ಎನ್‌ಟಿಎಂಎಸ್ ಕನ್ನಡ ಶಾಲೆ ಉಳಿವು ಅನುಮಾನ

8
Published on

ಆರ್.ಕೃಷ್ಣ ಮೈಸೂರು
ಹಲವು ಹೋರಾಟಗಳ ಬಳಿಕ ಮಹಾರಾಣಿ ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆಯ ಕಟ್ಟಡಕ್ಕೆ ಸ್ಥಳಾಂತರಗೊಂಡಿರುವ ಶತಮಾನದ ಮಹಾರಾಣಿಯ ಹೆಣ್ಣು ಮಕ್ಕಳ ಮಾದರಿ ಶಾಲೆ (ಎನ್‌ಟಿಎಂಎಸ್)ಗೆ ಈಗ ಹೊಸ ಸವಾಲು ಎದುರಾಗಿದೆ.
ವಿವಿಧ ಕಡೆಗಳಿಂದ ಶಾಲೆಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರಲು ಈ ವರ್ಷ ವಾಹನ ವ್ಯವಸ್ಥೆ ಇಲ್ಲದಿರುವುದರಿಂದ ಮಕ್ಕಳು ಶಾಲೆಗೆ ಬರುವುದು ಅನುಮಾನವಾಗಿದೆ. ಇದರಿಂದ ಶಾಲೆ ಉಳಿಸಬೇಕೆಂದು ಮಾಡಿದ ಹೋರಾಟ ಈಗ ವ್ಯರ್ಥವಾಗುವುದೇ ಎಂಬ ಮಾತುಗಳು ಕೇಳಿಬರುತ್ತಿವೆ.
ಈ ಹಿಂದೆ ಶಾಲಾ ಕಟ್ಟಡ ಇದ್ದ ಜಾಗವನ್ನು ಸರ್ಕಾರ ವಿವೇಕ ಸ್ಮಾರಕ ನಿರ್ಮಾಣದ ಉದ್ದೇಶಕ್ಕಾಗಿ ನೀಡಿದ ಬಳಿಕ, ಪಕ್ಕದ ಮಹಾರಾಣಿ ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆಗೆ (ಮೂಲ ಶಾಲೆ ಇದ್ದ ಜಾಗ) ಸ್ಥಳಾಂತರಿಸಿ 5 ಕೊಠಡಿಗಳನ್ನು ನೀಡಲಾಯಿತು. 1ರಿಂದ 7ನೇ ತರಗತಿವರೆಗೆ 55 ವಿದ್ಯಾರ್ಥಿಗಳು ಇದ್ದು, ಅಲ್ಲಿಯೇ ಬೋಧನೆ ನಡೆದಿತ್ತು.
ವಿದ್ಯಾರ್ಥಿಗಳಿಗೆ ಸಮಸ್ಯೆ:
ಎನ್‌ಟಿಎಂ ಶಾಲೆಗೆ ಸ್ಥಳೀಯ ಪಾಲಕರು ತಮ್ಮ ಮಕ್ಕಳನ್ನು ಸೇರಿಸದೆ ಇರುವುದರಿಂದ ಹೊರಗಿನ ಮಕ್ಕಳೇ ಆಧಾರ. ಹೀಗಾಗಿ ಕೆ.ಆರ್.ಎಸ್. ರಸ್ತೆಯಲ್ಲಿರುವ ಏಕಲವ್ಯನಗರ, ಮಂಟಿ, ಹೊಸ ಬಡಾವಣೆಗಳಿಂದ ವಿದ್ಯಾರ್ಥಿಗಳನ್ನು ವಾಹನದಲ್ಲಿ ಕರೆತರಲಾಗುತ್ತಿತ್ತು. ಇದಕ್ಕಾಗಿ ಹಲವು ವರ್ಷಗಳಿಂದ ಪತ್ರಿಕೋದ್ಯಮಿ ರಾಜಶೇಖರ ಕೋಟಿ ಅವರು ವಾಹನದ ವೆಚ್ಚ ಭರಿಸುತ್ತಿದ್ದರು. ಕಳೆದ ವರ್ಷ ಶಾಲೆ ಸ್ಥಳಾಂತರಗೊಂಡ ಬಳಿಕ ಸ್ಕೌಟ್ಸ್ ಆ್ಯಂಡ್ ಗೈಡ್ಸ್, ವಿದ್ಯಾವರ್ಧಕ ಸಂಘದಿಂದ ಕೆ.ಗುಂಡಪ್ಪಗೌಡ ಅವರು ಶ್ರೀ ರಾಮಕೃಷ್ಣ ಆಶ್ರಮದವರ ಸಹಕಾರದಿಂದ ವಾಹನ ಸೌಲಭ್ಯ ಕಲ್ಪಿಸಿದ್ದರು. ಆದರೆ ಒಂದು ವರ್ಷದವರೆಗೆ ಸೌಲಭ್ಯ ನೀಡಲು ಒಪ್ಪಂದವಾಗಿದ್ದು, ಅದರಂತೆ ಈ ವರ್ಷದಿಂದ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಿದೆ.
