ಎನ್‌ಸಿಇಆರ್‌ಟಿ ಪಠ್ಯದಲ್ಲಿ ಮೊಘಲರ ಇತಿಹಾಸ ತೆಗೆದಿದ್ದಕ್ಕೆ ಖಂಡನೆ: ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆ ಜಿಲ್ಲಾ ಕಾರ್ಯದರ್ಶಿ ನಿತಿನ್ ಆಕ್ರೋಶ

AIDSO
AIDSO LOGO
Published on

ಮೈಸೂರು: ಎನ್‌ಸಿಇಆರ್‌ಟಿ ಪಠ್ಯಪುಸ್ತಕದಿಂದ ಮೊಘಲರ ಕಾಲದ ಇತಿಹಾಸವನ್ನು ತೆಗೆದಿರುವ ಕ್ರಮವನ್ನು ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆ ಖಂಡಿಸಿದೆ.

ವೈಜ್ಞಾನಿಕ ಮತ್ತು ಧರ್ಮ ನಿರಾಪೇಕ್ಷಣಾ ಶಿಕ್ಷಣದ ಮೇಲೆ ಹೊಸ ಮತ್ತು ದುಷ್ಟ ದಾಳಿಯನ್ನು ನಡೆಯುತ್ತಿದ್ದು, ಎನ್‌ಸಿಇಆರ್‌ಟಿಯು 7ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಿಂದ ಮೊಘಲರು ಮತ್ತು ದೆಹಲಿ ಸುಲ್ತಾನರ ಕುರಿತಾದ ಎಲ್ಲ ಉಲ್ಲೇಖಗಳನ್ನು ತೆಗೆದು ಹಾಕಿದೆ.

ಅದರ ಬದಲಿಗೆ, ಪ್ರಾಚೀನ ರಾಜವಂಶಗಳ ಕುರಿತ ಅಧ್ಯಾಯವನ್ನು ಸೇರಿಸಲಾಗಿದೆ. ಅಂತಹ ಆಯ್ದ ಒತ್ತು ನೀಡಲು ಅವರು ಹಿಂದು ರಾಜವಂಶಗಳಾಗಿದ್ದವು ಎಂಬುದು ಏಕೈಕ ಕಾರಣವಾಗಿದೆ.

ಇದನ್ನು ಭಾರತೀಯ ನೀತಿ ಎಂದು ಬಣ್ಣಿಸಲಾಗಿದೆ. ಯುವ ಮನಸ್ಸುಗಳನ್ನು ನಿಯಂತ್ರಿಸುವ ಮತ್ತು ವಿಷಪೂರಿತಗೊಳಿಸುವ ಆಡಳಿತಾರೂಢ ಪಕ್ಷದ ಪ್ರಯತ್ನದ ಮತ್ತೊಂದು ದಾಳಿಯಂತೆ ಇತಿಹಾಸದ ತಿರುಚುವಿಕೆ ಹೊರಹೊಮ್ಮಿದೆ ಎಂದು ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ನಿತಿನ್ ಪ್ರಕರಟಣೆಯಲ್ಲಿ ಹೇಳಿದ್ದಾರೆ.

ಪವಿತ್ರ ಭೂಗೋಳ ಎಂಬ ಅಧ್ಯಾಯವನ್ನು ಸೇರಿಸಲಾಗಿದೆ. ಇದರಲ್ಲಿ 12 ಜ್ಯೋತಿರ್ಲಿಂಗಗಳು, ಚಾರ್ ಧಾಮ್ ಯಾತ್ರೆ ಮತ್ತು ಶಕ್ತಿ ಪೀಠಗಳಂತಹ ಹಿಂದು ಧಾರ್ಮಿಕ ಸ್ಥಳಗಳನ್ನು ಪಟ್ಟಿ ಮಾಡಲಾಗಿದೆ. ಮಹಾಕುಂಭವನ್ನು ಸಹ ನಿರ್ದಿಷ್ಟವಾಗಿ ಉಲ್ಲೇಖಿಸಲಾಗಿದೆ.

ಧಾರ್ಮಿಕ ಆಚರಣೆಗಳ ಮೇಲಿನ ಈ ಅತಿಯಾದ ಒತ್ತು ಮತ್ತು ಪಠ್ಯಪುಸ್ತಕಗಳನ್ನು ಕೇಸರೀಕರಣಗೊಳಿಸಿದ್ದು, ಜತೆಗೆ, ದೇಶದ ನವೋದಯ ಚಿಂತಕರು ವೈಜ್ಞಾನಿಕ ಇತಿಹಾಸ ಮತ್ತು ಸಮಾಜದ ಅಧ್ಯಯನವನ್ನು ಸೇರಿಸಲು ದಣಿವರಿಯದೆ ಹೋರಾಡಿದ ಧರ್ಮ ನಿರಾಪೇಕ್ಷಣಾ ಮೌಲ್ಯಗಳಿಗೆ ತದ್ವಿರುದ್ಧವಾಗಿದೆ.

ಇಂತಹ ಉದ್ದೇಶಪೂರ್ವಕವಾಗಿ ವಿನ್ಯಾಸಗೊಳಿಸಲಾದ ಬದಲಾವಣೆ ಜಾರಿಗೊಳಿಸುವ ಮೂಲಕ ಕೇಂದ್ರ ಸರ್ಕಾರವು ಪಠ್ಯಪುಸ್ತಕಗಳನ್ನು ತನ್ನ ಪಕ್ಷದ ಮುಖವಾಣಿಗಳಾಗಿ ಪರಿವರ್ತಿಸುತ್ತಿದೆ ಎಂದು ಕಿಡಿಕಾರಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net