

ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಷ್ಟ್ರೀಯ ಪಿಂಚಣಿ ಯೋಜನೆ ಜಾರಿಯಿಂದ ಸಾಕಷ್ಟು ತೊಂದರೆಯಾಗಿದ್ದು, ಕೂಡಲೇ ಎನ್‌ಪಿಎಸ್ ರದ್ದು ಮಾಡಿ ಒಪಿಎಸ್ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಎಸ್‌ಡಬ್ಲುಆರ್ ಮಜ್ದೂರ ಯೂನಿಯನ್ ವತಿಯಿಂದ ನಗರದ ರೈಲ್ವೆ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಎನ್‌ಪಿಎಸ್ ಯೋಜನೆ ಜಾರಿ ಮಾಡಿರುವುದರಿಂದ ರೈಲ್ವೆ ಇಲಾಖೆ ಮಾತ್ರವಲ್ಲದೆ ಪ್ರತಿ ಇಲಾಖೆ ನೌಕರರಿಗೆ ತೊಂದರೆ ಉಂಟಾಗಿದೆ. ಸರ್ಕಾರದ ಪ್ರತಿ ಸೌಲಭ್ಯವನ್ನು ಜನರಿಗೆ ತಲುಪಿಸುವಲ್ಲಿ ರೈಲ್ವೆ ಇಲಾಖೆ ನೌಕರರು ಸೇರಿ ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ನೂತನ ಪಿಂಚಣಿ ಯೋಜನೆ ಜಾರಿಯಿಂದ ತೊಂದರೆಗೆ ಸಿಲುಕಿಸಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ವಿವಿಧ ಇಲಾಖೆಗಳ ಜತೆಗೂಡಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಆಗ್ರಹಿಸಲಾಗಿದೆ. ಆದರೆ ಸರ್ಕಾರಗಳು ಮಾತ್ರ ಸೂಕ್ತ ಸ್ಪಂದನೆ ನೀಡುತ್ತಿಲ್ಲ. ಇದರಿಂದ ನೌಕರರು ಕೆಲಸ ಮಾಡಲು ಕಷ್ಟಕರವಾಗುತ್ತಿದೆ. ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.