ಲಕ್ಷಾಂತರ ರೂ. ಕಾಮಗಾರಿ:
ಮಹಾರಾಣಿ ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆ ಕಟ್ಟಡಕ್ಕೆ ಸ್ಥಳಾಂತರಗೊಂಡ ಎನ್‌ಟಿಎಂ ಶಾಲೆಗೆ ಶ್ರೀ ರಾಮಕೃಷ್ಣ ಆಶ್ರಮದಿಂದ ಸುಮಾರು 13 ಲಕ್ಷ ರೂ. ವೆಚ್ಚದಲ್ಲಿ ಶೌಚಗೃಹ, ಕುಡಿಯುವ ನೀರಿನ ಸೌಲಭ್ಯ, ಮೇಜು, ಕುರ್ಚಿ, ಕಟ್ಟಡ ದುರಸ್ತಿ, ಬಣ್ಣ ಸೇರಿದಂತೆ ಇನ್ನಿತರ ಸೌಲಭ್ಯ ಕಲ್ಪಿಸಿಕೊಡಲಾಗಿದೆ. ಅಲ್ಲದೆ, ನಗರಪಾಲಿಕೆ ಮಾಜಿ ಸದಸ್ಯ ಡಿ.ನಾಗಭೂಷಣ್ ಸೇರಿದಂತೆ ಇನ್ನಿತರರ ಸಹಾಯದಿಂದ ಕಳೆದ ಬಾರಿ ಸಮವಸ್ತ್ರ, ಬ್ಯಾಗ್, ಪುಸ್ತಕ, ನೋಟ್ಸ್, ಪೆನ್ನು ಇನ್ನಿತರ ಸಲಕರಣೆಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗಿತ್ತು. ಆದರೆ ಈ ವರ್ಷ ಶಾಲೆಗೆ ವಿದ್ಯಾರ್ಥಿಗಳನ್ನು ಕರೆತರುವುದೇ ಸಮಸ್ಯೆ ಅಗಿರುವುದರಿಂದ ಮುಂದೆ ಏನು ಎನ್ನುವ ಚಿಂತೆ ಶಾಲೆ ಪರ ಹೋರಾಟಗಾರರನ್ನು ಕಾಡತೊಡಗಿದೆ.
ಮಕ್ಕಳ ಸಂಖ್ಯೆ ಕುಸಿತ:
1ರಿಂದ 7ನೇ ತರಗತಿವರೆಗೆ ಇರುವ ಶಾಲೆಯಲ್ಲಿ ಕಳೆದ ವರ್ಷ 55 ವಿದ್ಯಾರ್ಥಿಗಳು ಇದ್ದರು. 1, 3, 5 ಮತ್ತು 6ನೇ ತರಗತಿಯಲ್ಲಿ ತಲಾ 7, ಎರಡನೇ ತರಗತಿಗೆ ಒಬ್ಬ, 4 ಹಾಗೂ 7ನೇ ತರಗತಿಗೆ ತಲಾ 13 ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇದ್ದರು.
