2022’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಎನ್‌ಎಸ್‌ಎಸ್ ಅನ್ನು ಪಠ್ಯಕ್ರಮವಾಗಿ ಅಳವಡಿಸಿರುವುದು ಗಮನಾರ್ಹ ಸಂಗತಿ ಎಂದು ತಿಳಿಸಿದರು.

ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ವ್ಯಕ್ತಿತ್ವ ವಿಕಾಸನ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ಆದ್ಯತೆ ನೀಡುತ್ತದೆ. ಇದು ಸಮಾಜದಿಂದ ಎಲ್ಲವನ್ನು ಪಡೆದ ನಮಗೆ ಸಮಾಜಕ್ಕೆ ಏನನ್ನಾದರೂ ಕೊಡುಗೆ ನೀಡಲು ಸಹಕಾರಿಯಾಗಿದೆ. ಇಡೀ ದೇಶದಲ್ಲಿ ಎನ್‌ಎಸ್‌ಎಸ್ ಬಹುದೊಡ್ಡ ಸಂಘಟನೆಯಾಗಿದ್ದು, ಕರ್ನಾಟಕ ರಾಜ್ಯವೊಂದರಲ್ಲೇ 5 ಲಕ್ಷ ಸ್ವಯಂ ಸೇವಕರು ಇದ್ದಾರೆ ಎಂದರು.

ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಸರ್ಕಾರ ಪ್ರತಿ ವರ್ಷ 10 ಭಾವೈಕ್ಯತಾ ಕಾರ್ಯಕ್ರಮ, 4 ಯುವಜನೋತ್ಸವ ಕಾರ್ಯಕ್ರಮ ಆಯೋಜನೆಗೆ ಅವಕಾಶ ನೀಡಿದೆ. ಇದರಿಂದ ಮಕ್ಕಳಲ್ಲಿ ಭಾವೈಕ್ಯತೆ ಬೆಳೆಸುವ, ಸಂಸ್ಕೃತಿ ಉಳಿಸುವ ಹಾಗೂ ಸೇವಾ ಮನೋಭಾವ ಬಿತ್ತಲು ನೆರವಾಗಿದೆ ಎಂದು ಹೇಳಿದರು.

ಮೈವಿವಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಗೊಂದಲದಿಂದ ಹೊರಬರಬೇಕು. ಅಲ್ಪತೃಪ್ತಿಯೂ ಬೇಡ, ಅತಿಯಾದ ಆತ್ಮವಿಶ್ವಾಸವೂ ಬೇಡ. ಕೌಶಲ ಬಳಸಿಕೊಂಡು ಜೀವನ ಕಂಡುಕೊಳ್ಳಬೇಕು. ಪ್ರತಿಯೊಬ್ಬರೂ ಸರ್ಕಾರಿ ಕೆಲಸವನ್ನು ನಿರೀಕ್ಷೆ ಮಾಡಿಕೊಂಡು ಹೋದರೆ ಸಾಧ್ಯವಾಗಲ್ಲ. ನಾವೇ ಉದ್ಯೋಗ ಕಂಡುಕೊಳ್ಳುವ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಹೇಳಿದರು.

ಪ್ರತಿವರ್ಷ ಎನ್‌ಎಸ್‌ಎಸ್ ಅಧಿಕಾರಿಗಳು ಹಾಗೂ ಸ್ವಯಂಸೇವಕರಿಗೆ ವಿಶ್ವವಿದ್ಯಾಲಯದಿಂದ ಪ್ರಶಸ್ತಿ ನೀಡಿ ಉತ್ತೇಜನ ನೀಡಲಾಗುತ್ತಿದೆ. ಜತೆಗೆ ವಿಶ್ವವಿದ್ಯಾಲಯ ವ್ಯಾಪ್ತಿಯ 48 ಹಳ್ಳಿಗಳನ್ನು ದತ್ತು ತೆಗೆದುಕೊಂಡು ಶಿಬಿರ ನಡೆಸಲಾಗಿದೆ. ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿಗಳಿಗೆ ತರಬೇತಿ ನೀಡುವ, ತರಬೇತಿ ಕೇಂದ್ರವನ್ನು ಹೊಂದಿರುವ ವಿಶ್ವವಿದ್ಯಾಲಯ ಎಂಬ ಕೀರ್ತಿ ನಮ್ಮ ವಿವಿಗೆ ಸಲ್ಲುತ್ತದೆ ಎಂದರು.

ರಾ.ಸೆ.ಯೋ. ಪ್ರಾದೇಶಿಕ ನಿರ್ದೇಶಕ ಕೆ.ವಿ.ಖಾದ್ರಿ ನರಸಿಂಹಯ್ಯ, ಮೈವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಎ.ಪಿ.ಜ್ಞಾನಪ್ರಕಾಶ್, ಸಿಂಡಿಕೇಟ್ ಸದಸ್ಯರಾದ ಡಾ.ಇ.ಸಿ.ನಿಂಗರಾಜೇಗೌಡ, ವೈ.ಕೆ ಪವಿತ್ರಾ, ಎನ್‌ಎಸ್‌ಎಸ್ ಇಟಿಐ ಸಂಯೋಜನಾಧಿಕಾರಿ ಪ್ರೊ.ಬಿ. ಚಂದ್ರಶೇಖರ್, ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಎಂ.ಬಿ. ಸುರೇಶ್ ಇದ್ದರು.

ಸಾಂಸ್ಕೃತಿಕ ಕಾರ್ಯಕ್ರಮ
ವಿವಿಧ ವಿಶ್ವವಿದ್ಯಾಲಯಗಳ ಎನ್‌ಎಸ್‌ಎಸ್ ಘಟಕಗಳ ಸ್ವಯಂ ಸೇವಕರು ತಮ್ಮ ಪ್ರಾದೇಶಿಕ ನೃತ್ಯ, ಜಾನಪದ ಗೀತೆ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಗುಂಪು ಚರ್ಚೆ ಹಾಗೂ ಸಂವಾದ, ಕಾರ್ಯಾಗಾರ, ರಸಪ್ರಶ್ನೆ ಸ್ಪರ್ಧೆ, ಯೋಗ, ಉಪನ್ಯಾಸ, ಸಾಂಸ್ಕೃತಿಕ ಸ್ಪರ್ಧೆ, ಕ್ರೀಡಾ ಚಟುವಟಿಕೆಗಳನ್ನು ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net