

ಬಳ್ಳಾರಿ : ಎನ್‌ಟಿಎ ಯನ್ನು ರದ್ದುಪಡಿಸಿ ಮತ್ತು ರಾಜ್ಯಮಟ್ಟದಲ್ಲಿಯೇ ವೈದ್ಯಕೀಯ ಪ್ರವೇಶ ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿ ಇಲ್ಲಿನ ಜಿಲ್ಲಾಸ್ಪತ್ರೆ ಮುಂಭಾಗದಲ್ಲಿ ಗುರುವಾರ ಪ್ರತಿಭಟಿಸಿದರು.
ಎಐಡಿಎಸ್‌ಒ ಜಿಲ್ಲಾಧ್ಯಕ್ಷ ಕೆ. ಈರಣ್ಣ ಮಾತನಾಡಿ, ನೀಟ್ ಪರೀಕ್ಷೆಯಲ್ಲಿ ನಡೆದ ಗಂಭೀರ ಪ್ರಮಾಣದ ಅವ್ಯವಹಾರವನ್ನು ಚಿಕ್ಕದೆಂದು ಬಿಂಬಿಸಲು ಶಿಕ್ಷಣ ಸಚಿವಾಲಯ ಮತ್ತು ಎನ್‌ಟಿಎ ಪ್ರಯತ್ನಿಸುತ್ತಿದೆ. ಪರೀಕ್ಷಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಪವಿತ್ರತೆಯನ್ನು ಕಾಪಾಡಲು ಪರೀಕ್ಷೆ ನಡೆದ ಮರುದಿನವೇ ಅದನ್ನು ರದ್ದುಪಡಿಸಿ ಸಿಬಿಐಗೆ ಒಪ್ಪಿಸಲಾಗಿದೆ. ಈ ನಡೆಯು ಸಾಕಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಪರೀಕ್ಷಾ ಕೇಂದ್ರಗಳಿಗೆ ತಲುಪಲು ದೂರದ ಪ್ರಯಾಣ, ವಸತಿ, ಅಧಿಕ ಪ್ರಮಾಣದ ಪರೀಕ್ಷಾ ಶುಲ್ಕ ಸೇರಿದಂತೆ ಹಲವು ಅಭ್ಯರ್ಥಿಗಳ ವೆಚ್ಚಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು. ಎಲ್ಲದಕ್ಕೂ ಮಿಗಿಲಾಗಿ ಎನ್‌ಟಿಎ ಪ್ರದರ್ಶಿಸುತ್ತಿರುವ ಬೇಜವಾಬ್ದಾರಿ, ಅಸಮರ್ಥತೆ ಮತ್ತು ಪಾರದರ್ಶಕತೆಯ ಕೊರತೆಯು ಲಕ್ಷಾಂತರ ಅಭ್ಯರ್ಥಿಗಳ ಭವಿಷ್ಯವನ್ನು ಅತಂತ್ರಕ್ಕೆ ದೂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರಕರಣವು ತಾರ್ಕಿಕ ಅಂತ್ಯ ತಲುಪುವವರೆಗೂ ನೀಟ್ ಕೌನ್ಸಿಲಿಂಗ್ ತಡೆಹಿಡಿಯಬೇಕು. ನೆಟ್ ಮರುಪರೀಕ್ಷೆಯ ದಿನಾಂಕವನ್ನು ಕೂಡಲೇ ಪ್ರಕಟಿಸಬೇಕು ಎಂದು ಒತ್ತಾಯಿಸಿದರು.