7ನೇ ತರಗತಿಯಲ್ಲಿ ಇದ್ದ 13 ವಿದ್ಯಾರ್ಥಿಗಳು ಉತ್ತೀರ್ಣರಾಗಿ 8ನೇ ತರಗತಿಗೆ ಬೇರೆ ಶಾಲೆಗೆ ತೆರಳಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳ ಸಂಖ್ಯೆ ಕುಸಿದಿದೆ. 1ನೇ ತರಗತಿಗೆ ಇದುವರೆಗೆ ಯಾರೂ ದಾಖಲಾಗಿಲ್ಲ. ವಾಹನ ವ್ಯವಸ್ಥೆ ಇಲ್ಲದಿದ್ದರೆ ಸುಮಾರು 10 ಕಿ.ಮೀ. ದೂರದ ಏಕಲವ್ಯನಗರ, ಮಂಟಿಯಿಂದ ವಿದ್ಯಾರ್ಥಿಗಳು ಸ್ವಂತ ಅಥವಾ ನಗರ ಸಾರಿಗೆ ಬಸ್ ಮೂಲಕ ಬರುವುದು ಕಷ್ಟವಾಗಲಿದೆ. ಇದರಿಂದ ಇನ್ನಿತರ ತರಗತಿಗಳಿಗೂ ವಿದ್ಯಾರ್ಥಿಗಳು ನಿರೀಕ್ಷಿತ ಪ್ರಮಾಣದಲ್ಲಿ ಬರುವುದು ಕಷ್ಟ ಎನ್ನಲಾಗುತ್ತಿದೆ.
ತಿಂಗಳಿಗೆ 43 ಸಾವಿರ ರೂ. ವೆಚ್ಚ:
ನಗರ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಲು ಪ್ರತಿ ತಿಂಗಳು 43 ಸಾವಿರ ರೂ.ಗಳನ್ನು ಕೆಎಸ್‌ಆರ್‌ಟಿಸಿಗೆ ಪಾವತಿಸಬೇಕಿದೆ. ಅಲ್ಲದೆ, ಎರಡು ತಿಂಗಳು ಹಣ ಮುಂಗಡವಾಗಿ ನೀಡಬೇಕಿದೆ. ಈಗ ಬಸ್‌ಗಳು ಸಾತಗಳ್ಳಿ ಡಿಪೋದಿಂದ ಸಂಚರಿಸಬೇಕಾಗಿರುವುದರಿಂದ ಕಿಲೋ ಮೀಟರ್ ಲೆಕ್ಕ ಇನ್ನಷ್ಟು ಹೆಚ್ಚಾಗಲಿದೆ. ಶಾಲೆಗೆ ಬರುವ ಮಕ್ಕಳ ಪಾಲಕರು, ಕೂಲಿ ಕೆಲಸ ಮಾಡುವುದರಿಂದ ಇಷ್ಟು ಹಣ ಪಾವತಿಸಲು ಕಷ್ಟ. ಹಾಗಾಗಿ ವಿದ್ಯಾರ್ಥಿಗಳನ್ನು ಸ್ಥಳೀಯ ಶಾಲೆಗೆ ದಾಖಲಿಸುವ ಚಿಂತನೆಯಲ್ಲಿದ್ದಾರೆ ಎನ್ನಲಾಗುತ್ತಿದೆ.

ಕರ್ನಾಟಕ ಪಬ್ಬಿಕ್ ಶಾಲೆಗೆ ಆಗ್ರಹ
ಎನ್‌ಟಿಎಂ ಶಾಲೆ ಕನ್ನಡ ಮಾಧ್ಯಮ ಆಗಿರುವುದರಿಂದ ಸ್ಥಳೀಯರು ಯಾರೂ ತಮ್ಮ ಮಕ್ಕಳನ್ನು ಸೇರಿಸಲು ಮುಂದೆ ಬರುತ್ತಿಲ್ಲ. ಇನ್ನು ದೂರದ ಬಡಾವಣೆಗಳಿಂದ ಮಕ್ಕಳನ್ನು ಕರೆತರಲು ವಾಹನ ಸೌಲಭ್ಯ ಸಮಸ್ಯೆ ಕಾಡುತ್ತಿದೆ. ಹಾಗಾಗಿ ಎನ್‌ಟಿಎಂ ಶಾಲೆಯನ್ನು ಸರ್ಕಾರದ ಆಂಗ್ಲ ಮಾಧ್ಯಮದ ಕರ್ನಾಟಕ ಪಬ್ಲಿಕ್ ಶಾಲೆ(ಕೆಪಿಎಸ್) ಆಗಿ ಪರಿವರ್ತಿಸಬೇಕು ಎನ್ನುವ ಒತ್ತಾಯವೂ ಕೇಳಿಬರುತ್ತಿದೆ.
