

ಚಿತ್ರದುರ್ಗ: ಜೀವನ ಮೌಲ್ಯಗಳನ್ನು ರೂಢಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ರಾಷ್ಟ್ರೀಯ ಜನಸಂಖ್ಯಾ ಶಿಕ್ಷಣ ಯೋಜನೆ(ಎನ್‌ಪಿಇಪಿ)ಯಿಂದ ಶಾಲಾ ಹಂತದಿಂದ ರಾಷ್ಟ್ರಮಟ್ಟದವರೆಗೆ ಜಾನಪದ ನೃತ್ಯ ಹಾಗೂ ಪಾತ್ರಾಭಿನಯ ಸ್ಪರ್ಧೆಗಳನ್ನು ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳಲ್ಲಿ ಜಿಲ್ಲಾಮಟ್ಟದಲ್ಲಿ ಹಮ್ಮಿಕೊಳ್ಳಲಾಗಿದೆ.
ಪಠ್ಯಕಲಿಕೆಯೊಂದಿಗೆ ಪಠ್ಯೇತರ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಕೌಶಲವೃದ್ಧಿಗೆ ಅವಕಾಶವನ್ನು ಕಲ್ಪಿಸಿ ಜನಸಂಖ್ಯೆ ಮತ್ತು ಸುಸ್ಥಿರ ಅಭಿವೃದ್ಧಿ ನಡುವಿನ ಅಂತರ ಸಂಬಂಧದ ಬಗ್ಗೆ ಅರಿವು ಮೂಡಿಸಲು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಥೀಮ್ ಆಧರಿಸಿ ಈ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಪಾತ್ರಾಭಿನಯ ಸ್ಪರ್ಧೆಯಲ್ಲಿ ಸರ್ಕಾರಿ, ಅನುದಾನಿತ, ಕೆಜಿಬಿವಿ ಹಾಗೂ ಆದರ್ಶ ಪ್ರೌಢಶಾಲೆಗಳ 9ನೇ ತರಗತಿ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ. ಪ್ರತಿ ತಂಡದಲ್ಲಿ 4-5 ವಿದ್ಯಾರ್ಥಿಗಳು ಒಂದು ಥೀಮ್ ಆಯ್ಕೆ ಮಾಡಿಕೊಂಡು 5-6 ನಿಮಿಷದ ಅವಧಿಯಲ್ಲಿ ಪಾತ್ರಾಭಿನಯವನ್ನು ಹಿಂದಿ/ಇಂಗ್ಲಿಷ್‌ನಲ್ಲಿ ಪ್ರಸ್ತುತಪಡಿಸಬೇಕು.
ಜಾನಪದ ನೃತ್ಯ ಸ್ಪರ್ಧೆಯಲ್ಲಿ ಸರ್ಕಾರಿ ಪ್ರೌಢಶಾಲೆಗಳ 8 ಮತ್ತು 9 ನೇ ತರಗತಿಯ 4-6 ವಿದ್ಯಾರ್ಥಿಗಳು ಪ್ರತಿ ತಂಡದಲ್ಲಿ ಭಾಗವಹಿಸಲು ಅವಕಾಶವಿದೆ. ಯಾವುದಾದರೊಂದು ಥೀಮ್ ಆಯ್ಕೆ ಮಾಡಿಕೊಂಡು ಐದಾರು ನಿಮಿಷದ ಅವಧಿಯಲ್ಲಿ ಜಾನಪದ ನೃತ್ಯವನ್ನು ಸ್ಥಳೀಯ ಭಾಷೆಯಲ್ಲಿ ಪ್ರಸ್ತುತ ಪಡಿಸಬಹುದು.
ಪ್ರತಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ತಂಡ ಮುಂದಿನ ಹಂತಕ್ಕೆ ಭಾಗವಹಿಸಲು ಅರ್ಹತೆ ಪಡೆಯಲಿದೆ.