ಕೆಪಿಎಸ್‌ಗೆ ಬೇಡಿಕೆ ಇರುವುದರಿಂದ ಬಡ ಹಾಗೂ ಮಧ್ಯಮ ವರ್ಗದ ಮಕ್ಕಳಿಗೆ ಅನುಕೂಲವಾಗಲಿದೆ. ಅಕ್ಕಪಕ್ಕದಲ್ಲಿ ಖಾಸಗಿ ಶಾಲೆಗಳು ಇದ್ದರೂ ದುಬಾರಿ ಶುಲ್ಕ ಕೊಟ್ಟು ಸೇರಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಕರ್ನಾಟಕ ಪಬ್ಲಿಕ್ ಶಾಲೆ ಮಾಡಿ, ದೆಹಲಿ ಮಾದರಿ ಕಟ್ಟಡ ನಿರ್ಮಿಸಿಕೊಡಬೇಕು ಎನ್ನುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲು ನಿರ್ಧರಿಸಲಾಗಿದೆ.

ಪಾಲಕರ ಸ್ಪಂದನೆ ಬೇಕಿದೆ
ಕನ್ನಡ ಶಾಲೆ ಉಳಿಯಬೇಕೆಂದು ಹೋರಾಟ ನಡೆದರೂ ಪಾಲಕರಿಂದ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ. ಹಿಂದೆ ರಾಜಶೇಖರ ಕೋಟಿ ಅವರು ವಾಹನ ಸೌಲಭ್ಯ ಕಲ್ಪಿಸುತ್ತಿದ್ದರು. ಕಳೆದ ವರ್ಷ ಗುಂಡಪ್ಪಗೌಡರು ಕಲ್ಪಿಸಿದ್ದರು. ಶ್ರೀ ರಾಮಕೃಷ್ಣ ಆಶ್ರಮದಿಂದಲೂ ಮೂಲಸೌಕರ್ಯ ಕಲ್ಪಿಸಲಾಗಿದೆ. ಆದರೆ ವಿದ್ಯಾರ್ಥಿಗಳೇ ನಿರೀಕ್ಷಿತ ಪ್ರಮಾಣದಲ್ಲಿ ಬರುತ್ತಿಲ್ಲ. ಶಿಕ್ಷಣ ಇಲಾಖೆ ಅಧಿಕಾರಿಗಳು ಮುತುವರ್ಜಿ ವಹಿಸಬೇಕಿದೆ.
ಡಿ.ನಾಗಭೂಷಣ್
ನಗರಪಾಲಿಕೆ ಮಾಜಿ ಸದಸ್ಯ

ದಾಖಲಾತಿಗೆ ಪ್ರಯತ್ನ
ಎನ್‌ಟಿಎಂ ಶಾಲೆಗೆ ಸ್ಥಳೀಯ ವಿದ್ಯಾರ್ಥಿಗಳು ದಾಖಲಾಗುತ್ತಿಲ್ಲ. ದೂರದಿಂದ ಮಕ್ಕಳನ್ನು ಕರೆತರಲು ವಾಹನ ವ್ಯವಸ್ಥೆ ಇಲ್ಲ. ಹಾಗಾಗಿ ದಾಖಲಾತಿ ಕಡಿಮೆ ಆಗಿದ್ದು, ದಾಖಲಾತಿಗೆ ಕ್ರಮವಹಿಸಲು ಬಿಇಒಗೆ ತಿಳಿಸಲಾಗಿದೆ. ಸಂಘ-ಸಂಸ್ಥೆಗಳ ಸಭೆ ನಡೆಸಲಾಗಿದ್ದು, ದಾಖಲಾತಿ ಆಂದೋಲನಾ ನಡೆಸಲು ಉದ್ದೇಶಿಸಲಾಗಿದೆ. ಕನ್ನಡ ಮಾಧ್ಯಮ ಆಗಿರುವುದರಿಂದ ಪಾಲಕರು ಮಕ್ಕಳ ದಾಖಲಾತಿಗೆ ಹಿಂಜರಿಯುತ್ತಿದ್ದಾರೆ. ಹಾಗಾಗಿ ಆಂಗ್ಲ ಮಾಧ್ಯಮ ಮಾಡುವಂತೆ ಸರ್ಕಾರಕ್ಕೆ ಜೂನ್ 15 ಒಳಗೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ.
ರಾಮಚಂದ್ರರಾಜೇ ಅರಸ್
ಡಿಡಿಪಿಐ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net