ಪಾತ್ರಾಭಿನಯ ಸ್ಪರ್ಧೆಗೆ ಇಂಟರ್‌ನೆಟ್ ಮತ್ತು ಮಾಧ್ಯಮದ ಸುರಕ್ಷಿತ ಬಳಕೆ, ಭಾವನಾತ್ಮಕ ಯೋಗಕ್ಷೇಮ ಮತ್ತು ಮಾನಸಿಕ ಆರೋಗ್ಯ, ಮೌಲ್ಯಗಳು ಮತ್ತು ಜವಾಬ್ದಾರಿಯುತ ಪೌರತ್ವ, ಲಿಂಗ ಸಮಾನತೆ, ಪೌಷ್ಟಿಕತೆ, ಆರೋಗ್ಯ ಮತ್ತು ನೈರ್ಮಲ್ಯ, ಮಾದಕ ವಸ್ತುವಿನ ದುರುಪಯೋಗ ತಡೆಗಟ್ಟುವಿಕೆ ಮತ್ತು ನಿರ್ವಹಣೆ, ಆರೋಗ್ಯಕರ ಜೀವನಶೈಲಿ, ಹಿಂಸೆ ವಿರುದ್ಧ ಸುರಕ್ಷತೆ ಮತ್ತು ಭದ್ರತೆ ಇತ್ಯಾದಿ ಹಾಗೂ ಜಾನಪದ ನೃತ್ಯಕ್ಕೆ ಪರಿಸರ ಸಂರಕ್ಷಣೆ(ತ್ಯಾಜ್ಯ ಕಡಿಮೆ,ಮರುಬಳಕೆ)ಸೇರಿ 11-12 ಥಿಮ್‌ಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು ಪ್ರಸ್ತುತಪಡಿ ಸಬಹುದಾಗಿದೆ.
-----
ಐದು ಹಂತಗಳಲ್ಲಿ ಸ್ಪರ್ಧೆ
ಶಾಲೆ, ತಾಲೂಕು, ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರ ಹಂತದಲ್ಲಿ ಸ್ಪರ್ಧೆಗಳು ನಡೆಯಲಿವೆ. ಪಾತ್ರಾಭಿನಯ ಸ್ಪರ್ಧೆಗೆ 5 ವಿದ್ಯಾರ್ಥಿಗಳ ತಂಡದಂತೆ ಚಿತ್ರದುರ್ಗ ಜಿಲ್ಲೆ 119 ಸರ್ಕಾರಿ, 181ಅನುದಾನಿತ ಪ್ರೌಢಶಾಲೆಗಳಿಂದ 1500 ವಿದ್ಯಾಥಿಗಳು ಹಾಗೂ ಜಾನಪದ ನೃತ್ಯ ಸ್ಪರ್ಧೆಗೆ 119 ಸರ್ಕಾರಿ ಪ್ರೌಢಶಾಲೆಗಳಿಂದ 6 ವಿದ್ಯಾರ್ಥಿಗಳ ತಂಡದಂತೆ 714 ವಿದ್ಯಾರ್ಥಿಗಳು ಭಾಗವಹಿಸುವ ಗುರಿ ನಿಗದಿಪಡಿಸಲಾಗಿದೆ.
ಎಸ್. ಬಸವರಾಜು, ಎನ್‌ಪಿಇಪಿ ಜಿಲ್ಲಾ ನೋಡಲ್ ಅಧಿಕಾರಿ, ಚಿತ್ರದುರ್ಗ.
---
ಕೌಶಲ ಬೆಳೆಸಲು ಸಹಕಾರಿ
ವಿದ್ಯಾರ್ಥಿಗಳಲ್ಲಿ ಮಾತುಗಾರಿಕೆ,ಅಭಿನಯ ಕೌಶಲ, ಸಂವೇದನಾಶೀಲತೆ ಬೆಳೆಸಲು ಸ್ಪರ್ಧೆ ಸಹಕಾರಿಯಾಗಲಿದೆ. ಅಕ್ಟೋಬರ್‌ನೊಳಗೆ ಜಿಲ್ಲಾ ಹಂತದ ಸ್ಪರ್ಧೆ ನಡೆಯಲಿದ್ದು, ಶಾಲೆ ಮತ್ತು ತಾಲೂಕು ಹಂತದಲ್ಲಿ ಕಡ್ಡಾಯವಾಗಿ ಸ್ಪರ್ಧಾ ಕಾರ್ಯಕ್ರಮ ಆಯೋಜಿಸಬೇಕಿದೆ.
ಎಂ. ನಾಸಿರುದ್ದೀನ್, ಡಯಟ್ ಪ್ರಾಚಾರ್ಯ, ಚಿತ್ರದುರ್ಗ.